ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ
ಬೆಂಗಳೂರು, ಜೂ. 22 : ಕಲೆ, ಕ್ರೀಡೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ನಿಮ್ಮ ಮಕ್ಕಳು ಅಸಾಧಾರಣ ಪ್ರತಿಭೆಯುಳ್ಳುವರಾಗಿದ್ದರೆ, 2015ನೇ ವರ್ಷದ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದು ಗಮನ ಸೆಳೆಯಲು ಇಲ್ಲೊಂದು ಅತ್ಯುತ್ತಮವಾದ ಅವಕಾಶ ಕೂಡಿಬಂದಿದೆ.
ಕಲೆ, ಸಾಂಸ್ಕೃತಿಕ, ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರಿಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡುತ್ತದೆ.
ಭಾರತದಲ್ಲಿ ನೆಲೆಸಿರುವ ಮತ್ತು ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ 9ರಿಂದ 16 ವರ್ಷದೊಳಗಿನ ಅಂದರೆ ದಿನಾಂಕ : 01.08.1999 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2015ನೇ ವರ್ಷಕ್ಕೆ ಆಯ್ಕೆ ಮಾಡಲಾಗುವುದು.

ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ರು.20,000 ನಗದು, ರು.10,000 ಮೌಲ್ಯದ ಪುಸ್ತಕ ವೋಚರ್ ಮತ್ತು ಪ್ರಶಸ್ತಿ ಪತ್ರ, ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ರು.10,000 ನಗದು, ರು.3,000 ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರತಕ್ಕದ್ದು. ಅಸಾಧಾರಣವೆಂದು ಇವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸುವುದು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
2015ನೇ ವರ್ಷದ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕರ ಕಛೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಲ್ಲಿಂದ ಪಡೆದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ : 04.07.2015 ರ ಒಳಗೆ ತಲುಪಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ : ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಟಣೆ ತಿಳಿಸಿದೆ.












Click it and Unblock the Notifications