Nikhil Kamath: ಕನ್ನಡಿಗರ ಮನಸ್ಸು ಗೆದ್ದ ಉದ್ಯಮಿ ನಿಖಿಲ್ ಕಾಮತ್, ಬೆಂಗಳೂರು - ಕರ್ನಾಟಕದ ಬಗ್ಗೆ ಹೇಳಿದ್ದೇನು, ವೈರಲ್
ಉದ್ಯಮಿ, ಝೆರೋಧಾ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು, ಬೆಂಗಳೂರು ಹಾಗೂ ಕರ್ನಾಟಕ ಬಗ್ಗೆ ಮಾತನಾಡಿದ್ದು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಅಭಿವೃದ್ಧಿ ವಿಚಾರದ ಬಗ್ಗೆ ನಿಖಿಲ್ ಕಾಮತ್ ಅವರು ಮಾತನಾಡಿದ್ದಾರೆ.
ನಿಖಿಲ್ ಕಾಮತ್ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ಕರ್ನಾಟಕದಿಂದ ಬರುವು ಹೆಚ್ಚಿನ ಆದಾಯವನ್ನು ಉತ್ತರ ಪ್ರದೇಶ ಮತ್ತು ಬಿಹಾರ ರೀತಿಯ ರಾಜ್ಯಗಳಿಗೆ ಏಕೆ ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಏಕೆಂದರೆ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳ ಜನರೂ ಕರ್ನಾಟಕದಲ್ಲಿ ಕೆಲಸ ಮಾಡುತ್ತಾ ರಾಜ್ಯದ ತೆರಿಗೆ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅವರು ಕರ್ನಾಟಕದಲ್ಲಿ ಉದ್ಯೋಗ ಪಡೆದಿದ್ದರೂ, ಆ ಉದ್ಯೋಗಕ್ಕೆ ಅರ್ಹರಾಗುವಂತೆ ಅವರನ್ನು ಬೆಳೆಸಲು ಅವರ ಸ್ವಂತ ರಾಜ್ಯಗಳು ಶಿಕ್ಷಣ ಮತ್ತು ಉತ್ತಮ ವಾತಾವರಣ ಒದಗಿಸುವ ಮೂಲಕ ಹೂಡಿಕೆ ಮಾಡಿವೆ.

ಮಗುವಿನ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದರಿಂದ ಸ್ವಂತ ರಾಜ್ಯ ಯಾವ ಪ್ರಯೋಜನಗಳನ್ನು ಪಡೆಯಲಿದೆ, ಇದರಿಂದ ಅವರು ಹೆಚ್ಚಿನ ಸಂಬಳದ ಕೆಲಸವನ್ನು ಪಡೆಯಬಹುದು ಮತ್ತು ತೆರಿಗೆ ಆದಾಯಕ್ಕೆ ಕೊಡುಗೆ ನೀಡಬಹುದು, ನೀವು ಆದಾಯವನ್ನು ಅವರಿಗೆ ವರ್ಗಾಯಿಸದಿದ್ದರೆ, ಅದು ಅವರಿಗೆ ಅನ್ಯಾಯವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕವು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದರೂ, ಅದಕ್ಕೆ ತಕ್ಕ ಆದಾಯದ ಪಾಲು ಸಿಗುತ್ತಿದೆಯೇ ಎಂದು ನಿಖಿಲ್ ಕಾಮತ್ ಪ್ರಶ್ನಿಸಿದ್ದಾರೆ. ಇದೀಗ ಬೆಂಗಳೂರಿನ ಅವಕಾಶಗಳು, ಉತ್ತಮ ಮೂಲಸೌಕರ್ಯ ಮತ್ತು ಹೆಚ್ಚಿನ ಸಂಬಳದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವ ಹೊರರಾಜ್ಯದ ಕೆಲವರು ಇದ್ದಕ್ಕಿದ್ದಂತೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ. ಕರ್ನಾಟಕವು ನೀಡುವ ತೆರಿಗೆಗೆ ನ್ಯಾಯಯುತ ಪಾಲು ಕೇಳಿದಾಗ ಮಾತ್ರ ಕೆಲವರಿಗೆ ರಾಷ್ಟ್ರೀಯತೆ ನೆನಪಾಗುವುದು ವಿಪರ್ಯಾಸ. ಕರ್ನಾಟಕ ಯಾರ ಬಳಿಯೂ ದಾನ ಕೇಳುತ್ತಿಲ್ಲ. ತನಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದೆ ಎಂದು ಹೇಳಲಾಗಿದೆ.
