ರಾಜಕಾರಣಿಗಳ ಬುಗುರಿಯಾಟಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳು ಗಿರಗಿರ..
ಕಳೆದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಿಂದ ಹಿಡಿದು, ಈಗಿನ ಯಡಿಯೂರಪ್ಪನವರ ಅವಧಿಯ 15-16 ತಿಂಗಳಲ್ಲಿ ಅದೆಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳು ರಾತ್ರಿ ಬೆಳಗಾವುದರೊಳಗೆ ವರ್ಗಾವಣೆಯಾಗಿ ಹೋದರು?
ಆ ಜಿಲ್ಲಾಧಿಕಾರಿ ಅಲ್ಲಿಂದ ಇಲ್ಲಿಗೆ ವರ್ಗಾವಣೆ, ಆ ಪೊಲೀಸ್ ವರಿಷ್ಠಾಧಿಕಾರಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಎನ್ನುವ ಸುದ್ದಿ ಕನಿಷ್ಟ ವಾರಕ್ಕೊಮ್ಮೆಯಾದರೂ ಸುದ್ದಿಯಾಗುತ್ತಿರುತ್ತದೆ. ಒಂದು ರೀತಿಯಲ್ಲಿ ಇವರ ವೃತ್ತಿ ಜೀವನ ಯಾವಾಗಲೂ ಸೂಟ್ಕೇಸ್ ರೆಡಿಯಾಗಿ ಇಟ್ಟುಕೊಂಡು ಬದಕಬೇಕಾಗಿರುವಂತದ್ದು.
ಇದಕ್ಕೆಲ್ಲಾ ಕಾರಣ, ನಮ್ಮ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇವರನ್ನು ಕುಣಿಸುತ್ತಿರುವುದು, ಬೇರೆ ದಾರಿಯಿಲ್ಲದೇ ತಿರುಗಿ ಬೀಳದೇ ಇವರೂ ಆ ಆದೇಶಗಳನ್ನು ಪಾಲಿಸುತ್ತಿರುವುದು. ಕೆಲವೊಂದು ವರ್ಗಾವಣೆಯ ವಿರುದ್ದ ನ್ಯಾಯಾಲಯದ ಮೆಟ್ಟಲೇರಿದ್ದನ್ನು ಬಿಟ್ಟರೆ, ಇವರ ಪಾಡು ದೇವರಿಗೇ ಪ್ರೀತಿ.

ಐಎಎಸ್, ಐಪಿಎಸ್ ಅಧಿಕಾರಿಯಾಗಬೇಕು ಎನ್ನುವ ಕನಸನ್ನು ಇಟ್ಟುಕೊಂಡವರು ಬಹಳಷ್ಟು ಮಂದಿ, ಜೊತೆಗೆ, ತಮ್ಮ ಮಕ್ಕಳನ್ನು ಅದೇ ಹುದ್ದೆಯಲ್ಲಿ ನೋಡಬೇಕು ಎನ್ನುವ ಆಸೆಯೂ ಪೋಷಕರಲ್ಲಿರುತ್ತೆ, ಆದರೆ ಇತ್ತೀಚಿನ ದಿನಗಳಲ್ಲಿನ ರಾಜಕೀಯ ಮೇಲಾಟದಿಂದಾಗಿ, ಈ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವ ಯುವಕ/ಯುವತಿಯರ ಸಂಖ್ಯೆ ಕಮ್ಮಿಯಾದರೆ, ಅದಕ್ಕೆ ಕಾರಣ ನಮ್ಮ ರಾಜಕೀಯ ವ್ಯವಸ್ಥೆ ಎಂದರೆ ತಪ್ಪಾಗಲಾರದು.
