ನಾಗಮಂಗಲ ಗಲಭೆ: ನಮ್ಮವರು "ಅಮಾಯಕರು" ಬಿಟ್ಟು ಬಿಡಿ ಪ್ಲೀಸ್
ಮಂಡ್ಯದ ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಭಾರೀ ಹೈಡ್ರಾಮವೇ ನಡೆದಿದೆ. ಇನ್ನು ಕೆಲವರು ಗಲಾಟೆ ನಡೆಯುತ್ತಿದೆ ಎಂದು ನಾವೇ ಬಂದು ದೂರು ನೀಡಿದ್ದೇವೆ. ಆದರೆ, ನಮ್ಮವರನ್ನೇ ಬಂಧಿಸಿದ್ದಾರೆ ಎಂದಿದ್ದಾರೆ.
ಅಮಾಯಕರನ್ನು, ಗಣೇಶ ಪೂಜೆ ಮಾಡಿ ಬಂದು ಮನೆಯಲ್ಲಿ ಮಲಗಿದ್ದವರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಅಮಾಯಕರನ್ನು ಬಂಧಿಸಿದ್ದಾರೆ. ನಮ್ಮವರನ್ನು ಬಿಟ್ಟು ಬಿಡಿ ಪ್ಲೀಸ್ ಎಂದು ಕೆಲವರು ಪೊಲೀಸ್ ಠಾಣೆಗಳ ಮುಂದೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಬುಧವಾರ ತಡರಾತ್ರಿಯಿಂದಲೂ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ನಾಗಮಂಗಲ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಆದರೆ, ನಮ್ಮವರು ಅಮಾಯಕರು ಅವರನ್ನು ಬಂಧಿಸಿದ್ದು ಏಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದು. ಪೊಲೀಸ್ ಠಾಣೆಗಳ ಮುಂದೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಈ ರೀತಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವವರ ಮೇಲೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಗುಂಪು ಸೇರುವುದು ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕೇಸ್ ದಾಖಲಾಗಿದೆ. ಅಮಾಯಕರನ್ನು ಬಂಧಿಸುತ್ತಿಲ್ಲ ಪರಿಶೀಲನೆ ಮಾಡಿಯೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಸ್ಥಳೀಯರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಂಡ್ಯದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಮಂಡ್ಯದ ನಾಗಮಂಗಲದ ಗಲಭೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 150ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೆ ಈ ಗಲಭೆಗೆ ಸಂಬಂಧಿಸಿದಂತೆ 53 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಕ್ರಮ ತೆಗೆದುಕೊಳ್ಳಲಾಗಿದೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯ ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ಸಮೀಪದಲ್ಲಿರುವ ದರ್ಗಾದ ಬಳಿ ಬುಧವಾರ ತಡರಾತ್ರಿ ಗಣೇಶ ಮೂರ್ತಿ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಗಲಭೆ ಆಗಿದೆ. ಈ ಸಂದರ್ಭದಲ್ಲಿ ಯಾರೆಲ್ಲ ಇದ್ದರು, ಗಲಭೆಯಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಸಿಸಿಟಿವಿ ಕ್ಯಾಮರಾ ದೃಶ್ಯವನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ದಾಖಲೆಗಳನ್ನು ಪರಿಶೀಲನೆ ಮಾಡಿಯೇ ಕ್ರಮ ಜರುಗಿಸಲಾಗುವುದು. ಇದರಲ್ಲಿ ಭಾಗಿಯಾಗದೆ ಇದ್ದರೆ ಅಥವಾ ತಪ್ಪು ಮಾಡಿಲ್ಲ ಎನ್ನುವುದು ಖಚಿತವಾದರೆ ಅವರನ್ನು ಬಿಡುಗಡೆ ಮಾಡಲಾಗುವುದು. ಗಲಭೆಯಲ್ಲಿ ಭಾಗಿಯಾದವರ ಪತ್ತೆ ಕಾರ್ಯಾಚರಣೆಗಾಗಿ ತಂಡಗಳನ್ನು ಸಹ ರಚಿಸಲಾಗಿದೆ.
ಕಿಡಿಗೇಡಿಗಳ ಬಳಿ ಬಂದೂಕುಗಳು ಹಾಗೂ ಮಾರಕಾಸ್ತ್ರ ಇರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ ಈ ನಿಟ್ಟಿನಲೂ ಕ್ರಮ ತೆಗೆದುಕೊಳ್ಳಲಾಗುವುದು. ಆ ಗುಂಪು ಈ ಗುಂಪು ಎನ್ನವು ಪ್ರಶ್ನೆಯೇ ಬರುವುದಿಲ್ಲ. ಎಲ್ಲರ ಮೇಲೂ ನಾವು ಕ್ರಮ ತೆಗೆದುಕೊಳ್ಳಲಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಪ್ಪಿತಸ್ಥರ ಮೇಲಷ್ಟೇ ಕ್ರಮ: ಚಲುವರಾಯಸ್ವಾಮಿ
ಇನ್ನು ಗಲಭೆಯಲ್ಲಿ ಭಾಗಿಯಾದವರ ಮೇಲಷ್ಟೇ ಕ್ರಮ ತೆಗೆದುಕೊಳ್ಳಲಾಗುವುದು. ಯಾರು ತಪ್ಪಿತಸ್ಥರೋ ಅವರನ್ನು ಮಾತ್ರ ಬಂಧಿಸಲಾಗಿದೆ. ಪರಿಶೀಲನೆ ಮಾಡಿಯೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾರು ಕಾರಣಕರ್ತರೋ ಅವರ ಮೇಲಷ್ಟೇ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಸಚಿವ (ಉಸ್ತುವಾರಿ) ಚಲುವರಾಯಸ್ವಾಮಿ ಹೇಳಿದ್ದಾರೆ. ಪೊಲೀಸರು ಕ್ರಮ ತೆಗೆದುಕೊಂಡರೆ ಕ್ರಮ ತೆಗೆದುಕೊಂಡಿದ್ದಾರೆ. ಅದರಲ್ಲಿ ನಮ್ಮವರು ಇದ್ದಾರೆ ಅವರು ಭಾಗಿಯಾಗಿಲ್ಲ ಎನ್ನುತ್ತೀರಿ. ಕ್ರಮ ತೆಗೆದುಕೊಳ್ಳದೆ ಇದ್ದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತೀರಿ.
ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿದ ನಂತರವೇ ಕ್ರಮ ಜರುಗಿಸಲಾಗುವುದು. ಇದರಲ್ಲಿ ಮುಸ್ಲಿಂರೇ ಭಾಗಿಯಾಗಿರಲಿ. ಇಲ್ಲವೇ ಮತ್ತೊಬ್ಬರು ಭಾಗಿಯಾಗಲಿ ಅವರ ಮೇಲೆ ಕ್ರಮ ನಿಶ್ಚಿತ. ಆದರೆ, ಯಾವುದೇ ತಪ್ಪು ಮಾಡದವರ ಮೇಲೆ ಕ್ರಮ ಆಗುವುದಿಲ್ಲ. ಒಂದೊಮ್ಮೆ ಎಫ್‌ಐಆರ್ ದಾಖಲಾದರೂ, ಮುಂದೆ ಚಾರ್ಜ್‌ಶೀಟ್ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಪೊಲೀಸರು ಕೂಲಂಕುಷವಾಗಿ ಪರಿಶೀಲನೆ ಮಾಡಲಿದ್ದಾರೆ ಎಂದು ಸ್ಥಳೀಯರನ್ನು ಉದ್ದೇಶಿಸಿ ಹೇಳಿದ್ದಾರೆ.












Click it and Unblock the Notifications