ಈ ವಿಷಯವು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಚರ್ಚೆ ಆಗುತ್ತಿದೆ. ನಿಖಿಲ್ ಕಾಮತ್ ಅವರ ಮಾತಿಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರುಣ್ ಜಾವಗಲ್ ಅವರು, ನಿಕಿಲ್ ಕಾಮತ್ ಅವರು ಕರ್ನಾಟಕದ ತೆರಿಗೆ ದುಡ್ಡನ್ನು ಉತ್ತರದ ಕೆಲವು ರಾಜ್ಯಗಳಲ್ಲಿ ಹಂಚುವ ವಿಚಾರವಾಗಿ ಮಾತನಾಡಿದ್ದನ್ನು ನೋಡಿದೆ, ಈ ವಿಚಾರ ಹೊಸದೇನಲ್ಲಾ, ಇದನ್ನು ಅನೇಕ ದಶಕಗಳಿಂದಲೂ ಅನೇಕ ಸ್ವಾಭಿಮಾನಿ ಕನ್ನಡಿಗರು ಮಾತನಾಡುತ್ತಲೇ ಇದ್ದಾರೆ. ನಾನೂ ಸಹ ಕಳೆದ 21 ವರ್ಷದಿಂದ ಕರ್ನಾಟಕದಲ್ಲಿ ಸಂಗ್ರಹವಾಗುವ ತೆರಿಗೆ ದುಡ್ಡಲ್ಲಿ ಹೆಚ್ಚಿನ ಪಾಲು ಕರ್ನಾಟಕದಲ್ಲೇ ಬಳಕೆಯಾಗುವಂತೆ ಸರಿಯಾದ ಒಕ್ಕೂಟ ವ್ಯವಸ್ತೆ ಜಾರಿಗೆ ಬರಬೇಕೆನ್ನುವ ಅನೇಕ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಈ ವಿಚಾರದಲ್ಲಿ ಗಟ್ಟಿಯಾದ ರಾಜಕೀಯ ಹೋರಾಟವಾಗಿಲ್ಲ ಎಂದಿದ್ದಾರೆ.
ಕನ್ನಡಿಗರು ಗಟ್ಟಿಯಾದ ಕರ್ನಾಟಕ ಕೇಂದ್ರಿತ ರಾಜಕೀಯ ಹೋರಾಟ ನಡೆಸದ ಕಾರಣದಿಂದ ಒಕ್ಕೂಟ ತತ್ವಗಳನ್ನೇ ಬುಡಮೇಲು ಮಾಡಿದ ಕಾಂಗ್ರೆಸ್ ಇತ್ತೀಚಿನ ದಿನದಲ್ಲಿ ತೆರಿಗೆ ಹಂಚಿಕೆ ವಿಚಾರವಾಗಿ ಮಾತನಾಡುವ ಮೂಲಕ ಕರ್ನಾಟಕ ಕೇಂದ್ರಿತ ರಾಜಕೀಯದ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಇದೇ ಸಮಯದಲ್ಲಿ ಬಿಜೆಪಿ ದೆಹಲಿ ಹೈಕಮಾಂಡ್‌ನ ಭಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದರೂ ಬಾಯಿಗೆ ಬೀಗ ಹಾಕಿ ಕೂತಿದೆ. ಈ ನಡುವೆ, ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ಬಿಜೆಪಿಯೊಳಗೆ ವಿಲೀನವಾದಂತೆ ಕಂಡು ಕರ್ನಾಟಕ ಕೇಂದ್ರಿತ ರಾಜಕೀಯದಿಂದ ದೂರ ನಿಂತಿದೆ.
