ಭಕ್ತರಿಗೆ ಭರ್ಜರಿ ನ್ಯೂಸ್, ಹುಬ್ಬಳ್ಳಿ & ತುಳಜಾಪುರ ನಡುವೆ ಬಸ್ ಸಂಚಾರ ಆರಂಭ!
ಕರ್ನಾಟಕ ಸಾರಿಗೆ ಪ್ರಯಾಣಿಕರ ಪರವಾಗಿ ಹಲವು ಸೌಲಭ್ಯ ಜಾರಿ ಮಾಡುತ್ತಿದ್ದು, ಇದೀಗ ರಾಜ್ಯದ ಬಹುತೇಕ ಎಲ್ಲಾ ಮಾರ್ಗಗಳಿಗೂ ಬಸ್ ಸೇವೆ ಒದಗಿಸುತ್ತಿದೆ. ಅದೇ ರೀತಿ ಇದೀಗ ಹೊಸದೊಂದು ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಈ ಮೂಲಕ ಭಕ್ತರಿಗೆ ಭರ್ಜರಿ ನ್ಯೂಸ್ ಸಿಕ್ಕಂತೆ ಆಗಿದ್ದು, ಹುಬ್ಬಳ್ಳಿ & ತುಳಜಾಪುರ ನಡುವೆ ಬಸ್ ಸಂಚಾರ ಆರಂಭವಾಗಿದೆ.
ಅಂದಹಾಗೆ ಭಕ್ತರು & ಸಾರ್ವಜನಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯು ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ಬಸ್ ಸಂಚಾರ ಆರಂಭಿಸಿದೆ. ಹೌದು, ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಕಲಘಟಗಿಯ ಡಿಪೋದಿಂದ ಆರಂಭಿಸಲಾಗಿರುವ ನೂತನ ಬಸ್ಸಿಗೆ ಹೊಸೂರು ಬಸ್ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಚಾಲನೆ ನೀಡಿದರು. ಈ ಮೂಲಕ ಹೊಸ ಮಾರ್ಗದ ಬಸ್ ಸಂಚಾರಕ್ಕೆ ಇದೀಗ ಚಾಲನೆ ನೀಡಲಾಗಿದ್ದು, ಲಕ್ಷಾಂತರ ಜನರಿಗೆ ಇದರಿಂದ ಸಾಕಷ್ಟು ಉಪಯೋಗ ಆಗಲಿದೆ.

ಹೊಸ ಮಾರ್ಗದ ಬಗ್ಗೆ ಮಾಹಿತಿ
ಹುಬ್ಬಳ್ಳಿ & ತುಳಜಾಪುರ ನಡುವೆ ಬಸ್ ಸಂಚಾರಕ್ಕೆ ಚಾಲನೆಯ ನೀಡಿದ ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಅಂಬಾ ಭವಾನಿ ದೇವಿ ದರ್ಶನಕ್ಕೆ ತೆರಳುವ ಭಕ್ತಾಧಿಗಳು ಹಾಗೂ ಮತ್ತಿತರ ಕೆಲಸ ಕಾರ್ಯಗಳಿಗೆ ಸೊಲ್ಲಾಪುರ ಮತ್ತಿತರ ಸ್ಥಳಗಳಿಗೆ ಹೋಗುವ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ನವಲಗುಂದ, ನರಗುಂದ & ಗದ್ದನಕೇರಿ ಕ್ರಾಸ್, ವಿಜಯಪುರ, ಸೋಲಾಪುರ ಮಾರ್ಗವಾಗಿ ತುಳಜಾಪುರಕ್ಕೆ ನೇರ ವೇಗದೂತ ಬಸ್ ಸಂಚಾರ ಪ್ರಾರಂಭಿಸಲಾಗಿದೆ ಎಂದು ಮಾಹಿತಿಯನ್ನ ನೀಡಿದರು.
ತುಳಜಾಪುರ ಬಸ್ ಸಮಯದ ವಿವರ
ಅಷ್ಟಕ್ಕೂ ಹುಬ್ಬಳ್ಳಿ & ತುಳಜಾಪುರ ಮಧ್ಯೆ ಆರಂಭ ಆಗಿರುವ ಬಸ್ ಸಂಚಾರ ವೇಳಾಪಟ್ಟಿಯನ್ನ ನೋಡುವುದಾದರೆ, ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ಮಧ್ಯಾಹ್ನ 12ಕ್ಕೆ ಈ ಬಸ್ ಹೊರಡುತ್ತದೆ. ನರಗುಂದ, ಗದ್ದನಕೇರಿ ಕ್ರಾಸ, ವಿಜಯಪುರಕ್ಕೆ ಸಂಜೆ 5-45ಕ್ಕೆ ತಲುಪಲಿದೆ. ಝಳಕಿ, ಧೂಳಖೇಡ, ಸೊಲ್ಲಾಪುರಕ್ಕೆ ರಾತ್ರಿ 8 ಗಂಟೆಗೆ ತಲುಪಲಿದೆ. ಇದೇ ಮಾರ್ಗವಾಗಿ ತುಳಜಾಪುರಕ್ಕೆ ರಾತ್ರಿ 9.30ಕ್ಕೆ ತಲುಪಲಿದ್ದು, ತುಳಜಾಪುರದಿಂದ ಮರುದಿನ ಬೆಳಗ್ಗೆ 6 ಗಂಟೆಗೆ ಹೊರಡಲಿದೆ. ಸೊಲ್ಲಾಪುರಕ್ಕೆ ಬೆಳಗ್ಗೆ 7ಕ್ಕೆ, ಧೂಳಖೇಡ, ಝಳಕಿ, ವಿಜಯಪುರಕ್ಕೆ ಬೆಳಗ್ಗೆ 9-45ಕ್ಕೆ ತಲುಪಿ ಇದೇ ಮಾರ್ಗವಾಗಿ ಹುಬ್ಬಳ್ಳಿಗೆ ಮಧ್ಯಾಹ್ನ 3-15ಕ್ಕೆ ಆಗಮಿಸುತ್ತದೆ.
ಟಿಕೆಟ್ ದರ ಎಷ್ಟು ಇರಲಿದೆ?
ಅಂದಹಾಗೆ ಹುಬ್ಬಳ್ಳಿ ಟು ಸೊಲ್ಲಾಪುರಕ್ಕೆ 401 ರೂಪಾಯಿ & ತುಳಜಾಪುರಕ್ಕೆ 482 ರೂಪಾಯಿ ಪ್ರಯಾಣ ದರ ನಿಗದಿಪಡಿಸಲಾಗಿದೆ. ಈ ಮೂಲಕ ಹುಬ್ಬಳ್ಳಿ & ತುಳಜಾಪುರ ನಡುವೆ ಹೊಸ ಬಸ್ ಮಾರ್ಗ ಆರಂಭ ಆಗಿದ್ದು, ಪ್ರಯಾಣಿಕರಿಗೆ ಭಾರಿ ಅನುಕೂಲ ಆಗಲಿದೆ. ಮತ್ತೊಂದು ಕಡೆ ಇದೇ ಮಾರ್ಗದಲ್ಲಿ ಬೇರೆ ಬೇರೆ ಊರುಗಳಿಗೆ ಸಂಚಾರವನ್ನ ಮಾಡುವವರಿಗೂ ಇದರಿಂದ ಸಹಾಯ ಆಗಲಿದೆ.












Click it and Unblock the Notifications