ಕರುನಾಡಲ್ಲಿ ಇಂದು ಮೋದಿ ಹವಾ: ಕೋಲಾರ, ಹಾಸನ ಹಾಗೂ ಮೈಸೂರಿನಲ್ಲಿ ನಮೋ ಪ್ರಚಾರ
ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ 10 ದಿನ ಮಾತ್ರ ಉಳಿದ್ದು, ಈ ನಡುವೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಎಪಿ ಸೇರಿದಂತೆ ರಾಜಕೀಯ ಪಕ್ಷಗಳು ಭರ್ಜರಿ ಮತಬೇಟೆ ನಡೆಸುತ್ತಿವೆ. ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದು, ಶನಿವಾರ(ಏಪ್ರಿಲ್ 29) ಮತ್ತು ಭಾನುವಾರ (ಏಪ್ರಿಲ್ 30) ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಇಂದು ಹಳೇ ಮೈಸೂರಿನಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದು ಸಿದ್ದರಾಮಯ್ಯ ತವರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಶನಿವಾರ ಪ್ರಚಾರದ ಬಳಿಕ ಮೋದಿ ಬೆಂಗಳೂರಿನಲ್ಲೇ ರಾತ್ರಿ ವಾಸ್ತವ್ಯ ಹೂಡಿದ್ದರು. ಇಂದು (ಏ.30) ಬೆಳಿಗ್ಗೆ 11ಗಂಟೆಗೆ ಪ್ರಸಾರ ಭಾರತಿಯ 'ಮನ್ ಕೀ ಬಾತ್' 100ನೇ ಸಂಚಿಕೆಯಲ್ಲಿ ಮಾತನಾಡುವರು. ಬಳಿಕ 11:30ಕ್ಕೆ ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನದಿಂದ ಹೊರಟು ನಗರ ಸಮೀಪದ ಕೋಲಾರದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಂತರ ನಮೋ ಚನ್ನಪಟ್ಟಣ ಹಾಗೂ ಬೇಲೂರಿಗೆ ಬರಲಿದ್ದು ರಾಮನಗರ ಸಮೀಪದ ಚನ್ನಪಟ್ಟಣದಲ್ಲಿ ಮಧ್ಯಾಹ್ನ 1:30 ಕ್ಕೆ ಐದನೇ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 3:45 ಕ್ಕೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಅಂತಿಮ ಸಭೆಯನ್ನು ನಿಗದಿಪಡಿಸಲಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಂಜೆ ಮೋದಿ ಹವಾ ಸೃಷ್ಟಿಸಲಿದ್ದಾರೆ. ಪ್ರಧಾನಿ ಅವರ ಎರಡನೇ ರೋಡ್ ಶೋ ಭಾನುವಾರ ಸಂಜೆ ಮೈಸೂರಿನಲ್ಲಿ ನಡೆಯಲಿದೆ. ಇದಕ್ಕಾಗಿ ಇಂದು ಮೈಸೂರು ಕೇಸರಿ ಮಯವಾಗಿದೆ. ಮೈಸೂರು ರೋಡ್ ಶೋ ಬಳಿಕ ಅವರು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಏಳು ನಗರಗಳ ಮೂಲಕ 5,300 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿ, 72ನೇ ವಯಸ್ಸಿನಲ್ಲೂ 36 ಗಂಟೆಗಳಲ್ಲಿ ಎಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದಾರೆ. ಫೆಬ್ರವರಿಯೊಂದರಿಂದಲೇ ಕರ್ನಾಟಕಕ್ಕೆ ಒಂಬತ್ತು ಬಾರಿ ಭೇಟಿ ನೀಡಿದ್ದಾರೆ. ಬಿಜೆಪಿ ನಾಯಕರ ಅಷ್ಟೇ ಅಲ್ಲದೆ, ಕಾಂಗ್ರೆಸ್‌ನವರೂ ಕೂಡ ತಮ್ಮ ದೆಹಲಿ ನಾಯಕರನ್ನು ಕರೆಸಿ ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದಿದೆ. ಇನ್ನು ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ರಾಜ್ಯದಲ್ಲಿ ಒಬ್ಬರಾದ ನಂತರ ಒಬ್ಬರು ಕೇಂದ್ರ ನಾಯಕರು ನಿರಂತರ ರೋಡ್ ಶೋ ಹಾಗೂ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಹಿರತಾಗಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಚಾರದ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ಬೆಂಬಲ ವ್ಯಕ್ತವಾಗಿದ್ದು ಮತದಾರ ಯಾರ ಕೈ ಹಿಡಿಯುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications