ಜನಿವಾರಕ್ಕೆ ವಿವಾದ: ಜಿಲ್ಲಾಧಿಕಾರಿಗಳ ಬಳಿ ವರದಿ ಕೇಳಿದ ಕೆಇಎ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಸಿ) ನಡೆಸಿದ ಸಿಇಟಿ ವೇಳೆ ಅನವಶ್ಯಕವಾಗಿ ಅಭ್ಯರ್ಥಿಗಳ ಜನಿವಾರ ತೆಗೆಸಿದ್ದು ಮತ್ತು ತೆಗೆಯದಿದ್ದರೆ ಪರೀಕ್ಷೆ ಬರೆಯಲು ಅವಕಾಶ ನೀಡದ್ದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕೆಇಎ ಪ್ರಕರಣ ನಡೆದಿರುವ ಬೀದರ್ ಮತ್ತು ಶಿವಮೊಗ್ಗ ಜಿಲ್ಲಾದಿಕಾರಿಗಳಿಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದೆ. ವಸ್ತ್ರ ಸಂಹಿತೆಯಲ್ಲಿ ಎಲ್ಲಿಯೂ ಜನಿವಾರ ತೆಗೆಸ ಬೇಕೆಂದು ಹೇಳಿರಲಿಲ್ಲ, ಆದರೂ ಎರಡು ಕೇಂದ್ರಗಳಲ್ಲಿ ಈ ರೀತಿಯ ಅಧಿಕ ಪ್ರಸಂಗ ಮಾಡಿರುವುದು ಖಂಡನೀಯ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶನ ಎನ್ ಪ್ರಸನ್ನ ಅವರು ಹೇಳಿದ್ದಾರೆ.
ಬೀದರ್‌ನ ವಿದ್ಯಾರ್ಥಿ ಗಣಿತ ಪರೀಕ್ಷೆ ಬರೆದಿಲ್ಲ. ನಿಯಮ ಪ್ರಕಾರ ಎಂಜಿನಿಯರಿಂಗ್ ರ್ಯಾಂಕ್ ಪಡೆಯಲು ಅರ್ಹನಾಗುವುದಿಲ್ಲ. ವಿದ್ಯಾರ್ಥಿಗೆ ಅನ್ಯಾಯವಾಗದ ರೀತಿಯಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಯಾವುದಕ್ಕೆಲ್ಲ ನಿಷೇಧ ಇತ್ಯಾದಿ ವಿಷಯಗಳ ಬಗ್ಗೆ ಮೊದಲೇ ತರಬೇತಿ ಕೂಡ ನೀಡಲಾಗಿರುತ್ತದೆ. ಜೊತೆಗೆ ಲಿಖಿಯವಾಗಿಯೂ ತಿಳಿಸಲಾಗುತ್ತದೆ. ಆದರೂ, ಈ ರೀತಿ ಮಾಡಿರುವುದು ನೋವಿನ ಸಂಗತಿ. ಯಾವುದೇ ಧರ್ಮ ಹಾಗೂ ಜಾತಿಯವರಿಗೆ ಫಾಸಿಯಾಗುವ ಯಾವ ತೀರ್ಮಾನವನ್ನು ಕೆಇಎ ಕೈಗೊಳ್ಳುವುದಿಲ್ಲ, ನಮ್ಮದೇನಿದ್ದರೂ ವಿದ್ಯಾರ್ಥಿ ಕೇಂದ್ರಿತ ತೀರ್ಮಾನ ಎಂದು ಪ್ರಸನ್ನ ಅವರು ಸ್ಪಷ್ಟಡಿಸಿದ್ದಾರೆ.

ಇನ್ನೂ ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಬ್ರಾಹ್ಮಣ ಸಮುದಾಯದ ಮುಖಂಡರು ಪ್ರಕರಣ ಖಂಡಿಸಿ, ಜನಿವಾರ ತೆಗೆಸಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ. ಅಲ್ಲದೇ ಸಿಇಟಿ ಎರಡನೇ ದಿನವಾದ ಗುರುವಾರ ಜನಿವಾರ ಹಾಕಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಬೀದರ್‌ನಲ್ಲಿಸಿಇಟಿ ಬರೆಯಲು ಅಭ್ಯರ್ಥಿಗೆ ನಿರಾಕರಿಸಲಾಗಿತ್ತು. ಶಿವಮೊಗ್ಗದಲ್ಲಿ ಜನಿವಾರ ತೆಗೆಸಿ, ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಇದೀಗ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿರೋಧ ಕೇಳಿಬರುತ್ತಿದೆ.
ಜನಿವಾರ ತೆಗೆಸಿದ್ದು ಒಪ್ಪುವ ವಿಚಾರವಲ್ಲ. ಇದೊಂದು ವಿಕೃತ ಮನಸ್ಥಿತಿಯುಳ್ಳವರು ಮಾಡಿರುವ ಕೃತ್ಯ. ನಾನು ಇದನ್ನು ಖಂಡಿಸುತ್ತೇನೆ. ಕೆಇಎಗೆ ವರದಿ ನಡೆಸಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಆಯ್ದ ವಿಚಾರ ಎತ್ತಿಕೊಂಡು ರಾಜಕೀಯ ಲಾಭ ಮಾಡುವುದಲ್ಲ. ಯಾವುದೇ ಸಮುದಾಯವನ್ನು ನೋವಿಸುವ ಉದ್ದೇಶ ನಮ್ಮದಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಇನ್ನೂ ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಜನಿವಾರ ತೆಗೆಸಿದ ಬಗ್ಗೆ ನಿರ್ದೇಶನ ಕೊಡುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ. ಈ ರೀತಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಈ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಹಾಗಾಗಿ ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸುವೆ. ಈ ಘಟನೆ ನನ್ನ ಜಿಲ್ಲೆಯಲ್ಲಿ ಆಗಿರುವುದರಿಂದ ಕ್ರಮಕ್ಕೆ ಸೂಚನೆ ನೀಡುತ್ತೇವೆ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.












Click it and Unblock the Notifications