ಕನ್ನಡಿಗರ ಹೆಮ್ಮೆ ‘ಕೆಎಸ್‌ಆರ್‌ಟಿಸಿ’ ಹೊಸ ಸೇವೆ ಆರಂಭಿಸಿದೆ ನೋಡಿ!
ಕನ್ನಡಿಗರು ಕಟ್ಟಿರುವ ಸರ್ಕಾರಿ ಸಂಸ್ಥೆಗಳು ಇಡೀ ದೇಶಕ್ಕೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೆ ಮಾದರಿ ಆಗಿವೆ. ಹೈನುಗಾರಿಕೆ ವಿಚಾರದಲ್ಲಿ 'ನಂದಿನಿ', ಹಾಗೆ ಸಾರಿಗೆ ವಿಚಾರದಲ್ಲಿ ನಮ್ಮ 'ಕೆಎಸ್‌ಆರ್‌ಟಿಸಿ' ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಸಂಸ್ಥೆಗಳು ಕನ್ನಡಿಗರ ನೆಲದಿಂದ ಬೆಳೆದ ಹೆಮ್ಮೆಯ ಸಂಸ್ಥೆಗಳಾಗಿವೆ. ಇದೀಗ ನಮ್ಮ ಕೆಎಸ್‌ಆರ್‌ಟಿಸಿ ಹೊಸದೊಂದು ಸೇವೆಯನ್ನ ಆರಂಭಿಸಿದ್ದು, ಮತ್ತೊಮ್ಮೆ ಜಗತ್ತಿಗೆ ಮಾದರಿ ಆಗುತ್ತಿದೆ.
ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಇದೀಗ 'ನಮ್ಮ ಕಾರ್ಗೋ' ಟ್ರಕ್ ಸೇವೆ ಶುರು ಮಾಡಿದೆ. ಈ ಮೂಲಕ ಲಾಜಿಸ್ಟಿಕ್ಸ್ ಅಂದ್ರೆ ಸರಕು ಸೇವೆಯಲ್ಲಿ ಕೂಡ ತನ್ನ ಶಕ್ತಿ ತೋರಿಸಲು ಸಜ್ಜಾಗಿದೆ. ಸದ್ಯಕ್ಕೆ ರಾಜ್ಯಾದ್ಯಂತ ಕಾರ್ಯ ನಿರ್ವಹಿಸಲು ಒಟ್ಟು 20 ಟ್ರಕ್‌ಗಳನ್ನ ರಸ್ತೆಗೆ ಇಳಿಸಲಾಗಿದ. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಟ್ರಕ್‌ಗಳಿಗೆ ಚಾಲನೆ ನೀಡಿ, ಹೊಸ ಇತಿಹಾಸ ಬರೆದಿದ್ದಾರೆ. ಭಾರತದ ಹೆಮ್ಮೆಯ ಸಂಸ್ಥೆ 'ಟಾಟಾ' ಈಗ ತಯಾರಿಸಿರುವ ಟ್ರಕ್‌ಗಳನ್ನ 'ನಮ್ಮ ಕಾರ್ಗೋ' ಸಂಸ್ಥೆಗೆ ಸೇರ್ಪಡೆ ಮಾಡಲಾಗಿದೆ.

