ಬಳ್ಳಾರಿಯಲ್ಲಿ ಆಮ್ಲಜನಕ ಸೌಲಭ್ಯವುಳ್ಳ ಸಾವಿರ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭ
ಬೆಂಗಳೂರು, ಮೇ 19: ಜೆಎಸ್‍ಡಬ್ಲ್ಯೂ ಸ್ಟೀಲ್ ಸಂಸ್ಥೆ ವತಿಯಿಂದ 1000 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು.
ಉದ್ಘಾಟನೆ ನಂತರ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಈ ಪ್ರಯತ್ನದಲ್ಲಿ ಖಾಸಗಿ ಸಂಸ್ಥೆಗಳೂ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದರು. ಕೊರೊನಾ 2ನೇ ಅಲೆಯ ಸಂಕಟದ ಪರಿಸ್ಥಿತಿಯಲ್ಲಿ ಈ ಕೋವಿಡ್ ಕೇರ್ ಸೌಲಭ್ಯ ಈ ಭಾಗದ ಜನರ ಸಂಜೀವಿನಿಯಾಗಲಿದೆ ಎಂದರು.
ಆಸ್ಪತ್ರೆಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ಜೆ.ಎಸ್.ಡಬ್ಲ್ಯು ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್‍ಲೈನ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯ ಜವಾಬ್ದಾರಿಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ. ವೈದ್ಯರು/ತಜ್ಞರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ, ಮೇಲ್ವಿಚಾರಕರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಇದ್ದು, ವಿವಿಧ ಪಾಳಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದಾರೆ.

ಆಸ್ಪತ್ರೆಗಳ ಮೂಲಸೌಕರ್ಯ ಬಲಪಡಿಸುವ ಪ್ರಕ್ರಿಯೆ ಮುಂದುವರೆದಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತಿದೆ ಎಂದು ಸಿಎಂ ವಿವರಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆ ಸರಿದೂಗಿಸಲು ಮೂರು ಅಂಶಗಳ ಕಾರ್ಯತಂತ್ರ ರೂಪಿಸಲಾಗಿದೆ. ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರುಗಳ ಮೂಲಕ ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಖಾಸಗಿ ಕಂಪೆನಿಗಳು, ಸ್ವಯಂ ಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ನಾಗರಿಕ ಬಂಧುಗಳು ಕೋವಿಡ್ ನಿರ್ವಹಣೆಯಲ್ಲಿ ಕೈಜೋಡಿಸುತ್ತಿರುವುದು ಮಾದರಿ ಬೆಳವಣಿಗೆ ಎಂದು ಶ್ಲಾಘಿಸಿದರು.












Click it and Unblock the Notifications