ದ್ವಿತೀಯ ಪಿಯುಸಿ ಫೇಲ್ ಆದವರಿಗೆ ಪರೀಕ್ಷೆ ಬರೆಯಲು ಹೊಸ ರೂಲ್ಸ್
ಬೆಂಗಳೂರು, ಆಗಸ್ಟ್ 29: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪೂರಕ ಪರೀಕ್ಷೆ ತೆಗೆದುಕೊಳ್ಳುವುದು ಕಷ್ಟವಾಗಲಿದೆ.
ಫೇಲ್ ಆದವರಿಗೆ ಪಾಸ್ ಆಗಲು 2018ರ ಪೂರಕ ಪರೀಕ್ಷೆಯೇ ಕೊನೆಯ ಅವಕಾಶವಾಗಿದೆ. ಒಂದೊಮ್ಮೆ ಈ ಅವಕಾಶ ಕಳೆದುಕೊಂಡರೆ ಮುಂದೆ ಹಳೆ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಮುಂದೆ ಪರೀಕ್ಷೆ ಬರೆಯಬೇಕೆಂದರೆ ಹೊಸ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದೆ.

ವಿಜ್ಞಾನದ ಪಿಸಿಎಂಬಿ ವಿಷಯಗಳಲ್ಲಿ ಮಾತ್ರ ಹಳೇ ಪಠ್ಯಕ್ರಮದಂತೆ ಮುಂದೆಯೂ ಪರೀಕ್ಷೆ ನಡೆಯಲಿದೆ. ಆದರೆ ಕಲೆ, ವಾಣಿಜ್ಯ, ಭಾಷಾ ವಿಷಯಗಳು, ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಹಳೇ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು 2018 ಕೊನೆಯ ಅವಕಾಶವಾಗಿದೆ.
2018ರ ಮಾರ್ಚ್‍ನಲ್ಲಿ ನಡೆಯುವ ಪಬ್ಲಿಕ್ ಪರೀಕ್ಷೆ ಹಾಗೂ ಆ ನಂತರ ಫೇಲ್ ಆದವರಿಗೆ ನಡೆಸುವ ಸಪ್ಲಿಮೆಂಟರಿ ಪರೀಕ್ಷೆಗಳು ಮಾತ್ರ ಹಳೇ ಪಠ್ಯಕ್ರಮದಲ್ಲಿ ನಡೆಯುತ್ತವೆ. ಒಂದೊಮ್ಮೆ ಇದರಲ್ಲೂ ಫೇಲ್ ಆಗಿ ಮುಂದೆ 2019ರಲ್ಲಿ ಪರೀಕ್ಷೆ ಬರೆಯುತ್ತೇವೆ ಎಂದು ಹೊರಡುವವರಿಗೆ ಹಳೆ ಪಠ್ಯಕ್ರಮದಲ್ಲಿ ಬರೆಯಲು ಅವಕಾಶ ಇಲ್ಲ. ಇದನ್ನು ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಿದೆ.
Recommended Video

ಎಲ್ಲಿ ಬದಲಾವಣೆ?
ವಿಜ್ಞಾನ ವಿಭಾಗದಲ್ಲಿ ಈ ಹಿಂದೆ 90+10(ಪ್ರಾಯೋಗಿಕ ಪರೀಕ್ಷೆ ಅಂಕ) ವ್ಯವಸ್ಥೆ ಇತ್ತು. ಇದಕ್ಕೆ ಬದಲಾವಣೆ ತಂದು 3 ವರ್ಷದ ಹಿಂದೆಯೇ ವಿಜ್ಞಾನ ವಿಭಾಗದಲ್ಲಿ 70+30 ಅಂಕಗಳ ಪಠ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಈ ವರೆಗೆ ಇದ್ದ ಪರಿಹಾರವೇನು?
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಲ್ಲಿಯವರೆಗೆ ಹಳೇ ಪಠ್ಯಕ್ರಮದಲ್ಲಿ ಅನುತ್ತೀರ್ಣಗೊಂಡಿರುವವರಿಗೆ ಇಲಾಖೆ 70 ಅಂಕಗಳಿಗೆ ಪರೀಕ್ಷೆ ನಡೆಸಿ, ಇದಕ್ಕೆ ಈ ಹಿಂದೆ ಗಳಿಸಿದ ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪ್ರಾಯೋಗಿಕ ಪರೀಕ್ಷೆಯ 10 ಅಂಕಗಳನ್ನು ಪರಿಗಣಿಸಿ ಒಟ್ಟು 80 ಅಂಕಗಳ ಪರೀಕ್ಷೆ ಎಂದು ಪರಿಗಣನೆಗೆ ತೆಗೆದುಕೊಳ್ಳುತ್ತಿತ್ತು.
ಇದನ್ನು ಈಗಿನ 100 ಅಂಕಗಳಿಗೆ ಸರಾಸರಿ ತೆಗೆದು ಅಂತಿಮ ಫಲಿತಾಂಶ ನೀಡಲಾಗುತ್ತಿತ್ತು. ಆದರೆ 2018ಕ್ಕೆ ಇದು ಕೊನೆಯಾಗಲಿದೆ. ಮುಂದೆ ಈ ಅವಕಾಶ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಕಡೆಯ ದಿನ
2018ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಇಚ್ಛಿಸುವ ಖಾಸಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 20ರಿಂದ ಅವಕಾಶ ಕಲ್ಪಿಸಲಾಗಿದೆ. 2001ರ ಮಾ.31ಕ್ಕೆ ಮೊದಲು ಜನಿಸಿದವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಿರ್ಣರಾದವರು ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
ಪರೀಕ್ಷೆ ತಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಇಲಾಖೆ ನೀಡುವ ಒಎಂಆರ್ ಶೀಟ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ದಂಡವಿಲ್ಲದೆ ಅರ್ಜಿ ಸಲ್ಲಿಸಲು ಅಕ್ಟೋಬರ್ 3ಕೊನೆಯ ದಿನವಾಗಿದೆ. ದಂಡ ಸಹಿತ ಅಕ್ಟೋಬರ್ 16ರೊಳಗೆ ಅರ್ಜಿ ಸಲ್ಲಿಸಬಹುದು.
ಎಸ್‍ಸಿ, ಎಸ್‍ಟಿ ವರ್ಗದವರಿಗೆ 1,392 ರೂ. ಪರೀಕ್ಷಾ ಶುಲ್ಕ ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 1,694 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.












Click it and Unblock the Notifications