Get Updates
Get notified of breaking news, exclusive insights, and must-see stories!

ಓದುಗರ ಬರಹ: ಮುಜರಾಯಿ ದೇಗುಲಗಳ ಅರ್ಚಕರಿಗೆ ಬೇಕಿದೆ ರಕ್ಷಣೆ; ಮೈಸೂರು ಪಂಚಮುಖಿ ಆಂಜನೇಯ ದೇಗುಲ ವಿವಾದ

ಮೈಸೂರಿನ ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನೇ ಗುರಿಯಾಗಿಸಿಕೊಂಡು ಸುದ್ದಿ ತೇಲಿ ಬಿಡಲಾಗುತ್ತಿದೆ. ಈ ವಿಚಾರದಲ್ಲಿ ಮಾಧ್ಯಮಗಳ ವರ್ತನೆಯನ್ನು ಅಲ್ಲಿನ ಭಕ್ತರು ಪ್ರಶ್ನಿಸುತ್ತಿದ್ದಾರೆ. 'ಒನ್ ಇಂಡಿಯಾ ಕನ್ನಡ' ಓದುಗರಾದ ಶ್ರೀನಿವಾಸ ಅವರ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.

ಹೇಗೆ ವೈದ್ಯರಿಗೆ ಅವರ ಮೇಲೆ ಹಲ್ಲೆ ಆಗದಂತೆ, ಗುಂಪಿನಲ್ಲಿ ಸಿಟ್ಟಿನಿಂದ ಇರುವ ಜನರು ಹಿಂಸಾಕೃತ್ಯ ನಡೆಸದಂತೆ ಕಾನೂನು ರಕ್ಷಣೆ ಸಿಗಬೇಕು ಎಂಬುದು ಬಹು ಚರ್ಚಿತ ಹಾಗೂ ತುರ್ತು ಅಗತ್ಯ ಆಗಿದೆಯೋ ಅದೇ ರೀತಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಹಾಗೂ ಜನಪ್ರಿಯ ದೇವಾಲಯಗಳಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುವವರಿಗೂ ರಕ್ಷಣೆ ಅಗತ್ಯ ಇದೆ ಎಂಬ ಪರಿಸ್ಥಿತಿ ಬಂದಿದೆ. ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಇರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಅವರ ಪರಿಸ್ಥಿತಿ ನೋಡಿದರೆ, ದೇವಸ್ಥಾನಗಳಲ್ಲಿ ದೇವರ ಪೂಜೆ ಮಾಡುವುದು ಹಾಗೂ ಯುದ್ಧದಲ್ಲಿ ತೊಡಗಿಕೊಳ್ಳುವುದು ಒಂದೇ ಎಂಬ ಭಾವನೆ ಬರುವ ರೀತಿಯ ಸನ್ನಿವೇಶ ಎದುರಾಗಿದೆ.

ಇಂಥ ಸನ್ನಿವೇಶದಲ್ಲಿ ಮೊದಲಿಗೆ ಮುಜರಾಯಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ಈ ಪ್ರಕರಣದ ಗಾಂಭೀರ್ಯ ಅರಿತು, ಇದೊಂದು ಸ್ಥಳದ ಸಮಸ್ಯೆಯನ್ನೇ ಕೇಸ್ ಸ್ಟಡಿ ರೀತಿಯಲ್ಲಿ ತೆಗೆದುಕೊಂಡು, ಧಾರ್ಮಿಕ ವೃತ್ತಿನಿರತರ ರಕ್ಷಣಾ ಕಾಯ್ದೆಯೊಂದರ ಅಗತ್ಯವನ್ನು ಅರಿತುಕೊಳ್ಳುವ ಸಮಯ ಇದಾಗಿದೆ.

Panchamukhi Anjaneya Temple Case

ಮೈಸೂರಿನ ಇರ್ವಿನ್ ರಸ್ತೆಯಲ್ಲಿನ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಪ್ರಕರಣ ಏನಿದು?

