ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದೆಲ್ಲೆಡೆ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 25: ಮುಂದಿನ 48 ಗಂಟೆಗಳೊಳಗೆ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಂಗಳೂರು, ಪಣಂಬೂರ್, ಮಧುಗಿರಿ, ಹಿರಿಯೂರು, ಚಿಕ್ಕಮಗಳೂರಿನಲ್ಲಿ ಶುಕ್ರವಾರ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 42.7 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ,ಹಾಸನ, ಕೊಡಗು, ಮಂಡ್ಯ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ಮೈಸೂರಿನಲ್ಲಿ ಹೆಚ್ಚಿನ ಮಳೆಯಾಗಲಿದೆ.

ರಾಜ್ಯದಲ್ಲಿ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಮುಂದುವರಿದಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್, ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಶನಿವಾರ ಸಂಜೆ ಅಲ್ಲಲ್ಲಿ ಮಳೆಯಾಗಿದೆ. ಇನ್ನು, ದಕ್ಷಿಣ ಕರ್ನಾಟಕದ ಭಾಗದಲ್ಲಿ ಭಾರೀ ಮಳೆ ಆಗಲಿದೆಯಂತೆ. ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಭಾಗದ ಜನತೆಗೆ ಈಗಾಗಲೇ ಹವಾಮಾನ ಇಲಾಖೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.
ಗುರುವಾರ ರಾತ್ರಿಯಿಂದಲೇ ವರುಣನ ಆರ್ಭಟ ಆರಂಭವಾಗಿದೆ. ಕೊಡಗು ಭಾಗದಲ್ಲಿ ಈಗಾಗಲೇ ಮಳೆ ಜೋರಾಗಿದೆ. ಹೀಗಾಗಿ ಜನತೆ ಈ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಗುಡು-ಮಿಂಚು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಚಿಕ್ಕದಾಗಿ ಕಾಣಿಸಿಕೊಂಡಿದ್ದ ಮಳೆ ಶುಕ್ರವಾರ ಬೆಳಗ್ಗೆ 6.30ರ ವೇಳೆಗೆ ರೌದ್ರ ನರ್ತನ ಆರಂಭಿಸಿತ್ತು. ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್ ಆರ್ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.












Click it and Unblock the Notifications