ಗುತ್ತಿಗೆ ಆಧಾರದ ನೇಮಕಾತಿಗಳಲ್ಲೂ ಮೀಸಲಾತಿ, ಹೊಸ ನೀತಿಯಂತೆ ಬಡ್ತಿ: ಸಿಎಂ ಬೊಮ್ಮಾಯಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
ಮುಂದಿನ ಎಲ್ಲಾ ನೇಮಕಾತಿಗಳು ಮತ್ತು ಬಡ್ತಿಗಳನ್ನು ಹೊಸ ಮೀಸಲಾತಿ ಪದ್ಧತಿಯಂತೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ವರದಿ ಓದಿ, ಮಾಹಿತಿ ಪಡೆಯಿರಿ
ಬೆಂಗಳೂರು, ಫೆಬ್ರವರಿ 17: ಮುಂದಿನ ಎಲ್ಲಾ ನೇಮಕಾತಿಗಳು ಮತ್ತು ಬಡ್ತಿಗಳನ್ನು ಹೊಸ ಮೀಸಲಾತಿ ಪದ್ಧತಿಯಂತೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಬೊಮ್ಮಾಯಿ, ಶೇ.3ರಿಂದ ಶೇ.7ರಷ್ಟು ಮೀಸಲಾತಿ ಹೆಚ್ಚಳ ಮಾಡಿರುವುದರಿಂದ ಎಸ್‌ಟಿಗಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದರು. 'ಸಂವಿಧಾನದ ಬಗ್ಗೆ ನಮಗೂ ಅರಿವಿದೆ ಮತ್ತು ನಮ್ಮ ಸರ್ಕಾರವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ' ಎಂದು ಅವರು ಹೇಳಿದರು.
'ನೀವು (ಸಿದ್ದರಾಮಯ್ಯ) ನಮ್ಮ ಹಾಗೆ ಮಾಡಲಿಲ್ಲ. ಕೇವಲ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವುದರಲ್ಲಿ ಅರ್ಥವಿಲ್ಲ. ನಾವು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮೀಸಲಾತಿ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಿದ್ದೇವೆ' ಎಂದು ಬೊಮ್ಮಾಯಿ ತಿಳಿಸಿದರು ಅವರು ಹೇಳಿದರು.
ತಮ್ಮ ಸರ್ಕಾರವು ಕರ್ನಾಟಕದ ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿದೆ ಎಂದು ಅವರು ಹೇಳಿದರು. ಈ ಸಮುದಾಯಗಳ ಕಲ್ಯಾಣಕ್ಕೆ ಹಣ ನೀಡಿದ್ದೇವೆ. 75 ಯೂನಿಟ್ ವಿದ್ಯುತ್, ಒಂದು ಎಕರೆ ಜಮೀನು ಖರೀದಿಗೆ 25 ಲಕ್ಷ ರೂ ನೀಡುತ್ತಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸಂಖ್ಯೆ ಮತ್ತು ಸ್ವಯಂ ಉದ್ಯೋಗವನ್ನು ಹೆಚ್ಚಿಸಿದ್ದೇವೆ ಎಂದು ಅವರು ಹೇಳಿದರು.

ಮೋದಿ ನೇತೃತ್ವದ ಸರ್ಕಾರ ಎಸ್‌ಟಿಗಳಿಗೆ ಅತಿ ಹೆಚ್ಚು ಅನುದಾನ ನೀಡಿದೆ ಎಂದು ತಿಳಿಸಿದರು. ಬುಡಕಟ್ಟು ಮಹಿಳೆಯನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ. ಬಿ ಶ್ರೀರಾಮುಲು, ರಾಜುಗೌಡ ಮತ್ತು ಎಸ್ ವಿ ರಾಮಚಂದ್ರ ಅವರು ವಿವಿಧ ನಿಗಮಗಳ ಮುಖ್ಯಸ್ಥರಾಗಿದ್ದರು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು (ಶೇ 15 ರಿಂದ 17 ರಷ್ಟು) ಮತ್ತು ಪರಿಶಿಷ್ಟ ಪಂಗಡಗಳಿಗೆ (ಶೇ 3 ರಿಂದ ಶೇ 7 ಕ್ಕೆ) ಮೀಸಲಾತಿಯನ್ನು ಹೆಚ್ಚಿಸುವ ಮಸೂದೆಯನ್ನು ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ಕಳೆದ ವರ್ಷ ಮಂಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳ (ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ ಮತ್ತು ರಾಜ್ಯದ ಅಡಿಯಲ್ಲಿನ ಸೇವೆಗಳಲ್ಲಿನ ನೇಮಕಾತಿಗಳು ಅಥವಾ ಹುದ್ದೆಗಳ ಮೀಸಲಾತಿ) ಮಸೂದೆಯನ್ನು ಮಂಡಿಸಿದ್ದರು.

ಕಾಂಗ್ರೆಸ್ ಅನ್ನು ಬೆಂಬಲಿಸುವ SC/ST ಮತಬ್ಯಾಂಕ್ ಮೇಲೆ ಆಡಳಿತಾರೂಢ ಬಿಜೆಪಿಯು ಕಣ್ಣಿಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ. ರಾಜ್ಯದ ಜನಸಂಖ್ಯೆಯಲ್ಲಿ ಎಸ್‌ಸಿಗಳು ಶೇಕಡಾ 16 ರಷ್ಟಿದ್ದರೆ, ಎಸ್‌ಟಿಗಳು ಶೇಕಡಾ 6.9 ರಷ್ಟಿದ್ದಾರೆ.
ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕಾಗಿರುವುದರಿಂದ ಮೀಸಲಾತಿ ಹೆಚ್ಚಳಕ್ಕೆ ಕಾನೂನು ತೊಡಕುಗಳು ಎದುರಾಗಲಿವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಂವಿಧಾನ ತಿದ್ದುಪಡಿ ಇಲ್ಲದೆ ಮಸೂದೆ ಅಂಗೀಕಾರವಾದರೆ ಅದಕ್ಕೆ ಬೆಲೆಯೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications