
ಡಿಸೆಂಬರ್ 17 ರಾಜ್ಯಾದ್ಯಂತ ವಿಶ್ವವಿದ್ಯಾಲಯ, ಸಂಯೋಜಿತ ಕಾಲೇಜು ಬಂದ್‌ಗೆ ಕರೆ
ಬೆಂಗಳೂರು, ಡಿಸೆಂಬರ್ 6: ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 17ರಂದು ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ ಬಂದ್‌ಗೆ ಕರೆ ನೀಡಲಾಗಿದೆ.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಡಿಸೆಂಬರ್ 17ರಂದು ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳು ಹಾಗೂ ಸಂಯೋಜಿತ ಕಾಲೇಜುಗಳ ಬಂದ್‌ಗೆ ಕರೆ ನೀಡಿದ್ದು, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿ ಹಂಚಿಕೆಯಲ್ಲಿ ನಿಯಮ ಪಾಲಿಸಲು ಹೈಕೋರ್ಟ್ ತಾಕೀತು
ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹಲವು ಹಂತದ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಸಹ ಸರ್ಕಾರ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಡಿಸೆಂಬರ್ 17ರಂದು ರಾಜ್ಯಾದ್ಯಂತ ಕಾಲೇಜುಗಳ ಬಂದ್‌ಗೆ ಕರೆ ನೀಡುತ್ತಿದ್ದೇವೆ ಎಂದಿದ್ದಾರೆ.
ಹೀಗಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಸಂಯೋಜಿತ ಕಾಲೇಜುಗಳ ಬಂದ್‌ಗೆ ಕರೆ ಕೊಡುತ್ತಿದ್ದೇವೆ. ವಿದ್ಯಾರ್ಥಿಗಳು ಕರೆ ಕೊಟ್ಟಿರುವುದನ್ನು ನಾವು ಮುಂದಾಳತ್ವ ವಹಿಸಿಕೊಂಡಿದ್ದು, ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇನ್ನು ಮುಂದೆಯೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ, ವಿದ್ಯಾರ್ಥಿಗಳು ಎದುರು ನಿಂತರೆ ಪರಿಸ್ಥಿತಿ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿ ವೇತನ, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ, ಉಚಿತ ಬಸ್ ಪಾಸ್ ಸೇರಿದಂತೆ ಹಲವು ಸಮಸ್ಯೆಗಳನ್ನು ರಾಜ್ಯದ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು, ವಿಶೇಷವಾಗಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ದೂರ ಉಳಿಯುವಂತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಹೇಳಿದ್ದಾರೆ.
ಎನ್‌ಎಸ್‌ಯುಐ ಪ್ರಕಾರ ಪ್ರಸ್ತುತ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳೇನು..?
1. ಹಲವು ಪರೀಕ್ಷೆಯ ಫಲಿತಾಂಶಗಳು ವಿಳಂಬವಾಗಿ ನೀಡುತ್ತಿದ್ದಾರೆ.
2. ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನದ ಸಮಸ್ಯೆಗಳು ಹೆಚ್ಚಾಗುತ್ತಿದೆ.
3. ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆ ಸೌಲಭ್ಯಗಳನ್ನು ಅವಲಂಭಿಸಿದ್ದು, ವಿದ್ಯಾರ್ಥಿಗಳಿಗೆ ಬಸ್ ಸಾರಿಗೆ ಸಮಸ್ಯೆ ಹೆಚ್ಚಾಗಿದೆ.

4. ಸರ್ಕಾರಿ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡುತ್ತಿರುವುದು ಕೂಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಇನ್ನು ಕಾಲೇಜುಗಳು ಸರಿಯಾದ ಸಮಯಕ್ಕೆ ಫಲಿತಾಂಶಗಳನ್ನು ನೀಡಬೇಕು. ರಾಜ್ಯ ಸರ್ಕಾರ ತಕ್ಷಣ ವಿದ್ಯಾರ್ಥಿ ವೇತನಗಳನ್ನು ಬಿಡುಗಡೆ ಮಾಡಬೇಕು. ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಬೇಕು. ಅಲ್ಲದೇ ಸರ್ಕಾರಿ ಕಾಲೇಜುಗಳ ಶುಲ್ಕಗಳನ್ನು ಕಡಿಮೆ ಮಾಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಡಿಸೆಂಬರ್ 17ರಂದು ರಾಜ್ಯಾದ್ಯಂತ ಕಾಲೇಜುಗಳ ಬಂದ್‌ಗೆ ಕರೆ ನೀಡಿದೆ.