ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಮೇಲ್ಸೇತುವೆಯನ್ನೂ ಮಾಡಿಲ್ಲ: ತಿರುಗೇಟು ಕೊಟ್ಟ ಡಿ.ಕೆ.ಶಿವಕುಮಾರ್
ಬೆಂಗಳೂರು, ಸೆಪ್ಟೆಂವರ್ 25: ಬಿಜೆಪಿ ಆಡಳಿತಾವಧಿಯಲ್ಲಿ ಆಗಿದ್ದಂತಹ ರಸ್ತೆಗುಂಡಿಗಳನ್ನು ನಾವು ಮುಚ್ಚುತ್ತಿದ್ದೇವೆ. ಆರ್.ಅಶೋಕ್ ಅವರಿಗೆ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಸಣ್ಣ ಪಿಲ್ಲರ್ ಕೂಡ ಹಾಕಲು ಆಗಲಿಲ್ಲ, ಒಂದೇ ಒಂದು ಮೇಲ್ಸೇತುವೆಯನ್ನೂ ಮಾಡಲಿಲ್ಲ. ನಿಮ್ಮ ಕೈಯಲ್ಲಿ ಏನೂ ಮಾಡಲು ಆಗಲಿಲ್ಲ ಎಂದೇ ಜನರು ನಮ್ಮ ಕೈಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ರಸ್ತೆಗುಂಡಿ ಮುಚ್ಚಲು ಆಗದವರು ಟನಲ್ ರಸ್ತೆ ಮಾಡಲು ಹೊರಟಿದ್ದಾರೆ ಎನ್ನುವ ಆರ್. ಅಶೋಕ್ ಅವರ ಟೀಕೆಯ ಕುರಿತು ಮಾತನಾಡಿ, ಅವರು ಕೇಂದ್ರದಿಂದ ಬೆಂಗಳೂರಿಗೆ ಒಂದೇ ಒಂದು ರೂಪಾಯಿ ಅನುದಾನ ಕೊಡಿಸಿದ್ದಾರೆಯೇ? ಬಿಜೆಪಿಯವರು ಏನೇನೂ ಮಾಡಿಲ್ಲ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು. ಎಲ್ಲೆಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆಯೋ ಅಲ್ಲಿಗೆ ಆಯಾಯ ಕ್ಷೇತ್ರದ ಶಾಸಕರು ತೆರಳಿ ಪರಿಶೀಲನೆ ನಡೆಸಲಿ. ಅವರುಗಳೇ ಪರಿಶೀಲನೆ ನಡೆಸಿ ಗುಂಡಿಗಳನ್ನು ಮುಚ್ಚಿಸಿಕೊಳ್ಳಲಿ. ಅಧಿಕಾರಿಗಳು ಅವರಿಗೂ ಗೌರವ ನೀಡುತ್ತಾರೆ. ನಾವು ಇದಕ್ಕೆ ಬೇಡ ಎಂದು ಹೇಳುತ್ತೇವೆಯೇ? ಎಂದರು.

