700 ಬ್ರಾಹ್ಮಣರನ್ನು ನೇಣಿಗೇರಿಸಿದ್ದ ದಿನದಂದು ಟಿಪ್ಪು ಜಯಂತಿ ಆಚರಿಸಲಾಯಿತೇ?
ಟಿಪ್ಪು ಜಯಂತಿ ಆಚರಣೆಯ ದಿನ ಮತ್ತು ಟಿಪ್ಪು ಸುಲ್ತಾನನ ನಿಜವಾದ ಹುಟ್ಟಿದ ದಿನಾಂಕದ ಬಗ್ಗೆ ಲಭ್ಯವಾಗಿರುವ ಮಾಹಿತಿಯೊಂದನ್ನು ಫಸ್ಟ್ ಪೋಸ್ಟ್ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ.
ಜಯಂತಿಯನ್ನು ಟಿಪ್ಪು ಸುಲ್ತಾನನ ಹುಟ್ಟಿದ ದಿನದಂದು ಆಚರಿಸದೇ, ಬೇರೊಂದು ದಿನದಲ್ಲಿ ಆಚರಿಸಿ ಸಿದ್ದರಾಮಯ್ಯ ಸರಕಾರ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಮುನ್ನೂರು ವರ್ಷಗಳ ನಂತರ ಸಿದ್ದರಾಮಯ್ಯ ಸರಕಾರ ತೆರಿಗೆದಾರರ ಹಣದಲ್ಲಿ ಟಿಪ್ಪು ಜಯಂತಿ ಆಚರಿಸವುದಕ್ಕೆ ಏನಾದರೂ ಅನಿವಾರ್ಯತೆ ಇತ್ತೇ, ಇದು ಓಲೈಕೆ ರಾಜಕಾರಣನಾ ಎನ್ನುವುದು ಬಹುಜನರಿಗೆ ಪ್ರಶ್ನೆಯಾಗಿಯೇ ಉಳಿದಿದೆ.
ಅಥವಾ ಈ ಹಿಂದೆ ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ವಾಲ್ಮೀಕಿ ಜಯಂತಿ, ಕನಕ ಜಯಂತಿ ಆಚರಿಸಿ, ಸರಕಾರೀ ರಜೆ ನೀಡಿರುವುದಕ್ಕೆ ಕೌಂಟರ್ ಆಗಿ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿಯನ್ನು ದಾಳವಾಗಿ ಬಳಸಿಕೊಂಡಿತೋ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. (ಅಪ್ರತಿಮ ದೇಶಭಕ್ತ ಹಜರತ್ ಟಿಪ್ಪು ಸುಲ್ತಾನ್)
ಮೂರು ಶತಮಾನದ ಹಿಂದಿನ ಟಿಪ್ಪು ಸುಲ್ತಾನನ ಸಾಮ್ರಾಜ್ಯದ ಬಗ್ಗೆ ಅವಲೋಕಿಸಿದಾಗ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿಯನ್ನು ಸರಿಯಾದ ದಿನಾಂಕದಂದು ಆಚರಿಸಲಿಲ್ಲ, ಬದಲಿಗೆ ಟಿಪ್ಪು ಜಯಂತಿ ಆಚರಿಸಿದ ದಿನವನ್ನು ಇಂದಿಗೂ ಮೇಲುಕೋಟೆಯ ಅಯ್ಯಂಗಾರ್ ಸಮುದಾಯವರು 'ಮರೆಯಲಾರರು' ಎನ್ನುವ ಮಾಹಿತಿ ಲಭ್ಯವಾಗುತ್ತದೆ.
ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಿಮ್ಮಪ್ಪ ಮಂಚಾಲೆ ಸೂರ್ಯನಾರಾಯಣ ರಾವ್, ಟಿಪ್ಪು ಜಯಂತಿ ಆಚರಣೆ ದಿನಾಂಕದ ಸಂಬಂಧ ಸರಕಾರದ ಅಸಡ್ಡೆಯ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ.. (ಮಾಹಿತಿ: ಫಸ್ಟ್ ಪೋಸ್ಟ್)

ಮೇಲುಕೋಟೆಯಲ್ಲಿ ಟಿಪ್ಪು ದೌರ್ಜನ್ಯ
ನವೆಂಬರ್ ಇಪ್ಪತ್ತು ಟಿಪ್ಪು ಸುಲ್ತಾನ ನಿಜವಾದ ಜನ್ಮದಿನ, ಆದರೆ ಸರಕಾರ ನವೆಂಬರ್ ಹತ್ತರಂದು ಜಯಂತಿ ಆಚರಿಸಿಕೊಂಡಿದೆ. ನವೆಂಬರ್ ಹತ್ತರಂದು ಟಿಪ್ಪು ಸುಲ್ತಾನ್ ಮೇಲುಕೋಟೆಯ 700 ಜನ ಅಯ್ಯಂಗಾರ್ ಸಮುದಾಯದವರನ್ನು ನೇಣಿಗೆ ಹಾಕಿದ ದಿನ ಎಂದು ಸೂರ್ಯನಾರಾಯಣ ರಾವ್ ತನ್ನ ಸ್ಟೇಟಸ್ ನಲ್ಲಿ ಹಾಕಿದ್ದಾರೆ.

