NICE Site: ಸಿಎಂ ಡಿಕೆ ಶಿವಕುಮಾರ್‌ಗೆ ದೇವೇಗೌಡರ ಸುದೀರ್ಘ ಪತ್ರ: ಕುತೂಹಲಕ್ಕೆ ಕಾರಣವಾದ ಪತ್ರದ ಲಾಸ್ಟ್ ಲೈನ್!

ಬೆಂಗಳೂರು: ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆ (BMICP)ಗಾಗಿ ಭೂಮಿ ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್‌ (NICEL)ಗೆ ರಾಜ್ಯ ಸಚಿವ ಸಂಪುಟ ನಿರ್ದೇಶನ ನೀಡಿರುವ ವಿಚಾರ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಸಂಬಂಧ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸೆಪ್ಟೆಂಬರ್‌ 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ BMICP ಯೋಜನೆಗಾಗಿ ಜಮೀನು ಕಳೆದುಕೊಂಡವರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು NICELಗೆ ನಿರ್ದೇಶನ ನೀಡಲಾಗಿದೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ತೀರ್ಪಿನ ಸಮ್ಮತಿ ಇದೆ ಎಂದು ಸರ್ಕಾರ ಭಾವಿಸಿರುವುದು ಆಘಾತಕಾರಿ ಎಂದು ಅವರು ಹೇಳಿದ್ದಾರೆ.

NICE Site Former Prime Minister HD Deve Gowda Writes Lengthy Letter to Karnataka CM DK Shivakumar

ಕಾನೂನಿನ ಆಡಳಿತಕ್ಕೆ ವಿರುದ್ಧವಲ್ಲವೇ?

ಸುಪ್ರೀಂ ಕೋರ್ಟ್‌ ತೀರ್ಪುಗಳು ಮತ್ತು ಈ ಹಿಂದೆ ರಾಜ್ಯ ಸರ್ಕಾರವೇ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿನ ನಿಲುವಿಗೆ ವಿರುದ್ಧವಾಗಿ ಇದೀಗ ನಿವೇಶನ ಹಂಚಿಕೆಗೆ ಅನುಮತಿ ನೀಡಿರುವುದು ಹೇಗೆ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

2016ರಲ್ಲಿ ಕಾಂಗ್ರೆಸ್ಸರ್ಕಾರವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಎರಡು ಪ್ರಮಾಣಪತ್ರಗಳಲ್ಲಿ, ರಸ್ತೆ ಇಂಟರ್‌ಚೇಂಜ್‌ಗಳಲ್ಲಿ ನಿವೇಶನಗಳ ನಿರ್ಮಾಣಕ್ಕೆ ಅನುಮತಿ ನೀಡುವುದು 1997ರ ಫ್ರೇಮ್‌ವರ್ಕ್‌ ಅಗ್ರಿಮೆಂಟ್‌ (FWA)ಗೆ ವಿರುದ್ಧವಾಗುತ್ತದೆ ಎಂದು ತಿಳಿಸಿತ್ತು. ರಸ್ತೆ ಮತ್ತು ರಸ್ತೆ ಮೂಲಸೌಕರ್ಯಕ್ಕಾಗಿ ನೀಡಿರುವ ಜಮೀನಿನಲ್ಲಿ ನಿವೇಶನ ನಿರ್ಮಾಣಕ್ಕೆ ಅವಕಾಶ ನೀಡಿದರೆ ಅದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ ಎಂಬ ನಿಲುವನ್ನು ಅಂದಿನ ಸರ್ಕಾರ ಹೊಂದಿತ್ತು ಎಂದು ದೇವೇಗೌಡರು ನೆನಪಿಸಿದ್ದಾರೆ. ‌

ಹೈಕೋರ್ಟ್‌ನ ವಿಭಾಗೀಯ ಪೀಠವು ಇಂಟರ್‌ಚೇಂಜ್‌ ಜಮೀನುಗಳಲ್ಲಿ ವಸತಿ ಯೋಜನೆ ನಿರ್ಮಾಣಕ್ಕೆ NICELಗೆ ಅವಕಾಶವಿದೆ ಎಂದು ನೀಡಿದ್ದ ತೀರ್ಪನ್ನು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಬಳಿಕ ಸುಪ್ರೀಂ ಕೋರ್ಟ್‌ ಸರ್ಕಾರದ ನಿಲುವನ್ನು ಎತ್ತಿಹಿಡಿದು, NICEL ಸಂಸ್ಥೆಯು FWA ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿತ್ತು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

BMICP ಮೂಲ ಉದ್ದೇಶಕ್ಕೆ ಧಕ್ಕೆ

ಇಂಟರ್‌ಚೇಂಜ್‌ಗಳು ಹಾಗೂ ರಸ್ತೆ ಮತ್ತು ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಹಸ್ತಾಂತರಿಸಲಾದ ಜಮೀನುಗಳಲ್ಲಿ ನಿವೇಶನ ನಿರ್ಮಿಸುವುದಕ್ಕೆ FWAನಲ್ಲಿ ಯಾವುದೇ ಆಧಾರವಿಲ್ಲ. ಅಲ್ಲದೆ, ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದು BMICP ಯೋಜನೆಯ ಮೂಲ ಉದ್ದೇಶವಾಗಿದ್ದು, ಇಂತಹ ಜಮೀನುಗಳಲ್ಲಿ ವಸತಿ ಬಡಾವಣೆ ನಿರ್ಮಿಸುವುದು ಯೋಜನೆಯ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು ಎಂದು ದೇವೇಗೌಡರು ತಿಳಿಸಿದ್ದಾರೆ.

