New Year 2025: 2024ಕ್ಕೆ ಗುಡ್ ಬೈ 2025 ಹಾಯ್ ಹೇಳುವುದಕ್ಕೆ ಕ್ಷಣಗಣನೆ ಶುರು: ರಾಜ್ಯದೆಲ್ಲೆಡೆ ಸಿದ್ಧತೆ
ಬೆಂಗಳೂರು ಡಿಸೆಂಬರ್ 31: 2024ಕ್ಕೆ ಗುಡ್ ಬೈ ಹೇಳಿ 2025ಕ್ಕೆ ಹಾಯ್ ಹೇಳುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಸಿದ್ದತೆಗಳು ಭರದಿಂದ ಸಾಗಿವೆ. ಕಡಲ ತೀರಗಳು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಜನ ಭೇಟಿ ನೀಡಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಾ ಹೊಸ ವರ್ಷದ ಆಚರಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ರಾಜ್ಯದೆಲ್ಲೆಡೆ ಹೊಸ ವರ್ಷದ ಆಚರಣೆಯ ಸಿದ್ಧತೆ ಹೇಗಿದೆ ಎಂದು ತಿಳಿಯೋಣ.
ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಕಾವಲು ಇರಿಸಲಾಗಿದೆ. ಅಲ್ಲದೆ ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಇದರ ಮೇಲ್ವಿಚಾರಣೆಗೆ ನಾಲ್ಕು ಸಬ್ ಇನ್ಪೆಕ್ಟರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಹದ್ದಿನ ಕಣ್ಣು ಇಟ್ಟಿದೆ. ಇನ್ನೂ ಬಹುತೇಕ ಬೆಂಗಳೂರಿನ ಜನ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಹಾಗಾದರೆ ರಾಜ್ಯದ ಇತರ ಪ್ರವಾಸಿ ತಾಣಗಳಲ್ಲಿ ಹೇಗಿದೆ ಹೊಸ ವರ್ಷದ ಆಚರಣೆ ತಯಾರಿ ಎನ್ನುವುದನ್ನು ಈಗ ತಿಳಿಯೋಣ.

