ಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ: ಚರ್ಚೆಯಾಗಿದ್ದೇನು?
ಬೆಂಗಳೂರು, ಅಕ್ಟೋಬರ್ 28: 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು 2024 ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಫುನ್ ಆ್ಯಕ್ಟಿವ್ ಆಗಿದ್ದಾರೆ.
ಹೌದು, ಲೋಕಸಭಾ ಚುನಾವಣೆ ಹಿನ್ನಲೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ಈ ಹಿಂದೆ ಮೈತ್ರಿ ವಿಚಾರವಾಗಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿ ಮೈತ್ರಿ ಹಾಗೂ ಕ್ಷೇತ್ರ ಹಂಚಿಕೆ ಕುರಿತು ಮಾತುಕತೆ ನಡೆಸಿದ್ರು, ಈ ವೇಳೆ ಕುಮಾರಸ್ವಾಮಿ ಅವರು ತಮ್ಮ ಪುತ್ರರಾದ ನಿಖಿಲ್ ಕುಮಾರಸ್ವಾಮಿ ಅವರನ್ನ ಕರೆದುಕೊಂಡು ಹೋಗಿದ್ದು, ಸಾಕಷ್ಟು ಅನುಮಾನಗಳಿಗೂ ಕಾರಣವಾಗಿತ್ತು.

ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ರು, ಆದರೆ, ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರನ್ನು ಜೆಡಿಎಸ್ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನ ನಡೆಸಿದ್ರು, ಆದ್ರೆ, ಇದೀಗ ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, 2024 ರ ಲೋಕಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಖಚಿತವಾಗಿದ್ದು, ಇದೀಗ ಯೋಗಿ ಆದಿತ್ಯನಾಥ್ ಅವರನ್ನ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇನ್ನೂ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರೇ ಯೋಗಿ ಆದಿತ್ಯನಾಥ್ ಪ್ರಚಾರಕ್ಕೆ ಬರುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ಚರ್ಚೆ ನಿಖಿಲ್ ಕುಮಾರಸ್ವಾಮಿ ಅವರು ಪುತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಯೋಗಿ ಆದಿತ್ಯನಾಥ್ ಅವರು ಪಾಠ ಮಾಡಿದ್ದಾರೆ. ಅಲ್ಲದೇ ಭೇಟಿ ವೇಳೆ ನಿಖಿಲ್, ಯೋಗಿ ಆದಿತ್ಯನಾಥ್ ಅವರಿಗೆ ರಾಮ, ಲಕ್ಷ್ಮಣ, ಸೀತೆ ವಿಗ್ರಹ ಗಿಫ್ಟ್ ಮಾಡಿದ್ದಾರೆ.
ನಿಖಿಲ್ ಕುಮಾರ್ ಟ್ವೀಟ್ ನಲ್ಲಿ ಹೇಳಿದ್ದೇನು?
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಉತ್ತರ ಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳನ್ನು ಅವರು ಹಂಚಿಕೊಂಡರು. ಅವರು ಅತ್ಯಂತ ಪ್ರೀತಿ, ವಾತ್ಸಲ್ಯದಿಂದ ನನ್ನನ್ನು ಬರಮಾಡಿಕೊಂಡು ಆಶೀರ್ವದಿಸಿದರು. ಪ್ರೀತಿಯಿಂದ ಸತ್ಕರಿಸಿದ ನಿಮಗೆ ಧನ್ಯವಾದಗಳು ಯೋಗಿ ಜೀ... ಎಂದು ನಿಖಿಲ್ ಫೋಸ್ ಹಂಚಿಕೊಂಡಿದ್ದಾರೆ.












Click it and Unblock the Notifications