ಜೆಡಿಎಸ್ ಮುಕ್ತ ಕರ್ನಾಟಕ; ಇದು ಮೋದಿಯ ಸಂಕಲ್ಪ!
ಬೆಂಗಳೂರು, ಮೇ 02; "ಜೆಡಿಎಸ್‌ಗೆ ನೀಡುವ ಒಂದೊಂದು ವೋಟು ಕಾಂಗ್ರೆಸ್‌ಗೆ ಹೋಗುತ್ತದೆ. ಅದಕ್ಕಾಗಿ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ"
"ಕೋಲಾರದಲ್ಲಿ ಇಷ್ಟು ಪ್ರಮಾಣದಲ್ಲಿ ಜನರು ಸೇರಿರುವುದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಿದ್ದೆಗೆಡಿಸಿದೆ. ಈ ಎರಡೂ ಪಕ್ಷಗಳು ಏನೇ ಮಸಲತ್ತು ಮಾಡಿದರೂ ಈ ಬಾರಿ ಎರಡೂ ಪಕ್ಷಗಳು ಕ್ಲೀನ್ ಬೋಲ್ಡ್ ಆಗಲಿವೆ"

"ಅಸ್ಥಿರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ, ನಷ್ಟವೇ ಜಾಸ್ತಿ. ಅಸ್ಥಿರ ಸರ್ಕಾರಗಳಿಂದ ಉತ್ತಮ ಕಾರ್ಯಗಳು ಆಗುವುದಿಲ್ಲ. ಜೆಡಿಎಸ್ ಕಾಂಗ್ರೆಸ್‌ನಿಂದ ಪಾರದರ್ಶಕ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ" ಇದು ಪ್ರಧಾನಿ ನರೇಂದ್ರ ಮೋದಿ ಕೋಲಾರ ಮತ್ತು ಚನ್ನಪಟ್ಟಣದಲ್ಲಿ ಸಮಾವೇಶ ಉದ್ದೇಶಿಸಿ ಮಾಡಿದ ಭಾಷಣದ ಹೇಳಿಕೆಗಳು.
ಮೋದಿ ಟಾರ್ಗೆಟ್ ಕಾಂಗ್ರೆಸ್ ಮಾತ್ರವಲ್ಲ; ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಮೇ 10ರಂದು ನಡೆಯುವ ಚುನಾವಣೆಗೆ ಸಮಾವೇಶ, ರೋಡ್ ಶೋ ಮಾಡುವ ಮೂಲಕ ಮತವನ್ನು ಕೇಳುತ್ತಿದ್ದಾರೆ.
'ಈ ಬಾರಿಯ ನಿರ್ಧಾರ ಸಂಪೂರ್ಣ ಬಹುಮತದ ಸರ್ಕಾರ' ಎಂದು ಪದೇ ಪದೇ ಕನ್ನಡದಲ್ಲಿಯೇ ಹೇಳುವ ಮೂಲಕ ನರೇಂದ್ರ ಮೋದಿ ರಾಜ್ಯದ ಜನರಿಗೆ ಸ್ಪಷ್ಟ ಬಹುಮತ ಕೊಡಿ ಎಂದು ಕೇಳುತ್ತಿದ್ದಾರೆ. ಮೋದಿ ಅವರ ಟಾರ್ಗೆಟ್ ಕೇವಲ ಕಾಂಗ್ರೆಸ್ ಪಕ್ಷವಲ್ಲ. ಜೆಡಿಎಸ್ ಸಹ ಹೌದು. ಅದರಲ್ಲೂ ಈ ಬಾರಿ ಚುನಾವಣೆಯಲ್ಲಿ ಕರ್ನಾಟಕವನ್ನು ಜೆಡಿಎಸ್ ಮುಕ್ತವಾಗಿ ಮಾಡಲು ಮೋದಿ ಪಣತೊಟ್ಟಿದ್ದಾರೆ.