ಕರ್ನಾಟಕದ ರಾಜಕೀಯ ಪರಿಸ್ಥಿತಿ ಈ ರೀತಿ ಇರುವಾಗ ಕರ್ನಾಟಕದ ತೆರಿಗೆ ದುಡ್ಡುನ್ನು ಉತ್ತರದ ರಾಜ್ಯಗಳಲ್ಲಿ ಹಂಚುವುದನ್ನು ವಿರೋಧಿಸುವುದಕ್ಕೆ ಮತ್ತು ಸುಭದ್ರ ಕರ್ನಾಟಕದ ಪರವಾದ ಗಟ್ಟಿಯಾದ ಕರ್ನಾಟಕ ಕೇಂದ್ರಿತ ರಾಜಕೀಯ ಶಕ್ತಿಯ ಅವಶ್ಯಕತೆ ಎದ್ದುಕಾಣಿಸುತ್ತಿದೆ. ಯಾರೋ ಕರ್ನಾಟಕ ಕೇಂದ್ರಿತ ರಾಜಕೀಯ ಹೋರಾಟವನ್ನು ಕಟ್ಟಲಿ ಎಂದು ಕಾಯುವುದಾ ಅಥವಾ ಆ ಕೆಲಸವನ್ನು ಮಾಡಲು ಮುಂದಾಗುವುದಾ ಎನ್ನುವ ಪ್ರಶ್ನೆಗಳು ಮೂಡುತ್ತಿದೆ. ಇಂದು ರಾಜಕೀಯ ಹೊರಾಟವನ್ನು ಕಟ್ಟುವುದು ಸುಲಭದ ಮಾತಲ್ಲ ಎನ್ನುವುದು ವಾಸ್ತವ, ಸುಲಭವಲ್ಲ ಎಂದ ಮಾತ್ರಕ್ಕೆ ಆಗುವುದೇ ಇಲ್ಲ ಎನ್ನುವುದಲ್ಲ.
ಕರ್ನಾಟಕ ಕೇಂದ್ರಿತವಾದ ರಾಜಕೀಯ ಶಕ್ತಿಯನ್ನು ಕಟ್ಟುವವರು ಯಾರು, ಯಾರೋ ಇಂದಿನ ರಾಜಕಾರಣಿಗಳು, ಪ್ರಮುಖರು ಅಥವಾ ಒಕ್ಕೂಟ ತತ್ವದ ವಿರೋಧಿ ಪಕ್ಷಗಳು ಅವರ ಸ್ವಂತ ಲಾಭಕ್ಕಾಗಿ ಪ್ರಾದೇಶಿಕತೆಯ ಹೆಸರಲ್ಲಿ ಹೋರಾಟ ರೂಪಿಸಿದರೆ ನಿಜಕ್ಕೂ ಅದು ನಾಡಿಗೆ ಎಷ್ಟರ ಮಟ್ಟಿಗೆ ಲಾಭ ಮಾಡುತ್ತದೆ ಎನ್ನುವ ಪ್ರಶ್ನೆ. ಒಟ್ಟಾರೆ ಈ ಎಲ್ಲಾ ಪ್ರಶ್ನೆಗಳ ನಡುವೆ, ಒಂದು ಮಹತ್ವದ ತೀರ್ಮಾನವನ್ನು ಮತ್ತು ಮುಂದಿನ ಹೋರಾಟದ ನಡೆಗಳನ್ನು ನಿರ್ಧರಿಸುವ ಹಂತದಲ್ಲಿದ್ದೇನೆ. ಕೆಲವೇ ದಿನದಲ್ಲಿ ಇನ್ನಷ್ಟು ವಿಚಾರ ತಿಳಿಸಲಾಗುವುದು, ಎಂದಿನಂತೆ ನಾಡಪರ ಕೆಲಸಗಳಿಗೆ ಬೆಂಬಲವಿರಲಿ ಎಂದು ಹೇಳಿದ್ದಾರೆ.
Well said @nikhilkamathcio avare. Greater decentralization and state autonomy is the only way to make India better. https://t.co/nzEetyRgMt
— PLE Karnataka (@PLEKarnataka) October 31, 2026


Click it and Unblock the Notifications
