Nuclear Power Plant: ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ

Nuclear Power Plant: ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಬೇಡ ಎಂದಾದರೆ... ಸಮಾಧಾನದ ಸಂಗತಿ ಎಂದರೆ, ಉತ್ತರ ಕನ್ನಡ, ಶಿವಮೊಗ್ಗಗಳಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ ಬಹಳ ಕ್ಷೀಣವಾದರೂ ಧ್ವನಿ ಹೊರಡತೊಡಗಿದೆ. ನಿಜಕ್ಕೂ ನಮ್ಮೂರಿಗೆ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ ಬೇಡ ಎಂದು ದುಡ್ಡಿನ ಹಿಂದೆ ಹೊರಟಿರುವ "ಅರೆಬೆಂದ"ರಾಜಕಾರಣಿಗಳಿಗೆ ಕನ್ವಿನ್ಸ್ ಮಾಡುವುದು ಹೇಗೆ. ಅದಕ್ಕೆ ಪೂರಕವೆನ್ನಿಸಬಹುದಾದ ಕೆಲವು ಸಂಗತಿಗಳು ಇಲ್ಲಿವೆ:

1. "AI ಗ್ರೇಡ್‌ನಲ್ಲಿ ವಿಕಾಸ" ಆಗಲು ಈಗ ಇರುವುದಕ್ಕಿಂತ ಹಲವು ಪಟ್ಟು ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಬೇಕು ಎಂಬುದನ್ನು ಕೆಲವು ಬುದ್ಧಿವಂತರು ಸರ್ಕಾರಗಳ ತಲೆಗೆ ತುಂಬಿದ್ದಾರೆ. ವಾಸ್ತವದಲ್ಲಿ, ಈ ಪ್ರಮಾಣದ ವಿದ್ಯುತ್ ಬೇಕಿರುವುದು ಡೇಟಾ ಸೆಂಟರ್‌ಗಳಿಗೆ. ಅಮೆರಿಕ, ಯುರೋಪುಗಳಲ್ಲಿ ಡೇಟಾ ಸೆಂಟರ್‌ಗಳಿಗೆ ಸ್ಥಳೀಯ ವಿರೋಧ ಹೆಚ್ಚುತ್ತಿರುವುದರಿಂದ, ಅವನ್ನು ಬಿಟ್ಟಿ ಬಿದ್ದಿರುವ ಇಂಡಿಯಾಕ್ಕೆ ಕೊಡಲು ಹೊರಟಿದ್ದಾರೆ, ನಮ್ಮಲ್ಲಿ "ಸಬ್ಸಿಡಿ ಬಡುಕ" ಉದ್ಯಮಿಗಳನೇಕರು ಡೇಟಾಸೆಂಟರ್ ಯೋಜನೆಗಳಲ್ಲಿ ಹುಲ್ಲು ಹಸಿರಾಗಿರುವುದನ್ನು ಕಂಡು, ಅಲ್ಲಿಗೆ ಬೇಲಿ ಹಾರಿದ್ದಾರೆ.

Nuclear Power Plant

ಹಾಗಾಗಿ, ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳು ಈ ಪ್ರಮಾಣದಲ್ಲಿ ಬೇಡ ಎಂದಾದರೆ, ಮೊದಲು ವಿರೋಧಿಸಬೇಕಿರುವುದು ಡೇಟಾ ಸೆಂಟರ್‌ಗಳನ್ನು. ಈ ಡೇಟಾ ಸೆಂಟರ್‌ಗಳು ವಿದ್ಯುತ್ ಜೊತೆಗೆ, ತಾವು ಉತ್ಪಾದಿಸುವ ಶಾಖವನ್ನು ತಗ್ಗಿಸಲು ದೊಡ್ಡ ಪ್ರಮಾಣದಲ್ಲಿ ನೀರು ಮತ್ತು ನೆಲವನ್ನು ಬಳಸಲಿವೆ. ಜೊತೆಗೆ 24x7x365 ಶಬ್ದ ಮಾಲಿನ್ಯವೂ (ಕೂಲಿಂಗ್ ಫ್ಯಾನ್‌ಗಳದು) ದೊಡ್ಡ ಗಾತ್ರದ್ದು.