ಭೂಮಿ ಕಳೆದುಕೊಂಡವರಿಗೆ ಪರಿಹಾರವಾಗಿ ನಿವೇಶನ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿರುವುದನ್ನೂ ಅವರು ಪ್ರಶ್ನಿಸಿದ್ದಾರೆ. ಮಾರ್ಚ್‌ 2023ರಲ್ಲಿ ಹೈಕೋರ್ಟ್‌ ವಿಚಾರಣೆ ವೇಳೆ, FWA ಪ್ರಕಾರ ರಸ್ತೆ ಮತ್ತು ರಸ್ತೆ ಮೂಲಸೌಕರ್ಯಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ನಿವೇಶನ ನಿರ್ಮಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಂತ್ರಸ್ತರಿಗೆ ನಿವೇಶನ ನೀಡುವ NICEL ಮನವಿಯನ್ನು ತಿರಸ್ಕರಿಸಿದ್ದಾಗಿ ಸರ್ಕಾರವೇ ನ್ಯಾಯಾಲಯಕ್ಕೆ ತಿಳಿಸಿತ್ತು ಎಂದು ಅವರು ಹೇಳಿದ್ದಾರೆ. ‌

ಈ ವರ್ಷದ ಜನವರಿಯಲ್ಲಿಯೂ ಹೈಕೋರ್ಟ್‌ FWAಗೆ ವಿರುದ್ಧವಾಗಿ ಇಂಟರ್‌ಚೇಂಜ್‌ ಅಥವಾ ರಸ್ತೆಗಾಗಿ ನೀಡಿರುವ ಜಮೀನಿನಲ್ಲಿ ನಿವೇಶನ ನಿರ್ಮಿಸಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

13 ಗ್ರಾಮಗಳ ಜಮೀನುಗಳ ಬಗ್ಗೆ ಪ್ರಶ್ನೆ

ಮಾದಾವರ, ಕೋಡಿಗೆಹಳ್ಳಿ, ಕೆಂಗೇರಿ, ಕೊಮ್ಮಘಟ್ಟ, ವರಾಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತಾನಹಳ್ಳಿ, ಯು.ಎಂ. ಕಾವಲ್‌, ಚಿಕ್ಕತೋಗೂರು, ಪಂತರಪಾಳ್ಯ, ಕೆ.ಜಿ. ಶ್ರೀಕಂಠಪುರ ಹಾಗೂ ಗಂಗೊಂಡನಹಳ್ಳಿ ಗ್ರಾಮಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂಬ ವರದಿಗಳನ್ನೂ ದೇವೇಗೌಡರು ಪ್ರಸ್ತಾಪಿಸಿದ್ದಾರೆ.

ಈ ಗ್ರಾಮಗಳಲ್ಲಿನ ಜಮೀನುಗಳು BMICP ಯೋಜನೆಯ ರಸ್ತೆ ಅಥವಾ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಸೇರಿವೆ ಎಂಬುದು ಸಾರ್ವಜನಿಕ ದಾಖಲೆಗಳಿಂದ ತಿಳಿದುಬರುತ್ತದೆ. ಹಾಗಿದ್ದರೆ ಈ ನಿವೇಶನಗಳನ್ನು ಯಾವಾಗ ನಿರ್ಮಿಸಲಾಯಿತು? ಅವುಗಳ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು? ಎಂದು ಅವರು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.

NICEL ಹಣಕಾಸು ವ್ಯವಹಾರಗಳ ಬಗ್ಗೆಯೂ ಪ್ರಶ್ನೆ

ಜುಲೈ 2026ರಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು NICELನ ಬ್ಯಾಲೆನ್ಸ್‌ಶೀಟ್‌ಗಳನ್ನು ಗಮನಿಸಿತ್ತು. ಭೂ ಮಾರಾಟ ಮತ್ತು ಜಂಟಿ ಅಭಿವೃದ್ಧಿ ಒಪ್ಪಂದಗಳಿಗೆ (JDA) ಸಂಬಂಧಿಸಿದಂತೆ ₹36 ಕೋಟಿಯಿಂದ ₹48 ಕೋಟಿವರೆಗೆ ಮುಂಗಡ ಮೊತ್ತಗಳನ್ನು ನಿರಂತರವಾಗಿ ತೋರಿಸಿರುವುದನ್ನು ನ್ಯಾಯಾಲಯ ಉಲ್ಲೇಖಿಸಿತ್ತು ಎಂದು ದೇವೇಗೌಡರು ಹೇಳಿದ್ದಾರೆ.