ಬಂತು.. ಬಂತು.. ಕೆಎಸ್‌ಆರ್‌ಟಿಸಿ ಬಂತು!
ಸದ್ಯಕ್ಕೆ 20 ಟ್ರಕ್‌ಗಳನ್ನ 'ನಮ್ಮ ಕಾರ್ಗೋ' ಸೇವೆಗೆ ಸೇರ್ಪಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಜನರಿಂದ ಬರುವ ಪ್ರತಿಕ್ರಿಯೆ ಗಮನಿಸಿ, ಈ ಸಂಖ್ಯೆಯನ್ನು 1 ತಿಂಗಳಲ್ಲಿ 100ಕ್ಕೆ ಏರಿಸಲು ಸಿದ್ಧತೆ ನಡೆಸಲಾಗಿದೆ. ಹಾಗೇ 1 ವರ್ಷದಲ್ಲಿ 500ಕ್ಕೆ ಟ್ರಕ್‌ಗಳ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಈಗ 'ನಮ್ಮ ಕಾರ್ಗೋ' ಸೇವೆಗೆ ಕೇಂದ್ರವಾಗಲಿದೆ. ಇದು ಸರಕು ಸಾಗಣೆ ಟ್ರಕ್ ಡಿಪೋ ಆಗಲಿದೆ. ಹಾಗೇ ಇಲ್ಲಿಂದಲೇ ಟ್ರಕ್‌ಗಳ ನಿರ್ವಹಣೆ ಕೂಡ ನಡೆಯಲಿದೆ.
ಯಾವ ಊರುಗಳಿಂದ ಸೇವೆ ಸಿಗಲಿದೆ?
ಅಂದಹಾಗೆ 2021 ರಲ್ಲೇ ಕೆಎಸ್‌ಆರ್‌ಟಿಸಿ ಸಂಸ್ಥೆ ಕಾರ್ಗೋ ಸೇವೆ ಅಂದ್ರೆ ಸರಕು ಸಾಗಾಣಿಕೆ ಸೇವೆಯನ್ನ ಆರಂಭ ಮಾಡಿತ್ತು. ಬಸ್‌ಗಳನ್ನ ಬಳಸಿ ಈ ರೀತಿಯ ಸರಕು ಸೇವೆ ನೀಡುತ್ತಿತ್ತು, ಕೆಎಸ್‌ಆರ್‌ಟಿಸಿ ಸಂಸ್ಥೆ. ಆದರೆ ಇದೀಗ 6 ಚಕ್ರಗಳ ಟ್ರಕ್‌ಗಳನ್ನು ಬಳಸಿ ಸುಮಾರು 6 ಟನ್ ಸಾಮರ್ಥ್ಯದ ಸರಕು ಸಾಗಾಣಿಕೆ ಮಾಡಲು ಕೆಎಸ್‌ಆರ್‌ಟಿಸಿ ಸಂಸ್ಥೆ ಮುಂದಾಗಲಿದೆ. ಇನ್ನು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ರಾಜ್ಯದ ವಿವಿಧ ಸ್ಥಳಕ್ಕೆ ಸರಕು ಸಾಗಾಣಿಕೆ ಸೇವೆ ಸಿಗಲಿದೆ.

ಈಗ ಸರಕು ಸೇವೆ ಆರಂಭ ಮಾಡಿರುವ ಕೆಎಸ್‌ಆರ್‌ಟಿಸಿ ಸಂಸ್ಥೆ, ಔಷಧ ಸೇವೆಯೂ ಸೇರಿ ಜವಳಿ, ಆಹಾರ ಉದ್ಯಮಗಳಿಂದ ಸರಕು ಸಾಗಿಸೋದಕ್ಕೆ ಯೋಜನೆ ರೂಪಿಸಿದೆ. ಹಾಗೇ ತನ್ನ ಸರಕು ಸಾಗಾಣೆ ಸೇವೆಯಿಂದ ಆದಾಯವನ್ನ ಕೂಡ ಹೆಚ್ಚಿಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಸದ್ಯಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆ 8,355 ಬಸ್ ಹೊಂದಿದ್ದು, 32 ಲಕ್ಷ ಪ್ರಯಾಣಿಕರು ನಿತ್ಯ ಪ್ರಯಾಣ ಮಾಡುತ್ತಾರೆ. ಇದೀಗ ಹೊಸ ಸೇವೆ ಆರಂಭಿಸಿರುವ ಕನ್ನಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿಗೆ ಆಲ್ ದಿ ಬೆಸ್ಟ್ ಹೇಳೋಣ.












Click it and Unblock the Notifications