ಸರ್ಕಾರದ ಸಾಧನೆಗಳ ವೈಭವೀಕರಣ ಅಗತ್ಯವಿರಲಿಲ್ಲ: ದೇಶಪಾಂಡೆ
ಬೆಂಗಳೂರು, ಜುಲೈ 27 : "ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವರ್ಷದ ಸಾಧನೆಗಳ ಹೊತ್ತಿಗೆ ಬಿಡುಗಡೆಯನ್ನು ಜಿಲ್ಲಾಮಟ್ಟದ ಕಾರ್ಯಕ್ರಮಗಳ ಮೂಲಕ ಆಯೋಜಿಸುತ್ತಿರುವುದು ವಿಷಾದನೀಯ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಹೇಳಿದರು.
Recommended Video
ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸರ್ಕಾರದ ಸಾಧನೆಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
"ಕೊರೊನಾ ಮಹಾಮಾರಿಯಿಂದ ಜನತೆ ತೀವ್ರ ಸಂಕಷ್ಟದಲ್ಲಿದ್ದು ಭಯದ ವಾತಾವರಣದಲ್ಲಿ ಬದುಕನ್ನು ಕಳೆಯುತ್ತಿದ್ದಾರೆ. ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿವೆ. ಸಂಪನ್ಮೂಲ ಕ್ರೋಢಿಕರಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಾಧನೆಗಳ ವೈಭವೀಕರಣ ಅಗತ್ಯವಿರಲಿಲ್ಲ" ಎಂದು ದೇಶಪಾಂಡೆ ತಿಳಿಸಿದರು.

"ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದೆ . ಅನಗತ್ಯ ತಪ್ಪು ನಿರ್ಧಾರಗಳು, ಅಕ್ರಮಗಳು, ಸಂಪುಟದಲ್ಲಿ ಹೊಂದಾಣಿಕೆ ಇಲ್ಲದಿರುವುದು ಇವುಗಳಿಂದ ಕೊರೊನಾ ನಿಯಂತ್ರಣವೇ ಸಾಧ್ಯವಾಗುತ್ತಿಲ್ಲ. ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಇದಕ್ಕೆ ಸಾಕ್ಷಿ" ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು.
"ಲಾಕ್ ಡೌನ್ ಜಾರಿಯಾದ ದಿನದಿಂದ ಆರೋಗ್ಯ ಸೇವೆ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಗಮನ ವಹಿಸದೇ ಇದ್ದದ್ದು ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಏರಿಸದಿದದ್ದು ಇದಕ್ಕೆ ಕಾರಣವೆಂಬುದು ನನ್ನ ಅನಿಸಿಕೆ" ಎಂದರು.
"ಇತ್ತೀಚಿನ ದಿನಗಳಲ್ಲಿ ಸುಗ್ರೀವಾಜ್ಞೆಗಳ ಮೂಲಕ ಪ್ರಮುಖ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುತ್ತಿದೆ ಸುಗ್ರೀವಾಜ್ಞೆ ಕೇವಲ ತುರ್ತು ಸಂದರ್ಭಗಳಿಗೆ ಮಾತ್ರ ಬಳಸುವ ಅಸ್ತ್ರ. ಆದರೆ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ, ಪರ ವಿರೋಧಗಳ ಬಗ್ಗೆ ಶಾಸನ ಸಭೆಗಳಲ್ಲಿ ಚರ್ಚಿಸದೆ ವಾಮ ಮಾರ್ಗದ ಮೂಲಕ ತಿದ್ದುಪಡಿ ತರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಂಚಾಗಿದೆ" ಎಂದು ದೇಶಪಾಂಡೆ ಆರೋಪಿಸಿದ್ದಾರೆ.
"ರೈತರ ಹಾಗೂ ಕಾರ್ಮಿಕ ವರ್ಗದವರ ಹಿತಾಸಕ್ತಿಯನ್ನು ಪರಿಗಣಿಸದೆ ಭೂ ಸುಧಾರಣೆ ಹಾಗೂ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದಿರುವುದೇ ಇದಕ್ಕೆ ನಿದರ್ಶನ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾವುದೇ ಸರಕಾರ ಈ ತರಹದ ಪ್ರಮಾದ ಮಾಡಿರಲಿಲ್ಲ. ಇದು ತುಂಬ ನೋವಿನ ಸಂಗತಿ. ಮುಖ್ಯಮಂತ್ರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಕಂಡ ಅಭಿವೃದ್ಧಿಯ ಕನಸುಗಳು ಇನ್ನೂ ಕನಸಾಗಿಯೇ ಉಳಿದಿದೆ" ಎಂದು ದೇಶಪಾಂಡೆ ಹೇಳಿದರು.
"ಇಂತಹ ಅನಗತ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಕೈಬಿಟ್ಟು ಸರ್ಕಾರ ಸಮರೋಪಾದಿಯಲ್ಲಿ ಕೊರೊನಾ ನಿಯಂತ್ರಣ, ಪರೀಕ್ಷಾ ಸೌಲಭ್ಯ ವಿಸ್ತರಣೆ ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನು ಕಲ್ಪಿಸುವಲ್ಲಿ ಗಮನ ಹರಿಸಲಿ" ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.












Click it and Unblock the Notifications