ಐಎಎಸ್, ಐಪಿಎಸ್ ಓದೋದೆಂದರೆ ಏನು ತಮಾಷೆಯ ಮಾತಾ, ಅದೆಷ್ಟು ಪರಿಶ್ರಮ ಪಟ್ಟು ಈ ಹುದ್ದೆಗೆ ಬಂದಿರುತ್ತಾರೆ. ಯುಪಿಎಸ್ಸಿ ನಡೆಸುವ ಸಿವಿಲ್ ಸರ್ವಿಸ್ ಎಕ್ಸಾಮ್ ನಲ್ಲಿ ಉತ್ತೀರ್ಣರಾಗುವುದರ ಹಿಂದಿನ ಕಷ್ಟ ಏನು ಎನ್ನುವುದು ಜನಪ್ರತಿನಿಧಿಗಳಿಗೆ ಅರ್ಥ ಆಗುವುದು ಯಾವಾಗ?
ಒಬ್ಬ ಅಧಿಕಾರಿ ಇದೇ ಊರಿನಲ್ಲಿ, ಇದೇ ಹುದ್ದೆಯಲ್ಲಿ ಇಂತಿಷ್ಟು ದಿನ ಇರುತ್ತಾರೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲದೆ ಕೆಲಸ ನಿರ್ವಹಿಸುವ ಇವರ ಬವಣೆ ನಮ್ಮನ್ನಾಳುವ ರಾಜಕಾರಣಿಗಳಿಗೆ ಮನದಟ್ಟು ಆಗುವುದು ಯಾವಾಗ?
ಇವರಿಗೂ ಕುಟುಂಬ ಇರುತ್ತದೆ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಇದೆ ಎನ್ನುವುದನ್ನು ಅರಿಯದ ಈ ನಮ್ಮ ಸರಕಾರಗಳು, ಅಧಿಕಾರಿಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಬುಗುರಿತರ ಆಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಹೊಸ ಸರಕಾರ ಬಂದರೆ ಸಾಕು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಕೈಹಾಕುವ ಸರಕಾರ, ಅದೆಷ್ಟೋ ಜನಸ್ನೇಹಿ ಅಧಿಕಾರಿಗಳಾಗಿದ್ದರೂ, ಡೈನಾಮಿಕ್ ಆಫೀಸರ್ ಗಳಾಗಿದ್ದರೂ ಬೆಲೆಕೊಡದೇ ಆಯಕಟ್ಟಿನ ಸ್ಥಳಕ್ಕೆ ತಮಗೆ ಸೂಕ್ತ ಎನಿಸುವಂತವರನ್ನು ವರ್ಗಾವಣೆ ಮಾಡುತ್ತದೆ. ಇದಕ್ಕೆ ಬಿಜೆಪಿಯಾಗಲಿ, ಕಾಂಗ್ರೆಸ್, ಜೆಡಿಎಸ್ ಯಾರೂ ಹೊರತಲ್ಲ.
ಇಂತಹ ವರ್ಗಾವಣೆಯ ವಿರುದ್ದ ಯಾರೂ ಕೋರ್ಟ್ ಮೆಟ್ಟಲೇರದಿರುವುದು, ಕೋರ್ಟ್ ಮಧ್ಯಪ್ರವೇಶಿಸದೇ ಇರುವುದರಿಂದ (ಕೆಲವೊಂದು ಉದಾಹರಣೆ ಹೊರತಾಗಿ), ಇದಕ್ಕೆ ಕಡಿವಾಣವೇ ಬೀಳುತ್ತಿಲ್ಲ. ನಿಗದಿತ ಸ್ಥಳಕ್ಕೆ, ಹುದ್ದೆಗೆ ವರ್ಗಾವಣೆಯಾದಾಗ, ಇಂತಿಷ್ಟು ಸಮಯದವರೆಗೆ, ಅಲ್ಲಿಂದ ಮತ್ತೆ ಎತ್ತಂಗಡಿ ಮಾಡದಂತೆ, ಕಾನೂನು ಜಾರಿಯಾದರೆ, ಐಎಎಸ್ ಮತ್ತು ಐಪಿಎಸ್ ಪದವಿಗೂ ಗೌರವ ಕೊಟ್ಟಂತಾಗುತ್ತದೆ.












Click it and Unblock the Notifications