ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒನ್ ಇಂಡಿಯಾ'ದಲ್ಲಿ 'ಓಂ ಮಹಾಪ್ರಾಣ ದೀಪಂ' ಹಾಡಿನ ಕಥೆ ಬಿಚ್ಚಿಟ್ಟ ಹಂಸಲೇಖ

ಮಂಜುನಾಥ ಚಿತ್ರದ ಈ ಹಾಡಿನ ಮೂಲ ಪರಿಕಲ್ಪನೆ ಬೇರೆಯದ್ದೇ ಆಗಿತ್ತು. ಆದರೆ, ಹಂಸಲೇಖ ಅವರು ತಮ್ಮದೇ ಆದ ವಿಚಾರವಂತಿಕೆಯಿಂದ ಆ ಪರಿಕಲ್ಪನೆಗೆ ಹೊಸ ಸ್ವರೂಪ ತಂದ ಕತೆಯಿದು.

|
Google Oneindia Kannada News

ಕನ್ನಡದ 'ಶ್ರೀ ಮಂಜುನಾಥ' ಚಿತ್ರದ ಓಂ ಮಹಾಪ್ರಾಣ ದೀಪಂ... ಶಿವಂ ಶಿವಂ ಹಾಡು ಇಡೀ ದಕ್ಷಿಣ ಭಾರತದಲ್ಲಿ ಶಿವ ಸ್ತುತಿಗೆ ಹೊಸತೊಂದು ಗಾಯನವಾಗಿ ಭಜಿಸಲ್ಪಡುತ್ತಿರುವುದು ಸುಳ್ಳೇನಲ್ಲ. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಟಿವಿ ವಾಹಿನಿಗಳಲ್ಲಿ, ಕೆಲವಾರು ದೇಗುಲಗಳಲ್ಲಿ, ಧಾರ್ಮಿಕ, ಸಾಂಸ್ಕೃತಿಕ, ನೃತ್ಯ ಕಾರ್ಯಕ್ರಮಗಳಲ್ಲಿ ಈ ಹಾಡು ಅನುರಣಿಸುತ್ತಿದೆ.

2001ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಶ್ರೀ ಮಂಜುನಾಥ ಚಿತ್ರಕ್ಕೆ ಸಂಗೀತ ನೀಡಿದ್ದು ನಾದಬ್ರಹ್ಮ ಹಂಸಲೇಖ. ಈ ಹಾಡನ್ನು ಹಾಡಿದ್ದು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್.

ಸಿನಿಮಾ ಬಿಡುಗಡೆಯಾಗಿ 15 ವರ್ಷಗಳೇ ಕಳೆದಿವೆ. ಆಗಿನಿಂದ ಈ ಹಾಡು ಶಿವರಾತ್ರಿಯಂದು ತಪ್ಪದೇ ಅನುರಣಿಸುತ್ತದೆ. ಈ ಹಾಡನ್ನು ತನ್ಮಯತೆಯಿಂದ ಕೇಳುವ ಯಾವೊಬ್ಬ ಸಂಗೀತ ಪ್ರೇಮಿಗೂ ಈ ಹಾಡಿನ ಸಾಹಿತ್ಯ, ಸಂಗೀತ, ಮಾಧುರ್ಯ ಹಾಗೂ ಅವೆಲ್ಲವಕ್ಕೆ ಕಳಶವಿಟ್ಟಂಥ ಶಂಕರ್ ಮಹದೇವನ್ ಅವರ ದನಿ ಹಾಗೂ ಹಾಡುಗಾರಿಕೆಯ ಬಗ್ಗೆ ವಿಚಾರ ಮೂಡದಿರದು. ಈ ಹಾಡನ್ನು ಹೇಗೆ ಮಾಡಿರಬಹುದು ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ.

ಇದೇ ಪ್ರಶ್ನೆಗಳನ್ನು ಸಂಗೀತ ಸರೋವರ ಹಂಸಲೇಖ ಮುಂದಿಟ್ಟಾಗ ಅವರು ಹಲವಾರು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ಬಿಚ್ಚಿಟ್ಟ ಆ ಹಾಡಿನ ಹಿಂದಿನ ಕುತೂಹಲಕರ ವಿಚಾರಗಳು ಇಲ್ಲಿ ಅವರದೇ ಮಾತುಗಳಲ್ಲಿ. ಓವರ್ ಟು ಹಂಸಲೇಖ...