- ಈ ದೇವಸ್ಥಾನದ ಅರ್ಚಕರ ವಿರುದ್ಧ ದೂರು ಹೇಳಿಕೊಳ್ಳಲು ಕೆಲವು ಜನರು ಒಂದು ಖಾಸಗಿ ವಾಹಿನಿಯನ್ನು ಆಯ್ಕೆ ಮಾಡಿಕೊಂಡು, ಅರ್ಚಕರಾದ ಕೃಷ್ಣಮೂರ್ತಿ ಅವರ ವಿರುದ್ಧ ಬಾಯಿಗೆ ಬಂದಂತೆ ಬೈದು, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಿದ್ದಾರೆ.

- ಅಚರ್ಕರ ವಿರುದ್ಧ ದೂರುಗಳನ್ನು ಹೇಳಿದ್ದಾರೆ.

- ಅರ್ಚಕರ ಪತ್ನಿಯ ಬಗ್ಗೆ ಗೌರವಕ್ಕೆ ಚ್ಯುತಿ ಬರುವ ರೀತಿ ಮಾತನಾಡಿದ್ದಾರೆ.

- ಈಗಾಗಲೇ ನ್ಯಾಯಾಲಯದಲ್ಲಿ ಇರುವಂಥ (ಬನ್ನಿಮಂಟಪ ದೇವಸ್ಥಾನದ ವಿಚಾರ) ವ್ಯಾಜ್ಯವೊಂದರ ಬಗ್ಗೆ ಮಾತನಾಡಿದ್ದಾರೆ.

ಆ ದೇವಸ್ಥಾನದ ಹಣವನ್ನೋ ಆಭರಣವನ್ನೋ ದುರುಪಯೋಗ ಮಾಡಿಕೊಂಡರೆ ಪೊಲೀಸರಿಗೆ ತಾನೇ ದೂರು ಕೊಡಬೇಕು?

ಇನ್ನು ಆ ದೇವಸ್ಥಾನದಲ್ಲಿನ ಹುದ್ದೆಯನ್ನು ದುರುಪಯೋಗ ಮಾಡಿಕೊಂಡರೆ ಮುಜರಾಯಿ ಇಲಾಖೆಗೆ ತಾನೇ ದೂರು ಕೊಡಬೇಕು?

ಕಾನೂನು, ಕಾಯ್ದೆ, ಕಟ್ಟಳೆ ಇವೆಲ್ಲವನ್ನೂ ಮೀರಿದ ನ್ಯಾಯಾಲಯವೇ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮ?

ಆ ಅರ್ಚಕರ ಕಡೆಯಿಂದ ಒಂದು ಆರೋಪ ಇದೆ. ಈಗ ತಮ್ಮ ವಿರುದ್ಧ ಮಾತನಾಡಿದವರು ಸತತವಾಗಿ ಹಣ ಪಡೆದುಕೊಂಡಂಥವರು. ಯಾವಾಗ ತಾನು ಇನ್ನು ಮುಂದೆ ಹಣ ಕೊಡುವುದಿಲ್ಲ ಎಂದು ಹೇಳಿದೆನೋ ಆಗಿಂದ ಈ ರೀತಿಯ ಆರೋಪ ಮಾಡುತ್ತಾ ಇದ್ದಾರೆ ಅನ್ನುತ್ತಾರೆ. ಈ ಆಯಾಮದಲ್ಲಿಯೂ ಪ್ರಕರಣವನ್ನು ನೋಡಬೇಕಾ ಬೇಡವಾ?

ಮುಜರಾಯಿ ದೇವಸ್ಥಾನಕ್ಕೆ ಹಾಗೂ ಅಲ್ಲಿ ಆಗುವ ಬೆಳವಣಿಗೆಗೆ ಉತ್ತರದಾಯಿತ್ವ ಯಾರು?

ಜನರೇ ಮಾಡಿಕೊಳ್ಳುವ ಸಮಿತಿಯ ಜವಾಬ್ದಾರಿ ಹಾಗೂ ಹಕ್ಕುಗಳು ಏನು?

