Government employee: ಹಳೆಯ ಪಿಂಚಣಿ ಯೋಜನೆ ಜಾರಿ ಬಗ್ಗೆ ಸಿದ್ದರಾಮಯ್ಯ ಚರ್ಚೆ
ಬೆಂಗಳೂರು, ಮೇ. 13 : ಕರ್ನಾಟಕ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಗಳಲ್ಲಿ ಹಳೆಯ ಪಿಂಚಣಿ ಯೋಜನೆ (Old pension scheme) ಕೂಡ ಒಂದು. ಸರ್ಕಾರಿ ನೌಕರರು ಕಾಂಗ್ರೆಸ್ ಸರ್ಕಾರದ ಮುಂದೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಪುನಃ ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದರು.
ಈಗಾಗಲೇ 1/4/2006ಕ್ಕಿಂತ ಮುಂಚೆ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿರುವ ನೌಕರರಿಗೆ ಹಳೆ ಪಿಂಚಣಿ ಯೋಜನೆ ಅನುಷ್ಠಾನವಾಗಲಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಗಂಭೀರವಾಗಿದ್ದು, ಶೀಘ್ರದಲ್ಲೇ ಯೋಜನೆಯನ್ನು ಜಾರಿಗೆ ತರಲಿದೆ. ಹೊಸ ಅಪ್‌ಡೇಟ್ ಪ್ರಕಾರ ಒಪಿಎಸ್ ಜಾರಿ ಬಗ್ಗೆ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿಯೂ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ಪರಿಷತ್ ಚುನಾವಣೆಗೂ ಮುನ್ನ ಓಪಿಎಸ್ ಜಾರಿ
ವಿಧಾನಸಭಾ ಚುನಾವಣೆ ಸಮಯದಲ್ಲಿ ಒಪಿಎಸ್ ಜಾರಿ ಮಾಡುವ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಕಾಂಗ್ರೆಸ್, ಪರಿಷತ್ ಚುನಾವಣೆಗೂ ಮುನ್ನವೇ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಈಡೇರಿಸುವ ಚಿಂತನೆ ನಡೆಸಿದೆ. ಈ ಬಗ್ಗೆ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವಿಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಯನೂರ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿಯೂ ಹಳೆ ಪಿಂಚಣಿ ಯೋಜನೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಸರ್ಕಾರದ ಈ ನಿರ್ಧಾರ ಲಕ್ಷಾಂತರ ಸರ್ಕಾರಿ ನೌಕರರಿಗೆ ಅನುಕೂಲವಾಗುವುದಲ್ಲದೆ, ಪರಿಷತ್ತಿನ ಆರೂ ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಇನ್ನೊಂದು ಲೆಕ್ಕಾಚಾರ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ.

ಒಪಿಎಸ್ ಮರು ಜಾರಿ ಮಾಡಿದ್ರೆ ಗೆಲುವು ಖಚಿತ
ರಾಜ್ಯದಲ್ಲಿ ಒಪಿಎಸ್ ಮರು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರೆ ಗೆಲುವು ಖಚಿತ. ಹೀಗಾಗಿ ಒಪಿಎಸ್ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಸೇರಿ ಕೈ ಅಭ್ಯರ್ಥಿಗಳು ಸಭೆಯಲ್ಲಿ ಮನವಿ ಮಾಡಿದ್ದಾರೆ.
ಹೀಗಾಗಿ ಸರ್ಕಾರಿ ನೌಕರರ ಮತದಾರರನ್ನು ಸೆಳೆಯಲು ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. 1/4/2006 ಕ್ಕಿಂತ ಪೂರ್ವದಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರು ಹಳೆ ಪಿಂಚಣಿ ಯೋಜನೆಗೆ ಪರಿಗಣಿಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಜಾರಿಯೊಂದು ಬಾಕಿಯಿದೆ.
ಇನ್ನು, ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಆಯನೂರು ಮಂಜುನಾಥ್, ಕೆ.ಕೆ. ಮಂಜುನಾಥ್, ಚಂದ್ರಶೇಖರ ಪಾಟೀಲ್, ಶ್ರೀನಿವಾಸ, ರಾಮೋಜಿ ಹಾಗೂ ಮರಿತ್ತಿಬ್ಬೇಗೌಡ ಕಣಕ್ಕಿಳಿಯುತ್ತಿದ್ದಾರೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸರ್ಕಾರಿ ನೌಕರರನ್ನು ತನ್ನತ್ತ ಸೆಳೆಯಲು ಮುಂದಾಗಿದೆ.












Click it and Unblock the Notifications