HSRP; ಇನ್ನೂ ಕೋಟ್ಯಾಂತರ ವಾಹನಗಳಿಗೆ ನಂಬರ್ ಪ್ಲೇಟ್ ಬಾಕಿ
ಬೆಂಗಳೂರು, ಮೇ 22: ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಜೂನ್ 12ರ ವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಇದರಿಂದ ವಾಹನ ಸವಾರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಮೇ 31 ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕೊನೆಯ ದಿನವಾಗಿದೆ. ಅಂತಿಮ ಗಡುವು ಹತ್ತಿರ ಬಂದರೂ ಸಹ ಕೋಟ್ಯಾಂತರ ವಾಹನಗಳಿಗೆ ಇನ್ನೂ ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇದೆ. ಆದ್ದರಿಂದ ಸರ್ಕಾರ ಗಡುವನ್ನು ವಿಸ್ತರಣೆ ಮಾಡಲಿದೆಯೇ? ಕಾದು ನೋಡಬೇಕಿದೆ.

ಮೂರು ಬಾರಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಗಡುವು ನೀಡಿದರೂ ಸಹ ಇನ್ನೂ ನಿರೀಕ್ಷೆ ಮಾಡಿದಷ್ಟು ನೋಂದಣಿ ಆಗಿಲ್ಲ, ವಾಹನಗಳಿಗೆ ನಂಬರ್ ಪ್ಲೇಟ್ ಹಾಕಲಾಗಿಲ್ಲ. ಸುಮಾರು 2 ಕೋಟಿ ವಾಹನಗಳಲ್ಲಿ 36 ಲಕ್ಷ ವಾಹನಗಳಿಗೆ ಇದುವರೆಗೆ ನಂಬರ್ ಹಾಕಿಸಲಾಗಿದೆ ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ.
ಗಡುವು ವಿಸ್ತರಣೆ?; ಲೋಕಸಭೆ ಚುನಾವಣೆ ನೀತಿ ಸಂಹಿತೆ ಜೂನ್ 6ರ ತನಕ ಜಾರಿಯಲ್ಲಿರುತ್ತದೆ. ಜೂನ್ 12ರ ವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಹೇಳಿದೆ. ಆದ್ದರಿಂದ ಗಡುವು ವಿಸ್ತರಣೆ ಮಾಡುವ ಕುರಿತು ಬಳಿಕ ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕು. ಇದೇ ಕಾರಣಕ್ಕೆ ಜನರಿಗೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲದ ಕಾರಣ ನೋಂದಣಿ ತಡವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ತಾಲೂಕು, ಹೋಬಳಿ ಮಟ್ಟದಲ್ಲಿ ನೋಂದಣಿಯಾಗುತ್ತಿಲ್ಲ.
ಏಪ್ರಿಲ್ 1, 2019ಕ್ಕೂ ಮೊದಲು ನೋಂದಣಿಯಾದ ವಾಹನಗಳು ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕು. ಈಗ ಹಲವಾರು ಸೈಬರ್ ಸೆಂಟರ್‌ಗಳು ಜನರಿಗೆ ಸಹಾಯಕವಾಗಲು ನೋಂದಣಿ ಮಾಡುತ್ತಿವೆ. ಆದ್ದರಿಂದ ನಗರ, ಪಟ್ಟಣ ಪ್ರದೇಶದಲ್ಲಿ ನೋಂದಣಿ ಚುರುಕಾಗುತ್ತಿದೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ನಂತರವೂ ಅಳವಡಿಕೆ ಮಾಡದಿದ್ದರೆ 1000 ರೂ. ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರಿ ವಾಹನಗಳು ಸೇರಿದಂತೆ ಕೋಟ್ಯಾಂತರ ವಾಹನಗಳಿಗೆ ಇನ್ನೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಮಾಡಿಲ್ಲ. ಮೇ 31ರ ಗುಡುವನ್ನು ಸಾರಿಗೆ ಇಲಾಖೆ ನೀಡಿದ್ದರೂ ಸಹ ಜೂನ್ 12ರ ತನಕ ದಂಡ ವಿಧಿಸುವುದಿಲ್ಲ ಎಂದು ಸರ್ಕಾರವೇ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.
ಹೆಚ್‌ಎಸ್‌ಆರ್‌ಪಿ ನೋಂದಣಿ ಕುರಿತು ಅಂತರ್ಜಾಲದ ಜ್ಞಾನವಿಲ್ಲದವರಿಗೆ ಗೊಂದಲ ಉಂಟಾಗಿದೆ. ಮೇ 31ರೊಳಗೆ ಎಲ್ಲ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಆದರೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಅಂತಿಮ ದಿನಾಂಕ ಪ್ರಸ್ತಾಪಿಸಿಲ್ಲ. ಆದ್ದರಿಂದ ಗಡುವು ವಿಧಿಸಲು ಅವಕಾಶವಿಲ್ಲ ಎಂದು ಗೌರಿಶಂಕರ್ ಎಂಬುವವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕುರಿತು ಜನರ ಗೊಂದಲ ಬಗೆಹರಿಸಲು ಸಹಾಯವಾಣಿ ಸಂಖ್ಯೆ 9449863429/26. ನೋಂದಣಿಗೆ https://transport.karnataka.gov.in ಅಥವ www.siam.in ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ವೆಬ್‌ಸೈಟ್ ಮೂಲಕ ನೋಂದಣಿಯಾದವು ಮಾತ್ರ ಅಧಿಕೃತ ಎಂದು ಸಾರಿಗೆ ಇಲಾಖೆ ಹೇಳಿದೆ.












Click it and Unblock the Notifications