NEETUG 2025: 200 ವೈದ್ಯಕೀಯ ಸೀಟು ಮಂಜೂರು, ಆಪ್ಷನ್ ಎಂಟ್ರಿ ದಿನಾಂಕ ವಿಸ್ತರಣೆ: KEA
ಬೆಂಗಳೂರು, ಅಕ್ಟೋಬರ್ 14: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ ಪೂರ್ವ (UGNEET) 2025ರ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿಲ್ಲ. ರಾಜ್ಯದ ಪ್ರಮುಖ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ವೈದ್ಯಕೀಯ ಕೌನ್ಸೆಲಿಂಗ್ ಕಮಿಟಿ (MCC) ಹೆಚ್ಚುವರಿಯಾಗಿ ಸೀಟು ಮಂಜೂರು ಮಾಡಿದೆ. ಹೀಗಾಗಿ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅವಕಾಶ ನೀಡಿದೆ.
MCC ಪ್ರತಿ ನಾಲ್ಕು ವೈಧ್ಯಕೀಯ ಕಾಲೇಜುಗಳಲ್ಲಿ ತಲಾ 50 ಸೀಟುಗಳಂತೆ ಒಟ್ಟು 200 ಸೀಟು ಹೆಚ್ಚುವರಿಯಾಗಿ ಮಂಜೂರು ಮಾಡಿದೆ. ಈ ಕಾರಣದಿಂದಾಗಿ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಇದೇ ಅಕ್ಟೋಬರ್ 15ರಂದು ಬೆಳಗ್ಗೆ 8 ಗಂಟೆವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ಸುಬ್ಬಯ್ಯ, ಬೆಂಗಳೂರು ನಾಗರೂರಿನ ಬಿಜಿಎಸ್, ತುಮಕೂರಿನ ಶ್ರೀದೇವಿ, ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಸೀಟು ಹಂಚಿಕೆ ಮಾಡಿದೆ. ಅವುಗಳ ಪ್ರವೇಶಕ್ಕೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಈ ಕಾಲೇಜುಗಳ ಶುಲ್ಕವನ್ನು ಗಮನಿಸಿ ಆಪ್ಷನ್ಸ್ ದಾಖಲಿಸುವಂತೆ ಅವರು ತಿಳಿಸಿದ್ದಾರೆ.
ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ವರದಿ ಮಾಡಿಕೊಂಡಿದ್ದಾರೆ. ಸದರಿ ಮೂರನೇ ಸುತ್ತಿನ ಈ ಸೀಟು ಹಂಚಿಕೆಯಲ್ಲಿ ಅವರಿಗೂ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಂತಹವರು ಅಕ್ಟೋಬರ್15ರಂದು ಬೆಳಗ್ಗೆ 11ರಿಂದ ಅಕ್ಟೋಬರ್ 16ರಂದು ಬೆಳಿಗ್ಗೆ 8 ಗಂಟೆವರೆಗೆ ಆಪ್ಷನ್ಸ್ ದಾಖಲಿಸಬಹುದು. ಇವರು ಈಗಾಗಲೇ ಶುಲ್ಕ ಕಟ್ಟಿರುವ ಕಾರಣ ಅವರು ಮುಂಗಡ ಶುಲ್ಕ ಕಟ್ಟುವ ಅಗತ್ಯ ಇರುವುದಿಲ್ಲ. ಆದರೆ ಯಾರಿಗೆ ಸೀಟು ಹಂಚಿಕೆಯಾಗಿಲ್ಲವೊ ಅಂತಹವರು ಮುಂಗಡ ಶುಲ್ಕ ಕಟ್ಟಬೇಕು. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದರೆ ಪ್ರವೇಶ ಪಡೆಯುವುದು ಕಡ್ಡಾಯ ಎಂದು ಅವರು ಸ್ಪಸ್ಟಪಡಿಸಿದರು.
ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ಎಚ್.ಪ್ರಸಣ್ಣ ಅವರು, ಈ ಹೆಚ್ಚುವರಿ ಸೀಟುಗಳಿಗೆ ಯಾರೆಲ್ಲ ಅರ್ಹರು? ಏನೆಲ್ಲ ಮಾಡಬೇಕು ಎನ್ನುವುದರ ಬಗ್ಗೆ KEAVikasana YouTube ಚಾನೆಲ್ ನಲ್ಲಿ ಮಾಹಿತಿ ನೀಡಿದ್ದಾರೆ. ಅದನ್ನು ಕ್ಲಿಕ್ ಮಾಡಿ ನೀವು ಗಮನಿಸಿ ಆಯ್ಕೆ ದಾಖಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೆಇಎ ತಿಳಿಸಿದೆ.












Click it and Unblock the Notifications