ಗುಂಡಿಗಳನ್ನು ತರಾತುರಿಯಲ್ಲಿ ಮುಚ್ಚಲು ಆಗುವುದಿಲ್ಲ. ಗುಂಡಿಗಳ ಸುತ್ತಲು ಕತ್ತರಿಸಿ ಸರಿಯಾಗಿ ಜಲ್ಲಿ ತುಂಬಿ ನಂತರ ರೋಡ್ ರೋಲರ್ ಮೂಲಕ ದುರಸ್ಥಿ ಮಾಡಬೇಕಾಗುತ್ತದೆ. ಬಿಜೆಪಿಯವರು ಪ್ರತಿಭಟನೆ ವೇಳೆ ಗುಂಡಿ ತುಂಬಿದಂತೆ ಮಾಡಲು ಆಗುವುದಿಲ್ಲ ಎಂದು ಹೇಳಿದರು. ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ತಿಳಿಸಿ ಎಂದು ಸರ್ಕಾರದಿಂದ ರಸ್ತೆಗುಂಡಿ ಗಮನ ಎನ್ನುವ ಅಪ್ಲಿಕೇಶನ್ ಮೂಲಕ ನಾವೇ ಸಾರ್ವಜನಿಕರಿಗೆ ಕರೆಕೊಟ್ಟಿದ್ದೆವು. ಅಧಿಕಾರಿಗಳು ಗುಂಡಿಗಳನ್ನು ಮುಚ್ಚದೇ ಇರಬಹುದು ಆದರೆ ಜನರೇ ಜಾಗೃತರಾಗಿ ಮಾಹಿತಿ ನೀಡಿ ಎಂದು ಹೇಳಿದ್ದೆವು. ಸಾವಿರಾರು ಜನರು ಜಾಗಗಳನ್ನು ಗುರುತಿಸಿ ಫೋಟೋಗಳನ್ನು ಕಳುಹಿಸಿದ್ದಾರೆ. ಜೊತೆಗೆ ಸಂಚಾರಿ ಪೊಲೀಸರು ತಿಳಿಸಿದ ಜಾಗಗಳಲ್ಲಿಯೂ ಸಹ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸವಾಗುತ್ತಿದೆ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಇದುವರೆಗು ಎಷ್ಟು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ, ಗಡುವಿನ ಒಳಗೆ ಗುಂಡಿಗಳನ್ನು ಮುಚ್ಚಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ನಿರಂತರ ಪ್ರಕ್ರಿಯೆ. ಮಳೆ ಹೆಚ್ಚಾದರೆ ರಸ್ತೆಗುಂಡಿಗಳು ಉಂಟಾಗುತ್ತವೆ. ದೊಡ್ಡ ವಾಹನಗಳು ಚಲಿಸಿದರೆ ಉಂಟಾಗುತ್ತವೆ. ಈಗ ವಿಧಾನಸೌಧದ ಮುಂದೆಯೇ ರಸ್ತೆಗುಂಡಿಗಳಾಗಿವೆ. ಮುಖ್ಯರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗುವವರೆಗೆ ಈ ಸಮಸ್ಯೆ ಇದ್ದೇ ಇರುತ್ತದೆ. ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡುತ್ತಿದ್ದೇವೆ. ಜನರು ರಸ್ತೆಯಲ್ಲಿ ಕಸ ಎಸೆಯುವುದು ಸೇರಿದಂತೆ ಇತರೇ ಕೆಲಸಗಳನ್ನು ಮಾಡುವುದು ಬಿಟ್ಟು ನಮಗೆ ಸಹಕಾರ ನೀಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದರು.
ಧರ್ಮಸ್ಥಳ ಪ್ರಕರಣ ವಿಚಾರದ ಕುರಿತು ಹಾಕಿದ್ದ ಪಿಐಎಲ್ ವಜಾಗೊಂಡಿರುವ ಕುರಿತು ಮಾತನಾಡಿ, ಇದು ಸಹ ಷಡ್ಯಂತ್ರ. ಮಾಧ್ಯಮದವರು ಹಾಗೂ ಸಾರ್ವಜನಿಕರು ದೊಡ್ಡದಾಗಿ ಬಿಂಬಿಸಿದರು. ಪಿಐಎಲ್ ವಜಾಗೊಂಡಿದ್ದು ತಡವಾಗಿ ಸರ್ಕಾರದ ಗಮನಕ್ಕೆ ಬಂದಿತು. ಏಕೆಂದರೆ ಇದು ಬೇರೆ ವಿಚಾರ. ನಾವು ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡಬೇಕು ಎಂದು ಮಾಡುತ್ತಿದ್ದೇವೆ. ವರದಿ ಬಂದ ನಂತರ ಮಾತನಾಡುತ್ತೇವೆ. ಇದರ ನಡುವೆ ಸತ್ಯ ಏನಿದೆ ಎಂದು ಹೊರಗೆ ಬರುತ್ತಿದೆ. ಮಾಧ್ಯಮಗಳಿಗೆ, ಜನರಿಗೂ ಗೊತ್ತಾಗುತ್ತಿದೆ. ಇದರ ಬಗ್ಗೆ ಗೃಹ ಸಚಿವರು ಮಾತನಾಡುತ್ತಾರೆ. ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಯಾವ ಅಧಿಕಾರಿಗಳ ಬಳಿಯೂ ಹೆಚ್ಚು ಮಾತನಾಡಲು ಹೋಗಿಲ್ಲ ಎಂದರು.












Click it and Unblock the Notifications