ಆವೇಶ ಭರಿತ ಕುಣಿತ ಬೇಕೆಂದಿದ್ದರು

ಆವೇಶ ಭರಿತ ಕುಣಿತ ಬೇಕೆಂದಿದ್ದರು

ಮಹಾಪ್ರಾಣ ದೀಪಂ ಎಂಬ ಹಾಡು ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಥೆಯಿದೆ. ಕಥೆಗಿಂತಲೂ ಚರ್ಚೆಗಳಿವೆ, ಆ ಚರ್ಚೆಗಳಿಗೆ ಸಮಾಧಾನಗಳಿವೆ. ಅವೆಲ್ಲವಕ್ಕೂ ಮಿಗಿಲಾಗಿ ಪರಿಶ್ರಮವಿದೆ. ಚಿತ್ರದ ಕಥೆಯಲ್ಲಿ ನಾಯಕ ಅರ್ಜುನ್ ಸರ್ಜಾ ಅವರು ಮೊದಲು ಪಕ್ಕಾ ನಾಸ್ತಿಕರಾಗಿರುತ್ತಾರೆ. ಆನಂತರ ಅವರು, ಆಸ್ತಿಕರಾಗುತ್ತಾರೆ. ಹಾಗಾಗಿ, ಅವರು ಶಿವನನ್ನು ಕುರಿತು ಭಜಿಸುವಾಗ ಥಕ ಥಕಿಟ, ಥಕ ಟಕಿತ ಎಂದು ತಾಂಡವ ನೃತ್ಯದ ಶೈಲಿಯಲ್ಲಿ ಆವೇಶಭರಿತರಾಗಿ ಹಾಡುವ ಹಾಡು ಮಾಡಬೇಕೆಂದು ಚಿತ್ರದ ನಿರ್ಮಾಪಕ ಜಿ.ಕೆ. ಭಾರವಿ ಹಾಗೂ ನಿರ್ದೇಶಕ ಕೆ. ರಾಘವೇಂದ್ರ ರಾವ್ ಹಾಗೂ ಅವರ ಸಂಗಡಿಗರ ಅಭಿಲಾಷೆಯಾಗಿತ್ತು.

ವಿವೇಕ-ತನ್ಮಯತೆಯ ಹಾಡು ಬೇಕೆಂದಿದ್ದೆ

ವಿವೇಕ-ತನ್ಮಯತೆಯ ಹಾಡು ಬೇಕೆಂದಿದ್ದೆ

ಇದಕ್ಕೆ ನನ್ನ ಸಹಮತವಿರಲಿಲ್ಲ. ಆದರೆ, ನಾನು ''ನಾಸ್ತಿಕ ಆಸ್ತಿಕನಾಗೋದು ಭಾವೋದ್ವೇಗದಿಂದಲ್ಲ. ವಿವೇಕ ಹಾಗೂ ತನ್ಮಯತೆದಿಂದ. ದೈವ ಸಾಕ್ಷಾತ್ಕಾರದ ಬಗ್ಗೆ ಆತನಿಗೆ ವೈಜ್ಞಾನಿಕವಾದ ಕಾರಣಗಳು ಸಿಕ್ಕಿದ್ದರಿಂದಲೇ ಆತ ಆಸ್ತಿಕನಾಗುತ್ತಾನೆ. ಹಾಗೆ ವಿವೇಕ ಸಂಪಾದಿಸುವ ಆತ ದೇವರನ್ನು ಭಜಿಸುವಾಗ ಹುಚ್ಚುಚ್ಚಾಗಿ ಕುಣಿಯೋದು ಬೇಡ. ಇಲ್ಲಿ ಒಂದು ತುಂಬಾ ಸೃಜನಶೀಲತೆಯುಳ್ಳ ಹಾಡು ಮಾಡೋಣ'' ಎಂದೆ. ಆದರೆ, ನಿರ್ದೇಶಕರಾದ ಕೆ. ರಾಘವೇಂದ್ರ ರಾವ್ ಅವರ ಜತೆಗಾರರೆಲ್ಲಾ ಒಪ್ಪಲಿಲ್ಲ. ಹಂಗೇ ಇರಬೇಕು, ಥಕ ಥಕಿಟ ಅಂತ ತಾಂಡವವಾಡುವಂತಿರಬೇಕು ಎಂದೇ ವಾದಿಸಿದರು.