ಚಿಕ್ಕಮಗಳೂರಿನಲ್ಲಿ ಜೋರಾದ ಹೊಸ ವರ್ಷದ ಆಚರಣೆ
ಹೊಸ ವರ್ಷಾಚರಣೆಗೆ ಕಾಫಿನಾಡು ಚಿಕ್ಕಮಗಳೂರಿಗೆ ರಾಜ್ಯಾದ್ಯಂತ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಇಂದು ಸಂಜೆ ಆರು ಗಂಟೆಯಿಂದ ಬೆಳಗ್ಗೆ ನಾಲ್ಕು ಗಂಟೆವರೆಗೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧ ವಿಧಿಸಲಾಗಿದೆ. ನೈತಿಕ ಪೊಲೀಸ್ ಗಿರಿ ವಿಧಿಸಲಾಗಿದೆ.
ಬಾರ್ ಆಂಡ್ ರೆಸ್ಟೋರೆಂಟ್ ಗಳಿಗೆ ಎಚ್ಚರಿಕೆ ನೀಡಲಾಗಿದೆ. ರಾತ್ರಿ ಹತ್ತು ಗಂಟೆ ನಂತರ ಯಾವುದೇ ಡಿಜೆ ಸೌಂಡ್ ಬಳಸುವಂತಿಲ್ಲ. ಪ್ರವಾಸಿ ತಾಣಗಳಲ್ಲಿ ಆಚರಣೆ ಮಾಡುವಂತಿಲ್ಲ. ಹೀಗೆ ಹಲವಾರು ನಿರ್ಬಂಧವನ್ನು ಹೇರಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಕಾರವಾರ ಬೀಚ್‌ನಲ್ಲಿ ಪ್ರವಾಸಿರ ಸಡಗರ ಸಂಭ್ರಮ
ಇನ್ನೂ ಹೊಸ ವರ್ಷದ ಆಚರಣೆಗೆ ಕಾರವಾರ ಬೀಚ್ ಅನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹೀಗಾಗಿ ಜಿಲ್ಲಾಡಳಿತ ಸುರಕ್ಷತೆ ಕ್ರಮ ಕೈಗೊಂಡಿದೆ. ಗೋಕರಣ ಸಮುದ್ರ ಭಾಗದಲ್ಲಿ ಕೆಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಜನ ಸಾಗರವೇ ಸೇರಲಿದೆ. ಇದರಿಂದಾಗಿ ಕಡಲ ತೀರ ಬಣ್ಣ ಬಣ್ಣದ ಲೈಟುಗಳಿಂದ ಜಗಮಗಿಸುತ್ತಿದೆ. ಹೀಗಾಗಿ ಎಲ್ಲೆಡೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ರಾತ್ರಿ ಹನ್ನೆರಡು ಗಂಟೆ ನಂತರ ಯಾವುದೇ ಕಾರ್ಯಕ್ರಮ ನಡೆಯುವಂತಿಲ್ಲ. ಸಂಜೆ ಆರು ಗಂಟೆಯ ನಂತರ ಸಮುದ್ರದ ನೀರಿಗೆ ಇಳಿಯುವಂತಿಲ್ಲ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸ್ ಹದ್ದಿನ ಕಣ್ಣು
ಜೊತೆಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊಸ ವರ್ಷದ ಆಚರಣೆಗೆ ಸಿದ್ಧತೆಗಳು ಜೋರಾಗಿದೆ. ಸಂಜೆ ಹಲವಾರು ಕಾರ್ಯಕ್ರಮಗಳು ನಡೆಯಲಿದ್ದು ಹಲವಾರು ಸ್ಥಳಗಳಲ್ಲಿ ಪೊಲೀಸ್ ಹದ್ದಿನ ಕಣ್ಣು ಇಟ್ಟಿದೆ. ಜಿಲ್ಲೆಯ ವಿವಿಧ ಕಾರ್ಯಕ್ರಮಗಳಿಗೆ ಗಾಯಕರು, ನೃತ್ಯಗಾರರು ಆಗಮಿಸುತ್ತಿದ್ದಾರೆ. ಇದಕ್ಕಾಗಿ ಬೀದಿಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಅಲ್ಲದೆ ಬೃಹತ್ ಕೇಕ್‌ಗಳನ್ನು ತಯಾರಿಸಲಾಗುತ್ತಿದ್ದು ಆಚರಣೆಗೆ ಸಿದ್ಧತೆಗಳು ಜೋರಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ನಿರ್ಬಂಧ
ಇನ್ನೂ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇಂದು ಸಂಜೆ ಏಳು ಗಂಟೆಯಿಂದ ಆರು ಗಂಟೆ ವರೆಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಹೊಸ ವರ್ಷದ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಲಾಗಿದೆ. ಬೆಟ್ಟಕ್ಕೆ ಹೋಗುವ ಪ್ರವಾಸಿಗರೂ ಬೇಗ ಹೊರಬರಬೇಕು ಎಂದು ಸೂಚನೆ ನೀಡಲಾಗಿದೆ.
ಮೈಸೂರಿನಲ್ಲಿ ಹೊಸ ವರ್ಷ ಬರಮಾಡಿಕೊಳ್ಳಲು ತಯಾರಿ ಜೋರಾಗಿದೆ. ಸಾವಿರಾರು ಜನ ಒಂದೆಡೆ ಸೆರುವುದರಿಂದ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಮೈಸೂರು ಪ್ರವಾಸಿ ತಾಣಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಯೋಜನೆ ಮಾಡಲಾಗಿದೆ. ಮಧ್ಯರಾತ್ರಿ ಒಂದು ಗಂಟೆವರೆಗೂ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ಇದೆ. ಒಂದು ಗಂಟೆ ನಂತರ ಆಚರಣೆಗೆ ಅವಕಾಶ ಇಲ್ಲ.

ಮಂಗಳೂರಿನಲ್ಲಿ 49 ಕಡೆ ಪಾರ್ಟಿ ಆಯೋಜನೆ
ಮಂಗಳೂರಿನಲ್ಲಿ 49 ಕಡೆ ಪಾರ್ಟಿ ಆಯೋಜನೆ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ಇದಕ್ಕಾಗಿ 103 ಕಡೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಬೆಳಗ್ಗೆ ಬೀಚ್‌ಗಳಲ್ಲಿ ಪ್ರವಾಸಿಗರ ದಂಡೆ ಸೇರಿದೆ. ಮಂಗಳೂರಿನ ಬೀಚ್‌ಗಳಲ್ಲಿ ಜನ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಕಡಲ ತೀರಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.












Click it and Unblock the Notifications