ಇಲಾಖೆ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ಪೋರ್ಟಲ್ ಡಿ.25ಕ್ಕೆ ಉದ್ಘಾಟನೆ: ಅಶ್ವಥ್ ನಾರಾಯಣ
ಬೆಂಗಳೂರು, ಡಿಸೆಂಬರ್ 12: ಉನ್ನತ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಲು ಮತ್ತು ಅವುಗಳನ್ನು ಸುಲಭವಾಗಿ ಪರಿಹರಿಸಲು ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದು 'ಸುಶಾಸನ ದಿನ' (ಡಿ.25) ದಂದು ಲೋಕಾರ್ಪಣೆಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಬೋಧಕರನ್ನು ಕುರಿತು ವರ್ಚುವಲ್ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಉನ್ನತ ಶಿಕ್ಷಣ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಾಲಯದ ಹೊರಗೇ ಪರಿಹರಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅದರ ಭಾಗವಾಗಿಯೇ ಈ ಹೊಸ ಪೋರ್ಟಲ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಇದರಡಿ ಸರಳವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಕುಂದುಕೊರತೆಗಳನ್ನು ಆಲಿಸಿ, ಪಿಂಚಣಿ, ಬಡ್ತಿ, ನಿಯೋಜನೆ, ವರ್ಗಾವಣೆ ಮುಂತಾದ ವಿಚಾರಗಳನ್ನು ಸುಲಭವಾಗಿ ಬಗೆಹರಿಸಲಾಗುವುದು ಎಂದು ಅವರು ವಿವರಿಸಿದರು.

ಪೋರ್ಟನಲ್ಲಿ ವಿದ್ಯಾರ್ಥಿಗಳ ವಿವಿದ ನಮೂದು ಕಡ್ಡಾಯ
ಉನ್ನತ ಶಿಕ್ಷಣದ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಅವಕಾಶವಿರುವ 'ಓಪನ್ ಎಲೆಕ್ಟೀವ್ಸ್' ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಇದರಿಂದ ಸ್ಪಷ್ಟವಾಗಿ ಗುರುತಿಸಬಹುದು. ಹಾಗೆಯೇ, ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ವಿವರಗಳನ್ನು ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು.

ಪೋರ್ಟಲ್‌ನಲ್ಲಿ ತೇರ್ಗಡೆ ವಿದ್ಯಾರ್ಥಿಗಳ ನೋಂದಣಿ
ಅದೇ ರೀತಿ ಪದವೀಧರರಾಗಿ ತೇರ್ಗಡೆಯಾಗಿ ಹೊರಹೋದ ವಿದ್ಯಾರ್ಥಿಗಳನ್ನೂ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಇದರಿಂದ ಆ ಮಕ್ಕಳಿಗೆ ಯಾವ ಕೌಶಲ್ಯಗಳನ್ನು ಕಲಿಸಬಹುದು ಎನ್ನುವುದು ಗೊತ್ತಾಗುತ್ತದೆ. ಆದ್ದರಿಂದ ಎನ್‌ಇಪಿ ಬಗ್ಗೆ ಕಾಲೇಜು ಹಂತದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಉನ್ನತ ಶಿಕ್ಷಣ ಇಲಾಖೆಯ ಈ ಹೊಸ ಪೋರ್ಟಲ್ ಅನ್ನು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಾಗೂ ಅವರ ಸ್ಮರಣಾರ್ಥ ನಡೆಯಲಿರುವ ಸುಶಾಸನ ದಿನದಂದು ಉದ್ಘಾಟಿಸುತ್ತಿರುವುದು ವಿಶೇಷ ಎಂದರು.

ಸಾಕಷ್ಟು ಉದ್ಯೋಗವಕಾಶ ಕರ್ನಾಟಕದಲ್ಲಿದೆ
ಕರ್ನಾಟಕದಲ್ಲಿ ಮೂರು ರಾಜ್ಯಗಳಿಗೆ ಆಗುವಷ್ಟು ಉದ್ಯೋಗ ಅವಕಾಶಗಳಿವೆ. ಇನ್ನೊಂದೆಡೆ ರಾಜ್ಯದಲ್ಲಿ ನಿರುದ್ಯೋಗ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ. ನಮ್ಮ ಮುಂದಿರುವ ಉಜ್ವಲ ಅವಕಾಶಗಳು ಸ್ಥಳೀಯ ಯುವಜನರಿಗೇ ಸಿಗುವುದನ್ನು ಕಲಿಕೆಯ ಹಂತದಲ್ಲೇ ಖಾತ್ರಿ ಪಡಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕೆಂದರೆ ಉನ್ನತ ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಮತ್ತು ಕಲಿಕೆಯಲ್ಲಿ ಜಾಗತಿಕ ಗುಣಮಟ್ಟಗಳನ್ನು ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದರು.
ಜಾಗತಿಕ ಸ್ಪರ್ಧೆಯ ಈ ಯುಗದಲ್ಲಿ ರಿಯಾಯಿತಿ ಆಗಲಿ, ರಾಜಿಗಾಗಲಿ ಅವಕಾಶವಿಲ್ಲ. ಆದ್ದರಿಂದ ಸ್ಮಾರ್ಟ್ ಕ್ಲಾಸ್‌ರೂಂ ಇರುವೆಡೆಗಳಲ್ಲಿ ಅದರ ಮೂಲಕವೇ ಬೋಧನೆ ನಡೆಯಬೇಕು. ಕೆಎಲ್‌ಎಂಎಸ್ ವ್ಯವಸ್ಥೆಯಲ್ಲಿರುವ ಪಠ್ಯಗಳನ್ನು ನೂರಕ್ಕೆ ನೂರರಷ್ಟು ಉಪಯೋಗಿಸಿಕೊಳ್ಳಬೇಕು. ಪ್ರತೀ ವಿದ್ಯಾರ್ಥಿಯೂ ಈ ವ್ಯವಸ್ಥೆಗಳಡಿ ಕಲಿಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಂಗ್ರಹ ಹಣ ಕಾಲೇಜು ಅಭಿವೃದ್ಧಿ ಬಳಕೆ ಆಗುತ್ತಿದೆ
ಇಲಾಖೆಯಲ್ಲಿ ಸುಶಾಸನದ ಅತ್ಯುತ್ತಮ ಅಂಶಗಳೆಲ್ಲವೂ ಜಾರಿಗೆ ಬರಬೇಕು. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳನ್ನು ಸಾಕಷ್ಟು ಸುಧಾರಿಸಲಾಗಿದೆ. ಈಗಂತೂ ಆಯಾ ಕಾಲೇಜುಗಳಲ್ಲಿ ಸಂಗ್ರಹವಾಗುವ ಹಣವನ್ನು ಆಯಾ ಕಾಲೇಜುಗಳಿಗೇ ನೀಡಲಾಗುತ್ತಿದೆ. ಈ ಮೂಲಕ ಆರ್ಥಿಕ ಸ್ವಾತಂತ್ರ, ಪಾರದರ್ಶಕತೆ ಮತ್ತು ಹೆಚ್ಚಿನ ಉತ್ತರದಾಯಿತ್ವಗಳನ್ನು ರೂಢಿಗೆ ತರುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications