ಮತ್ತೆ ಕೆಎಸ್ಆರ್‌ಟಿಸಿ, ಬಿಎಂಟಿಸಿ ದರ ಇಳಿಸೋಲ್ಲಾ
ಬೆಂಗಳೂರು, ಫೆ. 10 : ಪುನಃ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರಗಳನ್ನು ಕಡಿಮೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವುದರಿಂದ ದರ ಪರಿಷ್ಕರಣೆ ಅಸಾಧ್ಯ ಎಂದು ಹೇಳಿದ್ದಾರೆ.
ಸೋಮವಾರದ ವಿಧಾನಪರಿಷತ್ ಕಲಾಪದಲ್ಲಿ ಜೆಡಿಎಸ್‌ನ ಇ.ಕೃಷ್ಣಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ತಿಂಗಳಿನಿಂದ ಡೀಸೆಲ್ ದರದಲ್ಲಿ ಒಟ್ಟಾರೆ 14 ರೂ. ಇಳಿಕೆ ಯಾಗಿದೆ. ಆದರೆ, ಅದು ಸಾರಿಗೆ ಸಂಂಸ್ಥೆಗಳಿಗೆ ಕೇವಲ 10 ರೂ. ಅನ್ವಯವಾಗುತ್ತದೆ ಎಂದರು.

ಕೆಎಸ್‌ಆರ್‌ಟಿಸಿ 163 ಕೋಟಿ ಹಾಗೂ ಬಿಎಂಟಿಸಿ 145 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಒಂದು ವೇಳೆ ಸರ್ಕಾರ ಸಬ್ಸಿಡಿ ನೀಡಿದರೆ ದರ ಇಳಿಕೆಯ ಬಗ್ಗೆ ಆಲೋಚಿಸಬಹುದು ಎಂದು ಹೇಳಿದರು. ಸಚಿವ ರಾಮಲಿಂಗಾ ರೆಡ್ಡಿ ಅವರ ಉತ್ತರಕ್ಕೆ ಪ್ರತಿಪಕ್ಷ ನಾಯಕ ಈಶ್ವರಪ್ಪ ಹಾಗೂ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದರು, ದರ ಇಳಿಕೆ ಮಾಡುವಂತೆ ಒತ್ತಾಯಿಸಿದರು. [ಬಸ್ ದರ ಕಡಿತ : ಯಾವ ನಗರಗಳಿಗೆ ಎಷ್ಟು ರೂ.]
ಜನವರಿ 7 ರಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರವನ್ನು ಇಳಿಕೆ ಮಾಡಲಾಗಿದೆ. ಸದ್ಯ, ಡೀಸೆಲ್ ಬೆಲೆ ಮತ್ತೆ ಕಡಿಮೆಯಾಗಿದ್ದರೂ, ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳ ಒತ್ತಾಯಕ್ಕೆ ಸಚಿವರು ಉತ್ತರ ನೀಡಿದರು. [ಪೀಣ್ಯ ನಿಲ್ದಾಣ ಸ್ಥಳಾಂತರ : ಸಚಿವರು ಹೇಳುವುದೇನು?]
ಸದ್ಯ, ಸಾರಿಗೆ ಸಂಸ್ಥೆ 1400 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದ್ದು, ವಾರ್ಷಿಕ 51 ಕೋಟಿ ರೂ. ಬಡ್ಡಿ ಪಾವತಿಸುತ್ತಿದೆ. ಬಸ್ ನಿಲ್ದಾಣ ಹಾಗೂ ಇತರೆ ಸೌಕರ್ಯ ಒಳಗೊಂಡಂತೆ 473 ಕೋಟಿ ರೂ. ಮೊತ್ತದ ಕಾಮಗಾರಿ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.[ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 50 ರು ಗಿಂತ ಕಡಿಮೆ!]
ಡೀಸೆಲ್ ದರ ಇಳಿಕೆಯಾದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ತೈಲ ಬೆಲೆ ಹೆಚ್ಚಾದಾಗ ಟಿಕೆಟ್ ದರ ಹೆಚ್ಚಿಸುವ ನೀವು, ಬೆಲೆ ಕಡಿಮೆಯಾದಾಗ ಟಿಕೆಟ್ ದರ ಕಡಿಮೆ ಮಾಡಬೇಕು ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಅಂದಹಾಗೆ ಫೆಬ್ರವರಿ 3ರಂದು ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿತ್ತು. ಜನವರಿ ತಿಂಗಳಿನಲ್ಲಿ ಎರಡು ಬಾರಿ ಇಳಿಕೆಯಾಗಿದ್ದ ಇಂಧನ ದರ ಫೆಬ್ರವರಿಯಲ್ಲಿ ಮತ್ತೊಮ್ಮೆ ಕಡಿಮೆಯಾಗಿತ್ತು. ಡಿಸೇಲ್ ದರ ಪ್ರತಿ ಲೀಟರ್ ಗೆ 50 ರೂ. ಗಿಂತ ಕಡಿಮೆಯಾಗಿತ್ತು.












Click it and Unblock the Notifications