ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಒಪ್ಪಿಗೆ ಸಿಕ್ಕಿತು

Posted By:
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 15 : ಹುಬ್ಬಳ್ಳಿ-ಅಂಕೋಲಾ ನಡುವಿನ 168 ಕಿ.ಮೀ.ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಒಪ್ಪಿಗೆ ಸೂಚಿಸಿದೆ. 1998ರಲ್ಲಿ ಈ ರೈಲು ಮಾರ್ಗದ ಯೋಜನೆ ಸಿದ್ಧವಾಗಿತ್ತು. ಆದರೆ, ಯೋಜನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು.

ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಬಾರದು ಎಂಬ ನಿಯಮ ಈ ಯೋಜನೆಯ ಜಾರಿಗೆ ಅಡ್ಡಿಯಾಗಿತ್ತು. 2006ರಲ್ಲಿ ಪರಿಸರ ಸಂಕ್ಷಣಾ ಕೇಂದ್ರ ಮತ್ತು ವೈಲ್ಡ್‌ರ್‌ನೆಸ್ ಕ್ಲಬ್ ಎಂಬ ಎರಡು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಕೋರ್ಟ್ ಯೋಜನೆಗೆ ತಡೆ ನೀಡಿತ್ತು. ಆದ್ದರಿಂದ ಯೋಜನೆ ವಿಳಂಬವಾಗಿತ್ತು. [ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ನನಸಾಗುವುದೇ?]

hubballi

ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಯೋಜನೆಗೆ ಒಪ್ಪಿಗೆ ನೀಡಲು ಕಳೆದ ವರ್ಷ ನಿರಾಕರಿಸಿತ್ತು. ಈ ರೈಲು ಮಾರ್ಗ ನಿರ್ಮಾಣದಿಂದ ಪಶ್ಚಿಮ ಘಟ್ಟಗಳ ಅರಣ್ಯ, ವನ್ಯಜೀವಿಗಳು ಮತ್ತು ಜೀವ ವೈವಿಧ್ಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಸಿಇಸಿ ತನ್ನ ವರದಿಯಲ್ಲಿ ಹೇಳಿತ್ತು. [ಹಾವೇರಿ-ಶಿರಸಿ ರೈಲು ಮಾರ್ಗಕ್ಕೆ ಒಪ್ಪಿಗೆ ಸಿಗಲಿದೆಯೇ?]

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಮತ್ತು ಸಿಇಸಿ ಅಭಿಪ್ರಾಯಗಳನ್ನು 2015ರ ಅಕ್ಟೊಬರ್‌ 5ರಂದು ಹಸಿರು ನ್ಯಾಯಮಂಡಳಿಗೆ ಸುಪ್ರೀಂಕೋರ್ಟ್‌ ವರ್ಗಾವಣೆ ಮಾಡಿತ್ತು. ಈಗ ನ್ಯಾಯಮಂಡಳಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. [ಗದಗ-ಕೂಡಗಿ-ಹುಟಗಿ ಜೋಡಿ ಮಾರ್ಗಕ್ಕೆ ಒಪ್ಪಿಗೆ]

ನ್ಯಾಯಮಂಡಳಿ ಆದೇಶವೇನು? : ಈ ಯೋಜನೆಯು ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದರಿಂದ ಯೋಜನೆ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕಾಗಿದೆ. ಅರಣ್ಯ ಭೂಮಿಯನ್ನು ರೈಲು ಮಾರ್ಗ ನಿರ್ಮಾಣದ ಅರಣ್ಯೇತರ ಚಟುವಟಿಕೆಗೆ ಬಳಸಲು ಅರ್ಜಿ ಹಾಕುವ ಹಕ್ಕು ರೈಲ್ವೆ ಇಲಾಖೆಗೆ ಇದೆ. ಇಲಾಖೆಯು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಸಬೇಕು. ರಾಜ್ಯ ಸರ್ಕಾರ ಅರ್ಜಿಯನ್ನು ಕಾನೂನು ಪ್ರಕಾರ ವಿಲೇವಾರಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೈಲ್ವೆ ಇಲಾಖೆಯ ಅರ್ಜಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಭೂ ಪರಿವರ್ತನೆ ಆದೇಶ ಹೊರಡಿಸಬಹುದು. ಇದಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ತ್ವರಿತವಾಗಿ ತನ್ನ ಅರ್ಜಿಯನ್ನು ಪರಿಸರ ಸಚಿವಾಲಯಕ್ಕೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಪರಿವರ್ತನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ. ಮೇಲ್ಮನವಿ ಸಲ್ಲಿಸುವಾಗ ಈಗಿನ ಆದೇಶದ ಕಡತಗಳನ್ನು ಅದರೊಂದಿಗೆ ಸೇರಿಸಿ ಸಲ್ಲಿಸಬೇಕು ಎಂದು ನ್ಯಾಯಮಂಡಳಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
168 km Hubballi-Ankola railway project gets nod form the National Green Tribunal. The railway line cutting across the Western Ghats in Karnataka.
Please Wait while comments are loading...