ನಾಗಮಂಗಲ ಗಲಭೆ: ಪೊಲೀಸ್ ಇಲಾಖೆಯಿಂದಲೂ ಲೋಪ: ಎಡಿಜಿಪಿ ಹೇಳಿದ್ದೇನು ?
ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ.. ಎನ್ನುವ ಸಾಲಿನೊಂದಿಗೆ ಪ್ರಾರಂಭವಾಗುವ ನಮ್ಮ ನಾಡಗೀತೆಗೂ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳಿಗೂ ಈ ಸಾಲುಗಳಿಗೂ ಒಂದಕ್ಕೊಂದು ಸಂಬಂಧ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದ ನಾಗಮಂಗಲ ಘಟನೆಯಲ್ಲಿ ಪೊಲೀಸರ ಲೋಪವಿರುವ ಬಗ್ಗೆಯೂ ಚರ್ಚೆ ನಡೆದಿದೆ.
ಇನ್ನು ಮಂಡ್ಯದ ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ ಹಲವರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನು ಮಂಡ್ಯ ಜಿಲ್ಲಾ ವ್ಯಾಪ್ತಿಯ ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ಸಮೀಪದ ದರ್ಗಾದ ಬಳಿ ಬುಧವಾರ ತಡರಾತ್ರಿ ಗಣೇಶ ಮೂರ್ತಿ ಮೆರವಣಿಗೆ ನಡೆಸುವಾಗ ಸಂಘರ್ಷ ಏರ್ಪಟ್ಟಿತ್ತು. ಇದು ವಿಕೋಪಕ್ಕೂ ತಿರುಗಿತ್ತು. ಎರಡು ಗುಂಪುಗಳ ನಡುವೆ ಕಲ್ಲು ತೂರಾಟವು ನಡೆದು ಪರಿಸ್ಥಿತಿ ಕೈ ಮೀರಿತ್ತು. ಈ ಘಟನೆಗೆ ಪೊಲೀಸರ ವೈಫಲ್ಯವೂ ಕಾರಣ. ಪೊಲೀಸರು ಘಟನೆಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಪೊಲೀಸರು ಎಚ್ಚೆತ್ತು ಕೊಂಡಿದ್ದರೆ, ಪರಿಸ್ಥಿತಿಯನ್ನು ನಿಯಂತ್ರಿಸಬಹುದಿತ್ತು. ಈ ರೀತಿಯ ಅವಘಡಗಳು ಸಂಭವಿಸುತ್ತಿರಲಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.

ಪೊಲೀಸ್ ಇಲಾಖೆ ಘಟನೆ ನಡೆದ ಸಂದರ್ಭದಲ್ಲಿ ಮತ್ತಷ್ಟು ಎಚ್ಚರಿಕೆಯಿಂದ ಇದ್ದಿದ್ದರೆ, ಬಹುಶಃ ಈ ಅನಾಹುತವನ್ನು ತಪ್ಪಿಸಲು ಸಾಧ್ಯವಿತ್ತು ಎಂದು ಸ್ಥಳೀಯರು ಹಾಗೂ ಕೆಲವು ಪ್ರಮುಖರು ಹೇಳಿದ್ದರು. ಇದೀಗ ಪೊಲೀಸ್ ಇಲಾಖೆಯಿಂದಲೇ ಹೌದು ನಮ್ಮಿಂದಲೂ ಕೆಲವು ಲೋಪಗಳಾಗಿವೆ ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಇಲಾಖೆ ಲೋಪದ ಬಗ್ಗೆ ಎಡಿಜಿಪಿ
ಇನ್ನು ನಾಗಮಂಗಲದ ಗಲಭೆಯ ಬಗ್ಗೆ ಮಾತನಾಡಿರುವ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆರ್. ಹಿತೇಂದ್ರ ಅವರು, ನಾಗಮಂಗಲ ಗಲಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದರಲ್ಲಿ ನಮ್ಮ (ಪೊಲೀಸ್) ಇಲಾಖೆಯ ತಪ್ಪುಗಳು ಸಹ ಕಂಡುಬಂದಿವೆ. ಎಲ್ಲವನ್ನು ಪರಿಶೀಲನೆ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಗಲಭೆಯ ಬಗ್ಗೆ ತನಿಖೆ ನಡೆದಿದೆ. ಇದು ಪೂರ್ವನಿಯೋಜಿತವೋ ಅಲ್ಲವೋ ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿ ಇದೆ. ಆದರೆ, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಅವರು ಪುನರುಚ್ಚರಿಸಿದ್ದಾರೆ. ಆದರೆ, ಘಟನೆಯಲ್ಲಿ ಪೊಲೀಸ್ ಇಲಾಖೆಯಿಂದ ಯಾವ ತಪ್ಪಾಗಿದೆ. ಯಾವ ವಿಷಯದಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ ಎನ್ನುವ ಬಗ್ಗೆ ಅವರು ಏನು ಹೇಳಿಲ್ಲ. ಇದು ಸೂಕ್ಷ್ಮ ಸಂಗತಿಯಾಗಿರುವುದರಿಂದ ಪೊಲೀಸ್ ಇಲಾಖೆಯಲ್ಲಿ ಆತಂರಿಕವಾಗಿಯೇ ಈ ವಿಷಯವನ್ನು ಚರ್ಚೆ ಮಾಡಿ ಸೂಕ್ತ ನಿರ್ಧಾರ (ಕ್ರಮ) ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪೊಲೀಸ್ ಇಲಾಖೆ ಕಾರ್ಯವೈಖರಿಗೆ ಅಸಮಾಧಾನ
ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಂಡ್ಯದ ಜನ ಹಾಗೂ ವಿರೋಧ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದ ನಾಗಮಂಗಲದ ಜನ ತಪ್ಪು ಮಾಡದವರನ್ನೂ ಸಹ ಪೊಲೀಸರು ಅನವಶ್ಯಕವಾಗಿ ಬಂಧಿಸಿದ್ದಾರೆ ಎಂದು ದೂರಿದ್ದರು. ಅಲ್ಲದೇ ಪೊಲೀಸ್ ಠಾಣೆಗಳ ಮುಂದೆ ಬಂದು ಪ್ರತಿಭಟನೆಯನ್ನು ಸಹ ನಡೆಸಿದ್ದರು. ಇನ್ನು ವಿರೋಧ ಪಕ್ಷದ ನಾಯಕರು ಗಂಭೀರವಾದ ಆರೋಪಗಳನ್ನು, ಹೇಳಿಕೆಗಳನ್ನು ನೀಡಿದ್ದರು. ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಸಹ ಗುರಿಯಾಗಿಸಿಕೊಂಡು ತೀಕ್ಷಣ ಹೇಳಿಕೆಗಳನ್ನು ನೀಡಿದ್ದರು. ಘಟನೆಯ ಬಗ್ಗೆ ಈಗಲೂ ಪರ - ವಿರೋಧ ಚರ್ಚೆಗಳು ನಡೆದಿವೆ.












Click it and Unblock the Notifications