R.Ashoka: ಸಿದ್ದರಾಮಯ್ಯ ಸಿಎಂ ಆದಾಗೆಲ್ಲ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ
ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ ಪ್ರಕರಣ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗಲೆಲ್ಲ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ ಎಂದು ಆರೋಪಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಲಂಚಕೋರತನಕ್ಕೆ ಬೇಸತ್ತು ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆ ಮುಗಿಯುವ ಮುನ್ನವೇ ಈಗ ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದ ನಿವಾಸಿ ಸಿವಿಲ್ ಎಂಜಿನಿಯರ್ ಸಚಿನ್ ಮಾನಪ್ಪ ಪಾಂಚಾಳ್ (26) ಕೂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ, ಕಲಬುರಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ ಸೇರಿ ಎಂಟು ಮಂದಿ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಡೆತ್‌ನೋಟ್ ಬರೆದಿಟ್ಟಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ. ಎರಡು ಪ್ರಾಮಾಣಿಕ ಗುತ್ತಿಗೆದಾರರ ಆತ್ಮಹತ್ಯೆಗೆ ಕಾರಣವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಸಾವುಗಳಿಗೆ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತನಿಖೆ ಎದುರಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನೂ ಕರುಣಿಸಿ ನತದೃಷ್ಟ ಕುಟುಂಬಗಳನ್ನು ಅನಾಥವಾಗಿಸಲು ಹೊರಟಿದೆ. ಪ್ರತಿಯೊಂದು ವಿಷಯದಲ್ಲೂ ಅನಗತ್ಯ ಮೂಗು ತೂರಿಸಿ ತಮ್ಮ ನಡೆ, ನುಡಿಗಳಲ್ಲಿ ದಾಷ್ಟ್ಯತನ ಪ್ರದರ್ಶಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂಬುದು ಆತ್ಮಹತ್ಯೆಗೊಳಗಾದ ದುರ್ದೈವಿ ಗುತ್ತಿಗೆದಾರ ಸಚಿನ್ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕ ಸ್ಥಿತಿ ಎದುರಿಸುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ವಿಪರೀತ ಆರ್ಥಿಕ ಒತ್ತಡ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ. ಸಚಿವರ ಕೈ ಕೆಳಗಿನ ಅಧಿಕಾರಿಗಳು ಹಾಗೂ ಆಪ್ತರ ಒತ್ತಡಗಳು ಗುತ್ತಿಗೆದಾರರನ್ನು ಉಸಿರುಗಟ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಕೂಡ ಎಕ್ಸ್‌ನಲ್ಲಿ ಈ ಸಾವಿಗೆ ಯಾರು ಹೊಣೆ? ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಚಿವರು ಮತ್ತು ಕರ್ನಾಟಕ ಕಾಂಗ್ರೆಸ್ ಶಾಸಕರ ಲಂಚದಾಹ ಮತ್ತು ಕಿರುಕುಳಕ್ಕೆ ಅಮಾಯಕ ಅಧಿಕಾರಿಗಳು, ಗುತ್ತಿಗೆದಾರರನ್ನು ಬಲಿ ಪಡೆಯುತ್ತಲೇ ಇದೆ ಎಂದು ದೂರಿದೆ.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳಕ್ಕೆ ಗುತ್ತಿಗೆದಾರನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ 15 ಲಕ್ಷ ರೂಪಾಯಿ ಹಣ ಪಡೆದು ಟೆಂಡರ್ ನೀಡದೆ ವಂಚಿಸಿ, ಮತ್ತೆ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ್ದರು ಎಂದು ಗಂಭೀರ ಆರೋಪಗಳನ್ನು ಮಾಡಿ ಗುತ್ತಿಗೆದಾರ ಸಚಿನ್ ಪಂಚಾಳ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದಿದೆ.
ಸಾಲು ಸಾಲು ಅಧಿಕಾರಿಗಳು, ಗುತ್ತಿಗೆದಾರರು ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳ ಮೇಲೆಯೇ ಗಂಭೀರ ಆರೋಪಗಳನ್ನು ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಆತ್ಮಹತ್ಯೆ ಗ್ಯಾರಂಟಿಯೇ ಹೆಚ್ಚು ಕುಖ್ಯಾತಿ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದೆ.












Click it and Unblock the Notifications