ಅಭಿವೃದ್ಧಿಪಡಿಸಿದ ಜಮೀನುಗಳ ಮಾರಾಟ, JDA, ಯೋಜನಾ ಜಮೀನುಗಳ ನಗದೀಕರಣ ಹಾಗೂ ಟೋಲ್‌ ಸಂಗ್ರಹಣೆ ಕಂಪನಿಯ ಆದಾಯದ ಪ್ರಮುಖ ಮೂಲಗಳಾಗಿದ್ದರೆ, ಪೂರ್ಣಗೊಂಡ ಲಿಂಕ್‌ ರಸ್ತೆ ಮತ್ತು ಪೆರಿಫೆರಲ್‌ ರಸ್ತೆಯ ಭಾಗಗಳನ್ನು ಕಂಪನಿಯ ಹಣಕಾಸು ವಿವರಗಳಲ್ಲಿ ಆಸ್ತಿಗಳಾಗಿ ತೋರಿಸಲಾಗಿದೆ ಎಂಬ ಅಂಶವನ್ನೂ ಅವರು ಪ್ರಸ್ತಾಪಿಸಿದ್ದಾರೆ.

ಈ ಯೋಜನೆಯಿಂದ ಸಾರ್ವಜನಿಕ ಹಿತಾಸಕ್ತಿ ಈಡೇರಿಸುವ ಬದಲು ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳಿಗೆ ಅನುಕೂಲವಾಗಿದೆ ಎಂಬ ರೀತಿಯಲ್ಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ದೇವೇಗೌಡರು ತಿಳಿಸಿದ್ದಾರೆ.

ನಿಜವಾದ ಫಲಾನುಭವಿಗಳು ಯಾರು?

NICELನ ಖಾತೆಗಳ ವಿಧಿವಿಜ್ಞಾನ ಲೆಕ್ಕಪರಿಶೋಧನೆ (Forensic Audit) ನಡೆಸಬೇಕೆಂಬ ವಿಚಾರದಲ್ಲಿಯೂ ನ್ಯಾಯಾಲಯ ಈ ಹಿಂದೆ ಪ್ರಶ್ನೆಗಳನ್ನು ಎತ್ತಿತ್ತು. ಸರ್ಕಾರವೇ ಯೋಜನೆಯ ಪ್ರವರ್ತಕರಿಗೆ ಕಾನೂನುಬಾಹಿರವಾಗಿ ಲಾಭವಾಗಲು ಸಹಕರಿಸುತ್ತಿದೆಯೇ ಎಂಬ ಅನುಮಾನವನ್ನು ನ್ಯಾಯಾಲಯ ವ್ಯಕ್ತಪಡಿಸಿತ್ತು ಎಂದು ದೇವೇಗೌಡರು ಪತ್ರದಲ್ಲಿ ಹೇಳಿದ್ದಾರೆ.

"ನ್ಯಾಯಾಲಯ ವ್ಯಕ್ತಪಡಿಸಿದ್ದ ಆ ಅನುಮಾನವನ್ನು ನಿಮ್ಮ ಸಂಪುಟದ ಇತ್ತೀಚಿನ ನಿರ್ಧಾರ ನಿಜವೆಂದು ಸಾಬೀತುಪಡಿಸುತ್ತಿದೆಯೇ? ಸುಪ್ರೀಂ ಕೋರ್ಟ್‌ ತೀರ್ಪುಗಳಿಗೆ ಮತ್ತು ಈ ಹಿಂದೆ ಸರ್ಕಾರವೇ ಹೊಂದಿದ್ದ ನಿಲುವಿಗೆ ವಿರುದ್ಧವಾಗಿ ನಿವೇಶನಗಳ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆಯೇ?" ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

ಅಂತಿಮವಾಗಿ, ಈ ನಿವೇಶನಗಳ ನಿಜವಾದ ಫಲಾನುಭವಿಗಳು ಭೂಮಿ ಕಳೆದುಕೊಂಡ ಸಂತ್ರಸ್ತರೋ ಅಥವಾ NICEL ಹಾಗೂ ಅದರ ಹೂಡಿಕೆದಾರರೋ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳೇ, ಆ ಹೂಡಿಕೆದಾರರು ನಿಮ್ಮ ಸಂಪುಟದಲ್ಲಿದ್ದಾರೆಯೇ? ಎಂಬ ತೀಕ್ಷ್ಣ ಪ್ರಶ್ನೆಯನ್ನೂ ದೇವೇಗೌಡರು ಪತ್ರದ ಮೂಲಕ ಎತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+