ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತಿಮ?
ರಾಮನಗರ, ಮಾರ್ಚ್ 07; ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲವೆಂಬ ವಿಚಾರ ಪ್ರಚಲಿತದಲ್ಲಿದೆ. ಹಾಗಾದರೆ ಜೆಡಿಎಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು?.
ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯಲ್ಲಿ ಜೆಡಿಎಸ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ನೀಡಿರುವ ಹೇಳಿಕೆ ಹೊಸ ಲೆಕ್ಕಾಚಾರ ಹುಟ್ಟು ಹಾಕಿದೆ. ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾದಂತಾಗಿದೆ.
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿರುವುದರಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಬಹುದು ಎಂಬುದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಲೆಕ್ಕಾಚಾರವಾಗಿದೆ. ಹೀಗಾಗಿ ರಾಮನಗರದ ಬಿಡದಿಯ ತಮ್ಮ ತೋಟದ ಮನೆಯನ್ನೇ ಪಕ್ಷದ ಕಾರ್ಯ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿಕೊಂಡಿರುವ ಅವರು, ಅಲ್ಲಿ ಕುಳಿತೇ ಮುಂದಿನ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಮುಂದಿನ ಸ್ಪರ್ಧೆಗೆ ತಯಾರಿಯಂತೆ ಗೋಚರಿಸುತ್ತಿದೆ. ಮಂಡ್ಯದಿಂದ ಮಗ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪಯಣ ಆರಂಭವಾಗಬಹುದೆಂದು ನಂಬಿದ್ದ ಕುಮಾರಸ್ವಾಮಿ ಕನಸಿಗೆ ಸುಮಲತಾ ಅಂಬರೀಶ್ ಸ್ಪರ್ಧೆ ತಣ್ಣೀರು ಎರಚಿತು.

ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯ ಕುಸಿತ?
ಮಂಡ್ಯ ಕ್ಷೇತ್ರದಲ್ಲಿ ಪುತ್ರ ಸಂಸದನಾಗಲಿಲ್ಲ ಎಂಬ ಕೊರಗು ಎಚ್. ಡಿ. ಕುಮಾರಸ್ವಾಮಿಯನ್ನೂ ಈಗಲೂ ಕಾಡುತ್ತಿದೆ. ಜತೆಗೆ ಆ ನಂತರದ ಬೆಳವಣಿಗೆಗಳು ಮಂಡ್ಯದಲ್ಲಿ ಜೆಡಿಎಸ್‌ಗೆ ಆಶಾದಾಯಕವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಲೋಕಸಭಾ ಚುನಾವಣೆ ನಂತರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೋಲಾಗಿದ್ದು, ಬಿಜೆಪಿ ಖಾತೆ ತೆರೆಯುವಂತಾಯಿತು. ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋಲು ಕಂಡು ಕಾಂಗ್ರೆಸ್ ಗೆಲ್ಲುವಂತಾಯಿತು.
ರಾಜ್ಯದ ರಾಜಕೀಯ ಪರಿಸ್ಥತಿಯನ್ನು ನೋಡಿದರೆ ಮುಂದಿನ ವಿಧಾನಸಭಾ ಚುನಾವಣೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅಷ್ಟೊಂದು ಅನುಕೂಲವಾಗಿರುವಂತೆ ಗೋಚರಿಸುತ್ತಿಲ್ಲ. ಆಡಳಿತ ವಿರೋಧಿ ಅಲೆ ಸೃಷ್ಟಿಸುವತ್ತ ಕಾಂಗ್ರೆಸ್ ಸರ್ವ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರೂ ಅದು ಅಷ್ಟೊಂದಾಗಿ ಕೆಲಸ ಮಾಡುತ್ತಿಲ್ಲ.

ಬಸವರಾಜ ಬೊಮ್ಮಾಯಿ ಪ್ರತಿತಂತ್ರಗಳು
ಪ್ರತಿಪಕ್ಷವಾದ ಕಾಂಗ್ರೆಸ್ ಆರಂಭದಿಂದಲೂ ತೆಪ್ಪಗಿದ್ದು, ಈಗ ಬೇರೆ, ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದರೆ ಅದು ರಾಜಕೀಯ ಪ್ರೇರಿತ, ಚುನಾವಣಾ ಗಿಮಿಕ್ ಎಂಬಂತೆ ಭಾಸವಾಗುತ್ತಿದೆ. ರಾಜಕೀಯ ತಂತ್ರವನ್ನು ಚೆನ್ನಾಗಿ ಬಲ್ಲ, ಜನತಾ ಪರಿವಾರದಲ್ಲಿ ಬೆಳೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ಎಲ್ಲ ತಂತ್ರಗಳಿಗೂ ಪ್ರತಿತಂತ್ರ ಹೂಡುವ ಚಾಣಾಕ್ಷ್ಯತನ ಬೆಳೆಸಿಕೊಂಡಿದ್ದಾರೆ.
ಇನ್ನೊಂದೆಡೆ ರಾಮನಗರದಲ್ಲಿ ಮೇಕೆದಾಟು ಪಾದಯಾತ್ರೆ ಹುಟ್ಟುಹಾಕಿ ರಾಜಕೀಯವಾಗಿ ಜೆಡಿಎಸ್ ಮತ್ತು ಬಿಜೆಪಿಗೆ ಟಾಂಗ್ ಕೊಡಲು ಹೊರಟ ಕಾಂಗ್ರೆಸ್‌ಗೆ ಹೇಳಿಕೊಳ್ಳುವಂತಹ ಲಾಭವಾದಂತೆ ಕಾಣುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಮನಗರದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟವಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಕುಮಾರಸ್ವಾಮಿ ಮತ್ತು ಡಿಕೆಶಿಗೆ ಪ್ರತಿಷ್ಠೆಯ ವಿಚಾರವೂ ಹೌದು. ಇಲ್ಲಿ ಸಿ. ಪಿ. ಯೋಗೇಶ್ವರ್ ಅವರಿಂದಾಗಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಉಳಿದಂತೆ ತೀವ್ರ ಪೈಪೋಟಿ ಎದುರಿಸುತ್ತಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಎನ್ನುವುದಂತು ಸತ್ಯ.