ಮಾಧ್ಯಮಗಳು ಯಾರ ಮೇಲೆ ಏನು ಆರೋಪ ಬಂದರೂ ತಮಗೆ ಮನಸ್ಸಿಗೆ ತೋಚಿದ ಪದಗಳನ್ನು ಬಳಸಿ, ಅದರ ಬಗ್ಗೆ ಪ್ರಚಾರ ಮಾಡಿಬಿಡಬಹುದಾ? ಭಾರತದ ಒಬ್ಬ ನಾಗರಿಕನಿಗೆ ಏನು ಹಕ್ಕು, ಜವಾಬ್ದಾರಿ ಇದೆಯೋ ಇದಕ್ಕಿಂತ ಒಂದು ಸಾಸಿವೆ ಕಾಳಿನಷ್ಟು ಹೆಚ್ಚಿನ ಹಕ್ಕು, ಅಧಿಕಾರ ಮಾಧ್ಯಮಗಳಿಗೇನೂ ಇಲ್ಲ.

Mysuru

ವಯೋಸಹಜ ಅನಾರೋಗ್ಯವೂ ಇರುವ, ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಅರ್ಚಕರಾಗಿ ಇರುವಂಥ ವ್ತಕ್ತಿಯ ತೇಜೋವಧೆ ಮಾಡುವ ಅಧಿಕಾರ ಮಾಧ್ಯಮಗಳಿಗಾಗಲೀ, ಖಾಸಗಿ ವ್ಯಕ್ತಿಗಳಿಗಾಗಲೀ ಏನಿದೆ?

ಇಡೀ ಪ್ರಕರಣದಲ್ಲಿ ಹಾಸ್ಯಾಸ್ಪದ ಎನಿಸುವ ದೂರೊಂದಿದೆ. ಅದೇನೆಂದರೆ ಅರ್ಚಕರಾದ ಕೃಷ್ಣಮೂರ್ತಿಯವರು ಬಾಲಕಾರ್ಮಿಕರನ್ನು ಬಳಸಿದ್ದಾರಂತೆ. ಅದು ಕೂಡ ದೇವರ ಪೂಜೆಗಾಗಿ ಬಾಲಕಾರ್ಮಿಕರ ಬಳಕೆ ಮಾಡಲಾಗಿದೆ ಎಂಬುದು ಆರೋಪ.

ಬ್ರಾಹ್ಮಣರಲ್ಲಿ ಬಹುಪಾಲು ಎಂಟು ವರ್ಷಕ್ಕೆ ಉಪನಯನ ಮಾಡುತ್ತಾರೆ. ಮನೆಯಲ್ಲಿ ಪೂಜೆ- ಪುನಸ್ಕಾರ ಮೊದಲಾದವನ್ನು ಹೇಳಿಕೊಡ್ತಾರೆ. ಅಷ್ಟೇ ಅಲ್ಲ, ವೇದಾಧ್ಯಯನಕ್ಕೆ ಅಂತ ಶೃಂಗೇರಿ, ಉಡುಪಿಯ ಅಷ್ಟಮಠಗಳು, ಮಂತ್ರಾಲಯ, ಉತ್ತರಾದಿ ಮಠ ಹೀಗೆ ಹಲವು ಧಾರ್ಮಿಕ ಸ್ಥಳಗಳಿಗೆ ಕಳುಹಿಸುತ್ತಾರೆ. ಅಲ್ಲೆಲ್ಲ ಕಡೆ ಮಕ್ಕಳು ತಮ್ಮ ಸಹಪಾಠಿಗಳಿಗೆ ಊಟ ಬಡಿಸುವುದು, ಆಯಾ ಸ್ಥಳಕ್ಕೆ ಅಗತ್ಯವಾದ ಕೆಲಸ- ಕಾರ್ಯಗಳನ್ನು ಮಾಡುವುದರಲ್ಲಿ ತೊಡಗಿಕೊಳ್ಳುವುದು, ಪೂಜೆ ಮೊದಲಾದವನ್ನು ಮಾಡುತ್ತಾರೆ, ಸ್ವಾಮಿ, ಅವರೆಲ್ಲರೂ ಬಾಲ ಕಾರ್ಮಿಕರಾ?

