ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನೀರಿಲ್ಲದೆ ವ್ಯಕ್ತಿ ಸಾವು

ಹೌದು ಶುಕ್ರವಾರ ಮಧ್ಯಾಹ್ನ ಸುಭಾಷ್ ಎಸ್ ನಾಯಕ್ (63) ಎಂಬುವವರು ಆಸ್ಪತ್ರೆಯ ದುರವಸ್ಥೆಯಿಂದಾಗಿ ಸಾವನ್ನಪ್ಪಿದ್ದಾರೆ. ಸುಭಾಷ್ ಅವರು ಬುಧವಾರ ಮತ್ತು ಗುರುವಾರ ಕಾರವಾರ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಮೊದಲಿಂದಲೂ ಚಿಕಿತ್ಸೆ ಪಡೆಯುತ್ತಾ ಬಂದಿದ್ದ ಸುಭಾಷ್. ತನಗೆ ಡಯಾಲಿಸಿಸ್ ಮಾಡಿ ಎಂದು ವೈದ್ಯರಲ್ಲಿ ಕೋರಿದ್ದಾರೆ.
ಆದರೆ ವೈದ್ಯರು ಏನಂದಿದ್ದಾರೆ ಗೊತ್ತಾ!? ಆಸ್ಪತ್ರೆಗೆ ನೀರು ಸರಬರಾಜು ಆಗುತ್ತಿಲ್ಲ. ಡಯಾಲಿಸಿಸ್ ಗೆ ನೀರು ಬೇಕಾಗುತ್ತದೆ. ಹಾಗಾಗಿ ತಮಗೆ ಡಯಾಲಿಸಿಸ್ ನೀಡಲಾಗದು ಎಂದು ವಾಪಸ್ ಕಳುಹಿಸಿದ್ದಾರೆ.
ಆದಾಗ್ಯೂ ಮತ್ತೆ ಶುಕ್ರವಾರ ಸುಭಾಷ್ ಅವರು ಆಸ್ಪತ್ರೆಗೆ ಬಂದು ಸಮಯ ಮಿಂಚುತ್ತಿದೆ. ತಮಗೆ ಅಗತ್ಯ ಡಯಾಲಿಸಿಸ್ ಮಾಡಿ ಎಂದು ಗೋಗರೆದಿದ್ದಾರೆ. ಕೊನೆಗೆ ವೈದ್ಯರು ಶುಕ್ರವಾರ ಮಧ್ಯಾಹ್ನದ ವೇಳೆಗೆ ಡಯಾಲಿಸಿಸ್ ಗೆ ಏರ್ಪಾಡು ಮಾಡುತ್ತಿರುವಾಗಲೇ ಡಯಾಲಿಸಿಸ್ ಘಟಕದ ಸಮ್ಮುಖದಲ್ಲೇ ಸುಭಾಷ್ ಅವರ ಪ್ರಾಣಪಕ್ಷಿ ಹಾರಿಹೋಗಿದೆ.
ಸಾವಿನ ನಂತರ ಎಚ್ಚೆತ್ತಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೀರಿನ ಸಮಸ್ಯೆಯನ್ನು ಜಿಲ್ಲಾ ವೈದ್ಯಾಧಿಕಾರಿ ನಾಗರಾಜ್ ನಾಯ್ಕ್ ಅವರ ಗಮನಕ್ಕೆ ತಂದಿದ್ದಾರೆ. ವೈದ್ಯಾಧಿಕಾರಿಯು ಸಮರ್ಪಕ ನೀರು ವ್ಯವಸ್ಥೆಗೆ ಆದೇಶಿಸಿದ್ದಾರೆ. ಆದರೆ ಈ ಮಧ್ಯೆ ಹೋದ ಜೀವ ವಾಪಸು ಬರುವುದೇ? ಎಂದು ಜನ ಕೇಳುವಂತಾಗಿದೆ.
ಮೃತ ಸುಭಾಷ್ ನಾಯಕ್ ಅವರಿಗೆ ಪತ್ನಿ, ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. ಸರಕಾರಿ ಆಸ್ಪತ್ರೆ ಎಂದಾಕ್ಷಣ ಡಯಾಲಿಸಿಸ್ ಎಲ್ಲಾ ಉಚಿತವಾಗಿರುತ್ತದೆ ಅಂತೇನೂ ಇಲ್ಲ. ಚಿಕಿತ್ಸೆ ಪಡೆಯುವವರು ಶುಲ್ಕ ತೆರುತ್ತಾರೆ. ಹಾಗೆ ಶುಲ್ಕ ರೂಪದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 34 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಆದರೆ ಅದರ ಬಳಕೆಯಾಗಿಲ್ಲ! ಅದೇ ಹಣದಿಂದ ಬೋರ್ ವೆಲ್ ಹಾಕಿಸಿ ನೀರಿನ ವ್ಯವಸ್ಥೆ ಮಾಡಿಸಬಹುದಿತ್ತಲ್ಲಾ ಎಂದು ಕಾರವಾರದ ಜನ ಕೇಳುತ್ತಿದ್ದಾರೆ.
ಈ ಮಧ್ಯೆ, ಜಿಲ್ಲಾಸ್ಪತ್ರೆಯಲ್ಲಿ ನರರೋಗ ತಜ್ಞರ ಹುದ್ದೆಗಳು ದೀರ್ಘಾವಧಿಯಿಂದ ಖಾಲಿ ಬಿದ್ದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ನಾಗರಾಜ್ ನಾಯ್ಕ್ ಅವರು ಗಮನ ಸೆಳೆದಿದ್ದಾರೆ. ಆರೋಗ್ಯ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿರುವ ಯುಟಿ ಖಾದರ್ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವರೆಂದು ಆಶಿಸೋಣ.












Click it and Unblock the Notifications