ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ
ಬೆಂಗಳೂರು, ಜನವರಿ 25; 73ನೇ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಕವಿ ದಿ. ಸಿದ್ದಲಿಂಗಯ್ಯ ಸೇರಿದಂತೆ ಕರ್ನಾಟಕದ ಐವರು ಸಾಧಕರಿಗೆ ಪ್ರಶಸ್ತಿ ಲಭಿಸಿದೆ.
ಮಂಗಳವಾರ ಕೇಂದ್ರ ಸರ್ಕಾರ 2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಿಸಿದೆ. ಬಂಡಾಯ ಸಾಹಿತಿ, ದಲಿತ ಕವಿ ಎಂದೇ ಖ್ಯಾತಿ ಪಡೆದಿದ್ದ ಡಾ. ಸಿದ್ದಲಿಂಗಯ್ಯಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಡಾ. ಸಿದ್ದಲಿಂಗಯ್ಯ ಚಿಕಿತ್ಸೆ ಫಲಕಾರಿಯಾಗದೆ ಜೂನ್ 11, 2021ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಪ್ರಶಸ್ತಿ ಪಡೆದ ಸಾಧಕರು; ಕರ್ನಾಟಕದ ನಾಲ್ವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಇಂಜಿನಿಯರಿಂಗ್), ಎಚ್. ಆರ್. ಕೇಶವಮೂರ್ತಿ (ಕಲೆ), ಅಬ್ದುಲ್ ಖಾದರ್ ನಾದಕಟ್ಟಿನ್, ಅಮೈ ಮಹಾಲಿಂಗ ನಾಯ್ಕ (ಕೃಷಿ), ಡಾ. ಸಿದ್ದಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ) ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಅಬ್ದುಲ್ ಖಾದರ್ ನಾದಕಟ್ಟಿನ್ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ರೈತರು. ಕೃಷಿ ವಿಜ್ಞಾನಿಗಳೆಂದೇ ಪ್ರಸಿದ್ಧಿ ಪಡೆದಿದ್ದಾರೆ. ಬಿತ್ತನೆ ಮಾಡುವ ಕೂರಿಗೆ ಸಂಶೋಧನೆ ಮಾಡಿದ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಗೌರವ ಸಿಕ್ಕಿದೆ.
ಅಮೈ ಮಹಾಲಿಂಗ ನಾಯ್ಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ನಿವಾಸಿ. ಪ್ರಗತಿಪರ ಕೃಷಿಕರು, ಕೃಷಿ ಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂದು ತೋರಿಸಿಕೊಟ್ಟವರು.
ಹಿಂದಿನ ತಲೆಮಾರಿನ ಜನರಂತೆ ಸುರಂಗ ವ್ಯವಸ್ಥೆ ನೀರಿನಲ್ಲಿ ನಂಬಿಕೆ ಇಟ್ಟು, ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ನೀರು ತಂದು ಕೃಷಿ ಮಾಡುತ್ತಿರುವವರು. ಏಕಾಂಗಿಯಾಗಿ 7 ಸುರಂಗಳಗಳನ್ನು ಕೊರೆದ ಸಾಹಸಿ ಮಹಾಲಿಂಗ ನಾಯ್ಕ.
ಮುಖ್ಯಮಂತ್ರಿಗಳ ಅಭಿನಂದನೆ; ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. "ಪದ್ಮಶ್ರೀ ಪುರಸ್ಕ್ರತರಿಗೆ ಹಾರ್ದಿಕ ಅಭಿನಂದನೆಗಳು. ನಾಡಿನ ಸಮಸ್ತ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
"ವಿವಿಧ ಕ್ಷೇತ್ರದಲ್ಲಿ ಸಾಧನೈಗೈದ ಕನ್ನಡದ ಹೆಮ್ಮೆಯ ಸಾಧಕರುಗಳಾದ ಶ್ರೀ ಹೆಚ್. ಆರ್. ಕೇಶವಮೂರ್ತಿ, ಶ್ರೀ ಅಬ್ದುಲ್ ಖಾದಿರ್ ನಾಡಕಟ್ಟಿನ್, ಶ್ರೀ ಅಮಾಯಿ ಮಹಾಲಿಂಗ ನಾಯ್ಕ್ ಹಾಗೂ ಡಾ. ಸಿದ್ದಲಿಂಗಯ್ಯ (ಮರಣೋತ್ತರ) ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಅತೀವ ಸಂತಸ ತಂದಿದೆ" ಎಂದು ಹೇಳಿದ್ದಾರೆ.












Click it and Unblock the Notifications