ರಾಮನಗರದಿಂದ ನಿಖಿಲ್ ಸ್ಪರ್ಧೆ ಫಿಕ್ಸ್?
ರಾಮನಗರದಲ್ಲಿ ಪಾದಯಾತ್ರೆ ಮೂಲಕ ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಒಕ್ಕಲಿಗರು ಮತ್ತು ರೈತರು ಜೆಡಿಎಸ್ ಪರವಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿಗೆ ರಾಜಕೀಯ ಬದುಕು ಕಟ್ಟಿಕೊಟ್ಟಿದ್ದೇ ರಾಮನಗರ. ಅಲ್ಲಿನ ಜನರ ನಾಡಿ ಮಿಡಿತ ಅರಿಯುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಇದೀಗ ರಾಮನಗರ ಜನರ ಮಡಿಲಿಗೆ ಮಗನನ್ನು ಹಾಕಿದರೆ ಅವರು ಕೈಬಿಡುವುದಿಲ್ಲ ಎಂಬ ನಂಬಿಕೆ ಕುಮಾರಸ್ವಾಮಿ ಅವರದ್ದಾಗಿದೆ. ಕುಮಾರಸ್ವಾಮಿ ಎಲ್ಲಿಯೂ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದಲೇ ಸ್ಪರ್ಧಿಸುತ್ತಾರೆ ಎಂಬುದನ್ನು ಹೇಳಿಲ್ಲ. ಆದರೆ ವದಂತಿಗಳು ಮಾತ್ರ ಹರಡುತ್ತಲೇ ಇದೆ. ಹೀಗಿರುವಾಗಲೇ ಕಿಕ್ಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, "ನಿಖಿಲ್ ಕುಮಾರಸ್ವಾಮಿಗೆ ಮುಂದಿನ ಭವಿಷ್ಯವಿದೆ ಸೂರ್ಯ ಹುಟ್ಟುವುದು ಎಷ್ಟು ಸತ್ಯನೋ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಶಾಸಕರಗುವುದು ಅಷ್ಟೇ ಸತ್ಯ" ಎಂದು ಡಾ. ಸೂರಜ್ ನೀಡಿರುವ ಹೇಳಿಕೆ ರಾಮನಗರದಿಂದ ನಿಖಿಲ್ ಸ್ಪರ್ಧೆ ಫಿಕ್ಸ್ ಎಂಬುದಕ್ಕೆ ಪುಷ್ಠಿ ನೀಡಿದಂತಿದೆ.

ಹೇಗಿರಲಿದೆ ಎಚ್. ಡಿ. ಕುಮಾರಸ್ವಾಮಿ ತಂತ್ರ?
ಜೆಡಿಎಸ್ ಪಕ್ಷದಲ್ಲಿದ್ದ ಒಂದಷ್ಟು ನಾಯಕರು ಪಕ್ಷವನ್ನು ತೊರೆದಿದ್ದು, ಚುನಾವಣೆ ವೇಳೆಗೆ ಇನ್ನೊಂದಷ್ಟು ನಾಯಕರು ಹೊರ ಹೋದರೂ ಅಚ್ಚರಿಪಡುವಂತಿಲ್ಲ. ಆದರೆ ಇರುವ ನಾಯಕರನ್ನು ಬಳಸಿಕೊಂಡು ಪಕ್ಷ ಸಂಘಟನೆ ಮಾಡುವ ಚಿಂತನೆಯಲ್ಲಿರುವ ಕುಮಾರಸ್ವಾಮಿ ಚುನಾವಣೆ ಹೊತ್ತಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನ ಅತೃಪ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದರೂ ಅಚ್ಚರಿಪಡಬೇಕಾಗಿಲ್ಲ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳೆರಡು ಬಹುಮತ ಪಡೆದು ಅಧಿಕಾರ ಹಿಡಿಯುವುದು ಅಂದುಕೊಂಡಷ್ಟು ಸುಲಭವಲ್ಲ. ಆದ್ದರಿಂದ ಜೆಡಿಎಸ್ ಸ್ಥಾನಗಳನ್ನು ಹೆಚ್ಚು ಪಡೆದಷ್ಟು ಲಾಭವೇ.












Click it and Unblock the Notifications