ಅಯ್ಯಂಗಾರ್ ಸಮುದಾಯದವರು ದೀಪಾವಳಿ ಆಚರಿಸುವುದಿಲ್ಲ
ಹಾಗಾಗಿ ಈಗಲೂ ಮೇಲುಕೋಟೆಯ ಅಯ್ಯಂಗಾರ್ ಸಮುದಾಯದವರು ದೀಪಾವಳಿ ಹಬ್ಬ ಆಚರಿಸುವ ಕ್ರಮವಿಲ್ಲ. ಅಯ್ಯಂಗಾರ್ ಸಮುದಾಯವರೇ ಆಗಿರುವ ಮತ್ತು ಮೇಲುಕೋಟೆ ಮೂಲದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ದೀಪಾವಳಿ ಹಬ್ಬ ಆಚರಿಸುವುದಿಲ್ಲ ಎನ್ನುವ ಮಾಹಿತಿಯಿದೆ.

ಟಿಪ್ಪುವಿನ ದಬ್ಬಾಳಿಕೆ
ಟಿಪ್ಪುವಿನ ದಬ್ಬಾಳಿಕೆ ಬರೀ ಮೇಲುಕೋಟೆಯ ಅಯ್ಯಂಗಾರ್ ಸಮುದಾಯದ ಮೇಲೆ ಅಲ್ಲ, ಕೊಡವರ ಮೇಲೆ, ಮಂಗಳೂರಿನ ಕ್ಯಾಥೋಲಿಕ್ ಚರ್ಚಿನ ಮೇಲೂ ಟಿಪ್ಪು ಆಕ್ರಮಣ ನಡೆಸಿದ್ದ. ಕೇರಳದ ವಾಯಿನಾಡ್ ಮತ್ತು ಮಲಬಾರು ಪ್ರಾಂತ್ಯದ ನಾಯರ್ ಗಳ ಮೇಲೂ ಟಿಪ್ಪು ದೌರ್ಜನ್ಯ ನಡೆಸಿದ್ದ, ಎನ್ನುವುದು ಟಿಪ್ಪುವಿನ ಡೈರಿ ಮತ್ತು ಆತ ಬರೆದಿದ್ದ ಪತ್ರದ ಮೂಲಕ ತಿಳಿದು ಬರುತ್ತದೆ.

ಟಿಪ್ಪು ಜಯಂತಿಗೆ ವಿರೋಧ
ಟಿಪ್ಪು ಒಬ್ಬ ಮುಸ್ಲಿಂ ಎನ್ನುವ ಕಾರಣಕ್ಕಾಗಿ ನಾವು ಟಿಪ್ಪು ಜಯಂತಿ ವಿರೋಧಿಸುತ್ತಿಲ್ಲ. ಟಿಪ್ಪು ಒಂದು ವೇಳೆ ಹಿಂದೂ, ಕ್ರಿಶ್ಚಿಯನ್ ಆಗಿದ್ದರೂ ನಾವು ಜಯಂತಿಗೆ ವಿರೋಧಿಸುತ್ತಿದ್ದೆವು, ಯಾಕೆಂದರೆ ಕೊಡವರ ಮೇಲೆ ಆತ ನಡೆಸಿದ್ದ ದೌರ್ಜನ್ಯ, ಮತಾಂತರ ನಮ್ಮ ವಿರೋಧಕ್ಕೆ ಕಾರಣ ಎಂದು ಖಾಸಗಿ ಮನೋರಂಜನಾ ವಾಹಿನಿಯ ಉಪಾಧ್ಯಕ್ಷ ಗೌತಂ ಮಾಚಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಟಿಪ್ಪು ಜಯಂತಿ ಮೆರವಣಿಗೆ
ಟಿಪ್ಪು ಜಯಂತಿ ಸಂದರ್ಭದಲ್ಲಿ ಮೆರವಣಿಗೆಗೆ ಅನುವು ಮಾಡಿಕೊಟ್ಟ ಸರಕಾರ / ಜಿಲ್ಲಾಡಳಿತದ ಕ್ರಮ ಈಗ ಚರ್ಚೆಯ ವಿಷಯವಾಗಿದೆ. ಈ ಮೆರವಣೆಗೆಯ ವೇಳೆ ಅಹಿತಕರ ಘಟನೆ ನಡೆದದ್ದು. ಈ ಘಟನೆಗೆ ತುಪ್ಪು ಸುರಿದದ್ದು ಗಿರೀಶ್ ಕಾರ್ನಾಡ್ ಅವರ ಹೇಳಿಕೆ. ಒಟ್ಟಿನಲ್ಲಿ ಪ್ರಶಾಂತವಾಗಿದ್ದ ಕೊಡಗು ಪ್ರಕ್ಷುಬ್ದವಾಗಿದೆ.












Click it and Unblock the Notifications