ನಿರ್ದೇಶಕರೂ ಒಪ್ಪಿದರು

ನಿರ್ದೇಶಕರೂ ಒಪ್ಪಿದರು

ಹೀಗೆ, ಚರ್ಚೆಗಳು ಸಾಗುತ್ತಲೇ ಇರಬೇಕಾದರೆ ಮಧ್ಯೆ ಪ್ರವೇಶಿಸಿದ ರಾಘವೇಂದ್ರ ರಾವ್, ''ಇಲ್ಲ. ಹಂಸಲೇಖ ಹೇಳುವುದರಲ್ಲೂ ಒಂದು ಸತ್ಯವಿದೆ. ಥಕ ಥಕಿತ ನೃತ್ಯದ ಶೈಲಿಯಲ್ಲಿ ಹಾಡು ಮಾಡುವ ಬದಲು ವಿಧೇಯನಾಗಿ ಭಜಿಸುವಂಥ ದನಿಯಲ್ಲಿ, ಪಾಂಡಿತ್ಯ ತುಂಬಿದ ಒಂದು ಹಾಡು ಬರಲಿ'' ಎಂದು ಹೇಳಿದರು. ಆದರೆ, ಅವರ ಮಾತನ್ನು ಅವರ ಸಂಗಡಿಗರೂ ಒಪ್ಪಿಕೊಳ್ಳಲಿಲ್ಲವಾದರೂ ಆನಂತರ ರಾಘವೇಂದ್ರರ ಮಾತಿಗೆ ಒಲ್ಲದ ಮನಸ್ಸಿನಿಂದ ಒಪ್ಪಿದರು.

ಅಷ್ಟೂ ಶ್ಲೋಕ ಬರೆದವರು ಸಂಸ್ಕೃತ ಪಂಡಿತ ವೇದವ್ಯಾಸ

ಅಷ್ಟೂ ಶ್ಲೋಕ ಬರೆದವರು ಸಂಸ್ಕೃತ ಪಂಡಿತ ವೇದವ್ಯಾಸ

ಚಿತ್ರ ನಿರ್ಮಾಪಕ ಜಿ.ಕೆ. ಭಾರವಿಯವರಿಗೆ ವೇದವ್ಯಾಸ ಎಂಬ ಸಹೋದರರಿದ್ದಾರೆ. ಅವರು ಮಹಾನ್ ಸಂಸ್ಕೃತ ಪಂಡಿತರು. ಈ ಹಾಡಿನ ಸನ್ನಿವೇಶಕ್ಕಾಗಿ ಸುಮಾರು 25 ಪುಟಗಳಷ್ಟು ಮಂತ್ರಗಳನ್ನು, ಶ್ಲೋಕಗಳನ್ನು ಬರೆದು ತಂದು ಕೊಟ್ಟರು. ಇಪ್ಪತ್ತೈದು ಪುಟಗಳಲ್ಲಿ ಅವರು ಸುಮಾರು 500ಕ್ಕೂ ಹೆಚ್ಚು ಶ್ಲೋಕಗಳನ್ನು ಬರೆದಿದ್ದರು.

ಶ್ರುತಿ ಸುಳಿಗೆ ಸಿಲುಕಿದವು ಆಯ್ದ ಶ್ಲೋಕಗಳು

ಶ್ರುತಿ ಸುಳಿಗೆ ಸಿಲುಕಿದವು ಆಯ್ದ ಶ್ಲೋಕಗಳು

ನೀವು ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ. ಆದರೆ, ಮಂಜುನಾಥ ಚಿತ್ರದ ಆ ಮಹಾಪ್ರಾಣ ದೀಪಂ ಹಾಡನ್ನು ಕೇವಲ 20 ನಿಮಿಷಗಳಲ್ಲಿ ಕಂಪೋಸ್ ಮಾಡಿದೆ. ಶ್ರುತಿ ಹಿಡಿದು 25 ಪುಟಗಳಲ್ಲಿನ ಮಂತ್ರಗಳನ್ನು ಹಾಡುತ್ತಾ ಹಾಡುತ್ತಾ ಹೋಗಿ, ನನ್ನ ಶ್ರುತಿಗೆ ಹೊಂದುವಂಥ ಶ್ಲೋಕಗಳನ್ನು ಮಾತ್ರ ಗುರುತು ಮಾಡಿದೆ. ಹಾಗೇ ಸಾಗಿದ ಹಾಡು ಪಲ್ಲವಿ, ಚರಣಗಳ ಸಹಿತ ಕೇವಲ 20 ನಿಮಿಷಗಳಲ್ಲಿ ಸಿದ್ಧವಾಯಿತು.