2. ಈ ಡೇಟಾ ಸೆಂಟರ್‌ಗಳು ಉದ್ಯೋಗ ಕೊಡುವುದು ಅಷ್ಟರಲ್ಲೇ ಇದೆ. ಅಂದಾಜು 20,000 ಕೋಟಿ ಖರ್ಚು ಬರುವ 0.5GW ಡೇಟಾಸೆಂಟರ್, ಅಬ್ಬಬ್ಬಾ ಎಂದರೆ, 400 ಉದ್ಯೋಗ ಸೃಷ್ಟಿ ಮಾಡಬಹುದು. ಅದಕ್ಕೋಸ್ಕರ ಅಮೂಲ್ಯವಾದ ನೀರು, ರಿಯಾಯಿತಿಯಲ್ಲಿ ನೆಲ, ವಿದ್ಯುತ್ ಎಂದು ಸರ್ಕಾರವು ಸಬ್ಸಿಡಿ ಬಡುಕರ ಹೊಟ್ಟೆ ತುಂಬಿಸುವುದರಲ್ಲಿ ಅರ್ಥವಿಲ್ಲ.

ಈ ಡೇಟಾ ಸೆಂಟರ್‌ಗಳ ಬದಲು ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್‌ಗಳನ್ನು (GCC) ಬೆಂಗಳೂರಿನಿಂದ ಹೊರಗೆ ಶಿವಮೊಗ್ಗ, ಮಂಗಳೂರುಗಳಿಗೆಲ್ಲ ಹಂಚಲಿ. ಅವು ಉದ್ಯೋಗ ನೀಡುವುದರ ಜೊತೆಗೆ, ನಮ್ಮ ಮನೆ ಮಕ್ಕಳು ಮನೆಯಿಂದಲೇ ಉದ್ಯೋಗಕ್ಕೆ ಹೋಗಿಬರಲು ಅವಕಾಶ ಮಾಡಿಕೊಡಲಿವೆ; ಮಹಾನಗರಗಳ ಜನದಟ್ಟಣೆ ಆ ಮಟ್ಟಿಗೆ ತಗ್ಗಲಿದೆ. ಒಂದು ಜಿಲ್ಲೆಗೆ 10 GCC ಗಳನ್ನು ಕೊಟ್ಟರೆ (ಕನಿಷ್ಠ 5000 ಉದ್ಯೋಗ) ಒಂದು 200MW ಡೇಟಾ ಸೆಂಟರಿಗೆ ದೊಡ್ಡ ಮನಸ್ಸು ಮಾಡಿ ಒಪ್ಪಿಗೆ ಕೊಡೋಣ.

3. ಸಿನಿಮಾ ರಂಗದಲ್ಲಿ ಕನ್ನಡ ಸಿನಿಮಾಗಳಿಗೆ ತೆರಿಗೆ ರಿಯಾಯಿತಿ, ಸಬ್ಸಿಡಿ (ರಿಮೇಕ್‌ಗಳಿಗೆ ಇಲ್ಲ) ಎಂದೆಲ್ಲ ಇದೆಯಲ್ಲ - ಅದೇ ನೀತಿ ಇಲ್ಲಿಗೂ ಬರಲಿ. ವಿದೇಶೀ ಡೇಟಾ ದಾಸ್ತಾನು ಇಟ್ಟುಕೊಳ್ಳುವುದಕ್ಕೆ ನಮ್ಮ ದೇಶದ ನೆಲ ಕೊಡುವುದಿದ್ದರೆ, ಸರ್ಕಾರ ಅದಕ್ಕೆ ಚಿಕ್ಕಾಸೂ ಸಬ್ಸಿಡಿ, ರಿಯಾಯಿತಿ ನೀಡಬಾರದು. ಆಸೆ ಇದ್ದವರು ಕಿಸೆಯಿಂದ ಖರ್ಚು ಮಾಡಿಕೊಳ್ಳಲಿ.

ನಮ್ಮ ದೇಶದ ಡೇಟಾ ಇರಿಸಿಕೊಳ್ಳುವುದಕ್ಕೆ ಅವಕಾಶ ಕೊಡಲಿ; ಪ್ರೋತ್ಸಾಹ ಸಿಗಲಿ (ಈಗ ಇರುವುದು ಅದೇ; ಅದಕ್ಕೆ ಈಗಿರುವ ವಿದ್ಯುತ್ ನೀತಿ ಬಹುತೇಕ ಸಾಕು). ಸಬ್ಸಿಡಿ ಲಾಭ ಇಲ್ಲ ಎಂದರೆ, ಅರ್ಧಕ್ಕರ್ಧ ಇಂತಹ ಯೋಜನೆಗಳು ತಾನಾಗಿ ಕಳಚಿಕೊಳ್ಳಲಿವೆ. ಈ ಸಬ್ಸಿಡಿ, PLI ಯೋಜನೆಗಳಲ್ಲಿ ರಾಜಕಾರಣಿಗಳಿಗೆ ಕಿಕ್‌ಬ್ಯಾಕ್‌ನಂತಹ ಪ್ರಕರಣಗಳ ಸಮಗ್ರ/ಸಂಪೂರ್ಣ ತನಿಖೆ ಆಗಬೇಕು.