ಬಾಲಕಾರ್ಮಿಕ ಎಂಬುದಕ್ಕೆ ಸರ್ಕಾರದಿಂದಲೇ ಇರುವ ವ್ಯಾಖ್ಯಾನವನ್ನು ತಿಳಿಸಿಕೊಡಬೇಕು ಅಂತ ಸಂಬಂಧಪಟ್ಟವರನ್ನು ಕೇಳಬೇಕಿದೆ.

ಧಾರ್ಮಿಕ ಹಿನ್ನೆಲೆಯ ಒಂದು ವಿಚಾರವನ್ನು ಮುಂದಿಟ್ಟುಕೊಂಡು, ವಯೋಸಹಜವಾಗಿ ಹಾಗೂ ಮನುಷ್ಯರ ಸ್ವಭಾವದಂತೆ ಇಂಥ ಆರೋಪಗಳಿಗೆ ಸಿಟ್ಟು ಮಾಡಿಕೊಳ್ಳುವ ವ್ಯಕ್ತಿಯನ್ನು (ಅರ್ಚಕ ಕೃಷ್ಣಮೂರ್ತಿ) ಹಾಗೂ ಈ ಪ್ರಕರಣಕ್ಕೆ ಹೇಗೂ ಸಂಬಂಧ ಇಲ್ಲದ ಅವರ ಪತ್ನಿಯ ಗೌರವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವ ಈ ಜನರ ವಿರುದ್ಧ ಕ್ರಮ ಬೇಡವಾ?

ಮುಜರಾಯಿ ಇಲಾಖೆ ಅಂದರೆ ಏನೂ ಉಪಯೋಗ ಇಲ್ಲದ, ಮಂತ್ರಿ ಹುದ್ದೆಯೂ ಇರುವ ಒಂದು ಇಲಾಖೆಯೋ ಹೇಗೆ?

ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ, ಮುಜರಾಯಿ ಇಲಾಖೆ, ನ್ಯಾಯಾಂಗ ಹಾಗೂ ಮಾಧ್ಯಮಗಳು ಎಲ್ಲವನ್ನೂ ಅಣಕ ಮಾಡುವ ಘಟನೆ ನಡೆದಿದೆ. ಒಬ್ಬ ವ್ಯಕ್ತಿಯ ವಿರುದ್ಧ ದೂರು ಬಂದರೆ ಅದಕ್ಕೆ ಕಾನೂನು ವ್ಯಾಪ್ತಿಯಲ್ಲಿಯೇ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಇಂಥ ಪ್ರಕರಣಗಳನ್ನು ಮತ್ತಷ್ಟು ಜಟಿಲ ಮಾಡುವ, ಕನಿಷ್ಠ ಮಟ್ಟದ ಜವಾಬ್ದಾರಿಯಿಂದಲೂ ನಡೆದುಕೊಳ್ಳದ ಮಾಧ್ಯಮ ಸಂಸ್ಥೆಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕು.

ಮಾಧ್ಯಮಗಳಿಗೆ ಹೋಗಿ ಮಾನ ಕಳೆಯುತ್ತೀವಿ ಎಂದು ಹೆದರಿಸುವ ಜನರಿಗೆ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಜೀವನ ನಡೆಸುತ್ತಿರುವ ಮಾಧ್ಯಮಗಳಿಗೆ ಸರಿಯಾದ ಪಾಠವಾಗಬೇಕು.

(ಗಮನಿಸಿ: ಇದು ಓದುಗರ ಬರಹ. ಒನ್ ಇಂಡಿಯಾ ಕನ್ನಡ ಜಾಲತಾಣದಲ್ಲಿ ಪ್ರಕಟವಾಗುವ ಸುದ್ದಿ, ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು. ನಿಮ್ಮ ಊರಿನ ಸುದ್ದಿ, ವಿದ್ಯಮಾನ, ವಿಚಾರಗಳನ್ನು ಹಂಚಿಕೊಳ್ಳಬಹುದು. ವಿಶೇಷ ಲೇಖನಗಳನ್ನೂ ಕಳಿಸಬಹುದು. ಇಮೇಲ್: [email protected] )

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+