4 ಗಂಟೆಗಳು ಬೇಕಾಯ್ತು ಧ್ವನಿಮುದ್ರಣಕ್ಕೆ

4 ಗಂಟೆಗಳು ಬೇಕಾಯ್ತು ಧ್ವನಿಮುದ್ರಣಕ್ಕೆ

ನಾನು 20 ನಿಮಿಷಗಳಲ್ಲಿ ಸಂಯೋಜನೆ ಮಾಡಿದ ಹಾಡಿಗೆ ದನಿ ನೀಡಲು ಗಾಯಕ ಶಂಕರ್ ಮಹದೇವನ್ ಸುಮಾರು 4 ತಾಸು ತೆಗೆದುಕೊಂಡಿದ್ದರು. ನನ್ನ ಸಂಗೀತ ನಿರ್ದೇಶದಲ್ಲಿ ಮೊದಲ ಬಾರಿಗೆ ಹಾಡುವ ಅವಕಾಶ ಸಿಕ್ಕಿದೆಯೆಂದು ಅಕ್ಕರೆಯಿಂದ ಬಂದು ಹಾಡಿದ್ದರು ಅವರು. ಇದು ಬ್ರೆತ್ ಲೆಸ್ ಸಾಂಗ್ ಆಗಿದ್ದರಿಂದ ಸುಮಾರು ಧ್ವನಿಮುದ್ರಣಕ್ಕೆ ಸುಮಾರು 4 ಗಂಟೆಗಳ ಕಾಲಾವಕಾಶವನ್ನು ಅವರು ತೆಗೆದುಕೊಂಡರು.

ನನ್ನ ಆದ್ಯ ಕರ್ತವ್ಯವಲ್ಲವೇ?

ನನ್ನ ಆದ್ಯ ಕರ್ತವ್ಯವಲ್ಲವೇ?

ಅಂತೂ ಇಂತು ಅದ್ಭುತವಾಗಿ ಮೂಡಿಬಂತು ಹಾಡು. ಆ ಹಾಡನ್ನು ಕೇಳಿದಾಗ ಈಗಲೂ ಹೆಮ್ಮೆಯಿದೆ. ಹಳ್ಳಿ ಮೇಷ್ಟ್ರು ಚಿತ್ರಕ್ಕಾಗಿ ಮಾಡಿದ ಸಂಕ್ರಾಂತಿ ಹಬ್ಬದ ಹಾಡು, ನಂಜುಂಡಿ ಚಿತ್ರ್ಕಕಾಗಿ ಮಾಡಿದ ದೀಪಾವಳಿ ಬಗೆಗಿನ ಹಾಡುಗಳು ಹೇಗೆ ಆಯಾ ಹಬ್ಬಗಳ ದಿನ ಸಾರ್ವಜನಿಕವಾಗಿ ಅಬ್ಬರದಿಂದ ಕೇಳಿಬರುತ್ತವೆಯೋ ಹಾಗೆಯೇ ಶಿವರಾತ್ರಿಯಂದು ಶ್ರೀ ಮಂಜುನಾಥ ಚಿತ್ರದ 'ಮಹಾಪ್ರಾಣ ದೀಪಂ ಶಿವಂ' ಹಾಡೂ ಕೇಳಿಬರುತ್ತದೆ. ಸಂಗೀತಗಾರನಾಗಿ ಈ ನಾಡಿಗೆ ಹೀಗೆ, ಹಬ್ಬಗಳಂದು ಗುನುಗುನಿಸುವ ಹಾಡು ಕೊಡುವುದು ನನ್ನ ಕರ್ತವ್ಯವಲ್ಲವೇ?

English summary
Veteran Kannada film music director, writer Hamsalekha has revealed the background story of his renowned song 'Om Mahakaala Deepam Shivam' from the kannada movie 'Sri Manjunatha' released in 2001. This song is still popular especially during Shivarathri festival across the South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X