4. ವಿದೇಶೀ ಬಹುರಾಷ್ಟ್ರೀಯ ಟೆಕ್ ರಕ್ಕಸ ಕಂಪನಿಗಳು ಇಲ್ಲಿ ಡೇಟಾ ಸೆಂಟರ್ ತೆರೆಯುವುದಿದ್ದರೆ, ಕ್ಯಾಪ್ಟಿವ್ ಪವರ್ ಪ್ಲಾಂಟ್‌ಗಳನ್ನು ತಮ್ಮ ಖರ್ಚಿನಲ್ಲಿ ಮಾಡಿಕೊಳ್ಳಲಿ. ನಮ್ಮ ತೆರಿಗೆ ದುಡ್ಡು ಅದಕ್ಕೆ ಹಂಚುವುದು ಬೇಡ. ಜೊತೆಗೆ, ಇಲ್ಲಿನ ಪರಿಸರ ನಾಶ ಮಾಡಿದ್ದಕ್ಕೆ "polluter Pays" ಎಂಬ ನ್ಯಾಯಾಂಗ ರಚಿತ ಸೂತ್ರದಡಿ, ಪ್ರತೀವರ್ಷ ದಂಡ ತೆರಿಗೆ ಪಾವತಿಸಲಿ.

5. ಕಳೆದ ವಾರ NGTಯು ದಕ್ಷಿಣದ ರಾಜ್ಯಗಳಲ್ಲಿ, ಪರಿಸರ ಮಾಲಿನ್ಯದ ಬಗ್ಗೆ ನಿಗಾ ಇರಿಸಲು ಸರ್ಕಾರಗಳಿಗೆ ಸೂಚಿಸಿದ್ದನ್ನು ಗಮನಿಸಿದೆ. ದಕ್ಷಿಣ ರಾಜ್ಯಗಳು, ಅದರಲ್ಲೂ ಮಲೆನಾಡಿನ ತಪ್ಪಲಿನಲ್ಲಿ ಈಗಾಗಲೇ ಎಷ್ಟು ಪರಿಸರ ಹಾನಿ ಆಗಿದೆ, ಇನ್ನೆಷ್ಟು ಹಾನಿ ಮಾಡಬಹುದು, ಜನವಾಸ ಯೋಗ್ಯ ಎನ್ನಿಸಿಕೊಳ್ಳಲು ತ್ರೆಷ್‌ಹೋಲ್ಡ್ ಎಷ್ಟು ಎಂಬುದು ಲೆಕ್ಕಾಚಾರ ಆಗದೇ, ಹೊಸ ಕೈಗಾರಿಕೆಗಳಿಗೆ ರಾಜ್ಯದಲ್ಲಿ ಎಲ್ಲೂ ಅವಕಾಶ ಕೊಡಬಾರದು.

ವಿಶೇಷವಾಗಿ ಕರಾವಳಿಯಲ್ಲಿ, ಜನನಿಬಿಡ ಪ್ರದೇಶಗಳಲ್ಲಿ ಉಷ್ಣ ವಿದ್ಯುತ್, ಪೆಟ್ರೋಲಿಯಂ ಸಂಸ್ಕರಣೆ, ಪೆಟ್ರೋಲಿಯಂ ದಾಸ್ತಾನು ಎಂದೆಲ್ಲ ತಂದು ರಾಶಿ ಹಾಕಲಾಗಿದೆ. ಜನ ಬದುಕಲಾಗದೇ ಸಾಯತೊಡಗಿದ್ದಾರೆ. ಮಾಲಿನ್ಯಕ್ಕೊಂದು ಮೇಲ್ಮಿತಿ ಕಾನೂನುಬದ್ಧವಾಗಿ ಕಡ್ಡಾಯ ಆಗಬೇಕು.

ಬರಹ: ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+