ಅವಧಿ ಮುನ್ನ ಚುನಾವಣೆಯ ಯಾವುದೇ ಪ್ರಸ್ತಾವನೆ ಇಲ್ಲ : ಬಸವರಾಜ ಬೊಮ್ಮಾಯಿ
ಬೆಳಗಾವಿ,ಡಿಸೆಂಬರ್ 22: ಕೋವಿಡ್ ನಿಂದಾಗಿ ಅವಧಿ ಮುನ್ನವೇ ಚುನಾವಣೆ ನಡೆಯಲಿದೆ ಹಾಗೂ ದಿಲ್ಲಿಯ ನಾಯಕರು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ದಿಲ್ಲಿಯ ನಾಯಕರು ಈ ವಿಚಾರವಾಗಿ ಮಾತನಾಡಿಲ್ಲ. ಅವಧಿಗೂ ಮುನ್ನವೇ ಚುನಾವಣೆ ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟೀಕರಿಸುತ್ತೇನೆ ಎಂದರು.
ಕೋವಿಡ್ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಕ್ಕಾಗಿ ಇಂದು ಸಭೆ
ಕೋವಿಡ್ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ದೊಡ್ಡ ಪ್ರಮಾಣದಲ್ಲಿ ಹಾಗೂ ವಿವಿಧ ತಳಿಗಳಲ್ಲಿ ಬರುತ್ತಿದೆ. ಹೊಸ ತಳಿ ಕಂಡುಬಂದಿದ್ದು ವೇಗದಲ್ಲಿ ಹರುಡುತ್ತಿರುವ ಮಾಹಿತಿಗಳ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ನಡೆಸಲಾಗುತ್ತಿದೆ. ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು, ತಂಜ್ಞರ ಸಮಿತಿಯೊಂದಿಗೆ ಚರ್ಚಿಸಿ, ರಾಜ್ಯದಲ್ಲಿ ಕೋವಿಡ್ ನ್ನು ನಿಯಂತ್ರಿಸಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಬಗ್ಗೆ ಭಯ ಆತಂಕ ಪಡುವ ಅಗತ್ಯವಿಲ್ಲ. ತಜ್ಞರ ಸಲಹೆಗಳನ್ನು ಪರಿಪಾಲನೆ ಮಾಡುವ ಮೂಲಕ ಕೋವಿಡ್ ನ್ನು ಸಂಪೂರ್ಣ ನಿಯಂತ್ರಣ ಮಾಡಬಹುದು. ಬೂಸ್ಟರ್ ಡೋಸ್ ನ್ನು ಕಾರ್ಯಕ್ರಮವನ್ನು ರೂಪಿಸುವ ಸಾಧ್ಯತೆ ಇಂದಿನ ಸಭೆಯಲ್ಲಿದೆ ಎಂದರು.
ಮಾಜಿ ಸಚಿವರಾದ ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿಯವರು ನಿನ್ನೆ ಭೇಟಿಯಾಗಿದ್ದು, ತಮ್ಮನ್ನು ಸಚಿವ ಸಂಪುಟದಲ್ಲಿ ವಿಸ್ತರಿಸುವ ಬಗ್ಗೆ ಕೇಳಿದ್ದರು. ನಾನು ನವದೆಹಲಿಗೆ ಹೋದಾಗ ಈ ಬಗ್ಗೆ ಮಾಡಿರುವ ಚರ್ಚೆಯ ವಿವರಗಳನ್ನು ಅವರಿಗೆ ನೀಡಿದ್ದೇನೆ. ಇಷ್ಟರಲ್ಲಿಯೇ ಮತ್ತೊಮ್ಮೆ ನವದೆಹಲಿಗೆ ಭೇಟಿ ನೀಡಿ ಈ ವಿಚಾರ ಹಾಗೂ ಇನ್ನಿತರ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಸಚಿವ ಸಂಪುಟ ವಿಸ್ತರಣೆ, ಅದರ ಅಗತ್ಯತೆಗಳ ಬಗ್ಗೆ ವಿವರಿಸಲಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನವನ್ನು ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.

ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ತನ್ನ ನಿಲುವನ್ನು ಗಟ್ಟಿಯಾಗಿ ಮಂಡಿಸಲಿದೆ
ಮಹಾರಾಷ್ಟ್ರದಿಂದ ನೀರು ಬಿಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬ ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಹೇಳಿಕೆಯನ್ನು ವಿಪಕ್ಷ ಸದಸ್ಯರು ಹೇಳಿದ್ದು, ಎಲ್ಲ ನದಿಗಳು ಮೂರ್ನಾಲ್ಕು ರಾಜ್ಯಗಳಲ್ಲಿ ಹರಿಯುತ್ತಿದೆ. ಅಂತರರಾಜ್ಯ ನದಿಗಳು ಅಂತರರಾಜ್ಯ ಜಲ ವಿವಾದ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ರಾಜ್ಯಗಳ ನಡುವೆ ನಿಲುವುಗಳಲ್ಲಿ ವ್ಯತ್ಯಾಸವಿದ್ದರೂ, ಇಂತಹ ಹೇಳಿಕೆಗಳನ್ನು ನೀಡಬಾರದು. ಇಂತಹ ಉದ್ಘಟತನದ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾರ್ಯಗತ ಮಾಡುವುದು ಸಾಧ್ಯವಿಲ್ಲ. ರಾಜ್ಯಗಳ ನಡುವೆ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಈಗಾಗಲೇ ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅಲ್ಲಿ ಅವರು ಹೋರಾಡಲಿ. ಸಂವಿಧಾನ ಪ್ರಕಾರ ರಾಜ್ಯ ನಿಲುವು ಸರಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ವಾದವನ್ನು ಗಟ್ಟಿಯಾಗಿ ಮಂಡಿಸಲಾಗುವುದು ಎಂದರು.
ಸಂಜಯ್ ರಾವತ್ ಅವರು ಚೀನಾ ಸೇನೆ ಭಾರತಕ್ಕೆ ನುಗ್ಗಿದಂತೆ, ಬೆಳಗಾವಿಗೆ ನುಗ್ಗುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಂಜಯ್ ರಾವತ್ ಅವರ ಪ್ರಾಮುಖ್ಯತೆ ಏನು ಎಂದು ಎಲ್ಲರಿಗೂ ತಿಳಿದಿದೆ. ಅವರು ಸದಾ ಪ್ರಚೋದನಕಾರಿ ಹೇಳಿಕೆಗಳನ್ನೇ ನೀಡುತ್ತಾರೆ. ಅವರು ಚೈನಾದಂತೆ ಬಂದರೆ ಕನ್ನಡಿಗರು ಭಾರತೀಯ ಸೈನ್ಯದಂತೆ ಅವರನ್ನು ಹಿಮ್ಮೆಟ್ಟಿಸುತ್ತೇವೆ ಎಂದರು.
ಕೋವಿಡ್ ಆತಂಕ, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ: ಡಾ.ಕೆ ಸುಧಾಕರ್
ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು. ಕೋವಿಡ್ ಪ್ರಕರಣಗಳು ಚೀನಾ ಮತ್ತೆ ಕೆಲವು ದೇಶಗಳಲ್ಲಿ ಹೆಚ್ಚಾಗಿದೆ. ನಮ್ಮ ದೇಶದ ಕೆಲವು ಜಿಲ್ಲೆಗಳಲ್ಲಿ ಬಿಎಫ್7 ತಳಿ ಒಂದು ಕಂಡು ಬಂದಿದೆ. ಹೀಗಾಗಿ ರಾಜ್ಯದ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ ಎಂದರು.

ಕೊವೀಡ್ ತಾಂತ್ರಿಕ ತಜ್ಞರು ಕೂಡ ವೀಡಿಯೋ ಕಾನ್ಪೆರೆನ್ಸ್ ಮೂಲಕ ಭಾಗವಹಿಸುತ್ತಾರೆ. ಈ ಸಭೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಮಾಡುವ ನಿರ್ಧಾರ ಆಗಿದೆ. ನೆರೆ ದೇಶಗಳ ಕೋವಿಡ್ ಹಾಗೂ ರಾಜ್ಯದ ಕೋವಿಡ್ ಸ್ಥಿತಿಗತಿ ಅಧ್ಯಯನ ಮಾಡೋದಕ್ಕೆ ಈ ಸಭೆ ಪ್ರಮುಖವಾಗಿದೆ ಎಂದರು.
ಒಮೈಕ್ರಾನ್ ನಲ್ಲಿ ಇದು ಒಂದು ತಳಿಯಾಗಿದೆ. ಹೀಗಾಗಿ ತಳಿಯ ಪರಿಣಾಮದ ಬಗ್ಗೆ ಗುರುವಾರ ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಮೀಸಲಾತಿ ವಿಚಾರವಾಗಿ ಮಾತನಾಡಿ, ಒಕ್ಕಲಿಗ ಸಮುದಾಯ ಕೃಷಿಯನ್ನೇ ನಂಬಿಕೊಂಡಿದೆ. ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟಿದೆ. ನಿರ್ಮಲಾನಂದ ಶ್ರೀಗಳು ಹೋರಾಟ ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ಸಭೆ ಮಾಡ್ತೇವೆ. ನ್ಯಾಯಯುತ ಬೇಡಿಕೆಗಳ ಬಗ್ಗೆ ಸಿಎಂಗೆ ಮನವಿ ಮಾಡ್ತೇವೆ ಎಂದರು.












Click it and Unblock the Notifications