ಮಹಾನಗರ ಪಾಲಿಕೆ, ಪುರಸಭೆಗಳಲ್ಲೂ ನಿವೇಶನ, ಕಟ್ಟಡಕ್ಕೆ ಇ-ಖಾತೆ ಪಡೆಯಲು ಅವಕಾಶ
ಶಿವಮೊಗ್ಗ, ಫೆಬ್ರವರಿ 19: ಆಸ್ತಿಗಳ ಮಾಲೀಕರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನ/ ಕಟ್ಟಡಗಳಿಗೂ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಸದ್ಯ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳಿಗೆ ಇ-ಖಾತೆ ಪಡೆಯಲು ಅವಕಾಶವನ್ನು ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ್ದ ಅವರು, 'ಬಿ' ಖಾತಾ ಅಭಿಯಾನದ ಮೂಲಕ ರಾಜ್ಯದ ಪಟ್ಟಣ ಹಾಗೂ ನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುತ್ತಿದ್ದೇವೆ. ಇದೊಂದು ಬಾರಿ ಕೊನೆಯದಾಗಿ ಸರ್ಕಾರ ಅನಧಿಕೃತ ಬಡಾವಣೆಗಳಿಗೆ 'ಬಿ' ಖಾತಾ ನೀಡುತ್ತಿದೆ. ಮುಂದೆ ಎಲ್ಲಿಯೂ ಅನಧಿಕೃತ ಬಡಾವಣೆಗಳು ತಲೆಯೆತ್ತಬಾರದು, ಎತ್ತಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ನಿಶ್ಚಿತ" ಎಂದು ಹೇಳಿದ್ದರು.

ಇ-ಖಾತಾ ಪಡೆಯಿರಿ: ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನ/ ಕಟ್ಟಡಗಳನ್ನು 2024 ರ ಸೆಪ್ಟೆಂಬರ್ 10ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನಗಳ/ ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಯನ್ನು ಪಡೆಯಬಹುದಾಗಿದೆ.
ಎ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೋಂದಾಯಿತ ಮಾರಾಟ ಪತ್ರ/ ದಾನ ಪತ್ರ/ ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಧೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಪ್ರತಿ ಸಲ್ಲಿಸಬೇಕು.
ಬಿ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸಲು 2024 ಸೆ.10ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ ವಿಭಾಗ ಪತ್ರಗಳು/ ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಚೀಟಿ ಪ್ರತಿಯನ್ನು ಸಲ್ಲಿಸಬೇಕು.
ಈ ಎಲ್ಲಾ ದಾಖಲೆಗಳನ್ನು ಪ್ರಕಟಣೆ ದಿನಾಂಕದಿಂದ ಮೂರು ತಿಂಗಳೊಳಗೆ ಸಲ್ಲಿಸಿ, ಇ-ಖಾತೆಯನ್ನು ಪಡೆಯುಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜನರು ಹತ್ತಿದ ಮಹಾನಗರ ಪಾಲಿಕೆ ಸೇರಿದಂತೆ ಪೌರಸಭೆಗಳ ಕಛೇರಿಗೆ ಭೇಟಿ ನೀಡಬಹುದು.












Click it and Unblock the Notifications