ಬಿಜೆಪಿ ಹಣೆಬರಹಕ್ಕೆ ಇವತ್ತಿನವರೆಗೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ- ಸಚಿವ ಮಧು ಬಂಗಾರಪ್ಪ
ಬೆಳಗಾವಿ, ಸೆಪ್ಟೆಂಬರ್ 11: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಬಂದರೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಗಳು ಜೋರಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು, ಸಿದ್ದರಾಮಯ್ಯ ಸಾಹೇಬರನ್ನು ಸಿಎಂ ಸ್ಥಾನದಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಒಂದು ಸಿಸ್ಟಮ್. ಅದು ತಾನಾಗಿಯೇ ನಡೆದುಕೊಂಡು ಹೋಗುತ್ತದೆ. ಅವರು ಮುಖ್ಯಮಂತ್ರಿ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಸೆ. ಹೀಗಾಗಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಕೋರ್ಟ್‌ನಲ್ಲಿ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿಯ ಪ್ರಕರಣವೂ ಇದೆ. ಆದರೆ ಇವರಿಗೆ ಸಿದ್ದರಾಮಯ್ಯ ಅಷ್ಟೇ ಯಾಕೆ ಕಾಣುತ್ತಾರೆ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ನಮ್ಮ ತಂದೆಯವರು ಮುಖ್ಯಮಂತ್ರಿ ಇದ್ದಾಗ ಬೇಕಾದಷ್ಟು ಪ್ರಕರಣಗಳನ್ನು ನೋಡಿದ್ದೇವೆ. ಇದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದ ಅವರು, ಸಿಎಂ ರೇಸ್‌ನಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಿನವರು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ನಾನು ಅಷ್ಟು ದೊಡ್ಡ ಮನುಷ್ಯ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಗೆ ಸಿದ್ದರಾಮಯ್ಯ ಭಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಬಿಜೆಪಿ ಅಷ್ಟೇ ಅಲ್ಲ. ಜೆಡಿಎಸ್ ಸೇರಿ ಎಲ್ಲ ವಿರೋಧ ಪಕ್ಷದವರಿಗೂ ಭಯ ಇದೆ. ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಒಳ್ಳೆಯವರನ್ನು ಕೆಳಗಿಳಿಸಲು ಕುತಂತ್ರ ಇರುತ್ತದೆ. ಬಿಜೆಪಿಯವರು ಇದರಲ್ಲಿ ನಿಸ್ಸೀಮರು ಇವತ್ತಿನವರೆಗೂ ಅವರ ಹಣೆಬರಹಕ್ಕೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ ಎಂದರು.
ದೀಪಾವಳಿ ನಂತರ ಸರ್ಕಾರ ಪತನ ಆಗುತ್ತದೆ ಎಂಬ ಬಿಜೆಪಿ ನಾಯಕರು ಹೇಳಿಕೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರು ಇನ್ನೂ ನಾಲ್ಕು ದೀಪಾವಳಿ ಕಾಯಬೇಕು. ಅಲ್ಲಿಯವರೆಗೆ ಮನೆಯಲ್ಲಿ ದೀಪಾವಳಿ ಮಾಡಲು ಹೇಳಿ ಎನ್ನುವ ಮೂಲಕ ಇನ್ನೂ ನಾಲ್ಕು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುತ್ತದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮಾತು ಮುಂದುವರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬೆಳಗಾವಿಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಅಂತಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಹಳೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಮ್ಮ ತಂದೆ ಓದಿದ ಸರ್ಕಾರಿ ಶಾಲೆಯಲ್ಲಿ ಶಾಲೆಗೆ ನಾನು ಹತ್ತು ಲಕ್ಷ ಅನುದಾನ ಕೊಟ್ಟಿದ್ದೇನೆ. 30 ಸಾವಿರ ಹಳೆಯ ವಿದ್ಯಾರ್ಥಿಗಳು ಸಂಘ 20 ಸಾವಿರ ವ್ಯಾಟ್ಸಪ್ ಗ್ರೂಪ್ ಮಾಡಲಾಗಿದೆ ಎಂದರು.












Click it and Unblock the Notifications