ರಾಮನಗರ ಜೆಡಿಎಸ್ ಪಕ್ಷದ ಭದ್ರಕೋಟೆ. ಚನ್ನಪಟ್ಟಣ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ. ಭಾನುವಾರ ಚನ್ನಪಟ್ಟಣದ ನೆಲದಲ್ಲಿಯೇ ಮೋದಿ, ""ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿನಿಂದ ನೋಡಲು ಮಾತ್ರ ಬೇರೆ-ಬೇರೆ ಆದರೆ ಆಂತರಿಕವಾಗಿ ಒಂದೇ. ಜೆಡಿಎಸ್ ಕಾಂಗ್ರೆಸ್‌ನ ಬಿ ಟೀಂ" ಎಂದು ಟೀಕೆ ಮಾಡಿದರು.
"ಜೆಡಿಎಸ್ ಪಕ್ಷ 15 ಸೀಟು ಗೆದ್ದರೆ ನಾವೇ ಕಿಂಗ್ ಮೇಕರ್ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇವರ ಸ್ವಾರ್ಥ ರಾಜಕೀಯದಿಂದ ಒಂದು ಕುಟುಂಬಕ್ಕೆ ಮಾತ್ರ ಲಾಭವಾಗುತ್ತದೆ" ಎಂದು ನೇರವಾಗಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದರು.
ಮೈತ್ರಿ ಸರ್ಕಾರ ಬೇಡ; ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಆದರೆ ವೈಯಕ್ತಿಕ ವಿಚಾರ ಬೇರೆ, ರಾಜಕೀಯವೇ ಬೇರೆ. ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಜೊತೆ ಸೇರಿ ಸರ್ಕಾರ ರಚನೆ ಮಾಡಿತ್ತು. ಮೈತ್ರಿ ಸರ್ಕಾರದ ಸಿಹಿ ಮತ್ತು ಕಹಿ ಎರಡೂ ಪಕ್ಷಗಳಿಗೂ ತಿಳಿದಿದೆ. ಆದ್ದರಿಂದ ಮೋದಿ ಈ ಬಾರಿ ಮೈತ್ರಿ ಸರ್ಕಾರ ಬೇಡ ಸ್ಪಷ್ಟ ಬಹುಮತ ಕೊಡಿ ಎಂದು ಜನರ ಮುಂದೆ ಬಂದಿದ್ದಾರೆ.
ಜೆಡಿಎಸ್ ಪಕ್ಷ 2018ರ ಚುನಾವಣೆಯಲ್ಲಿ 37 ಸೀಟು ಪಡೆದಿತ್ತು. 2013ರಲ್ಲಿ 40, 2008ರಲ್ಲಿ 28, 2004ರಲ್ಲಿ 58 ಹೀಗೆ ಪ್ರತಿ ಚುನಾವಣೆಯಲ್ಲಿಯೂ ಜೆಡಿಎಸ್ ಪಡೆಯುವ ಸೀಟುಗಳ ಸಂಖ್ಯೆ ಕುಸಿಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಕರ್ನಾಟಕ ಜೆಡಿಎಸ್ ಮುಕ್ತವಾಗಬೇಕು. ಆದರೆ ಕಾಂಗ್ರೆಸ್‌ಗೆ ಅಧಿಕಾರ ಸಿಗಬಾರದು ಎಂಬುದು ನರೇಂದ್ರ ಮೋದಿ ತಂತ್ರ. ಜಡಿಎಸ್ ಪಕ್ಷ ಕಡಿಮೆ ಸೀಟು ಪಡೆದರೆ ಬಿಜೆಪಿ ಹೆಚ್ಚಿನ ಸೀಟು ಪಡೆಯಲು ಸಹಾಯಕವಾಗುತ್ತದೆ ಎಂಬುದು ಮೋದಿಯ ಲೆಕ್ಕಾಚಾರ.
ಕುಟುಂಬ ರಾಜಕಾರಣ, ಹಾಲಿ ಶಾಸಕರು ಪಕ್ಷ ತೊರೆದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಈ ಬಾರಿಯ ಚುನಾವಣೆ ಜೆಡಿಎಸ್ ಪಾಲಿಗೆ ಮಹತ್ವದ್ದಾಗಿದೆ. ಎಚ್. ಡಿ. ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಇಬ್ಬರೇ ಪಕ್ಷ ಕಟ್ಟುವುದು ಕಷ್ಟದ ಕೆಲಸ ಎಂಬುದು ಎಲ್ಲರಿಗೂ ತಿಳಿದಿದೆ. ಜೆಡಿಎಸ್ ಪಕ್ಷ 20 + ಸ್ಥಾನದಲ್ಲಿ ಜಯಗಳಿಸಿದರೆ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಮತ್ತೆ ಮೈತ್ರಿ ಸರ್ಕಾರ ರಚನೆಯಾಗಬೇಕಾಗಬಹುದು. ಆದ್ದರಿಂದ ಜೆಡಿಎಸ್ ಮುಕ್ತ ಕರ್ನಾಟಕ ಮಾಡಲು ಮೋದಿ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಇಬ್ಬರೂ ಎದುರಾಳಿಗಳು; ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೇರ ಎದುರಾಳಿಯಾಗಿ ನೋಡುತ್ತಿದೆ. ಒಂದು ವೇಳೆ ಅಂತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡಬೇಕು ಎಂದು ಪಂಚರತ್ನ ರಥಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಿದ್ದಾರೆ. ಇದುವರೆಗೂ ಪ್ರಕಟವಾದ ಚುನಾವಣಾ ಪೂರ್ವ ಸಮೀಕ್ಷೆಗಳು ಜೆಡಿಎಸ್ ಪಕ್ಷ 25 ರಿಂದ 29 ಸೀಟು ಗೆಲ್ಲಬಹುದು ಎಂದು ಹೇಳಿವೆ.












Click it and Unblock the Notifications