Ginger Price Hike in Mysuru: ಟೊಮೆಟೋ ಬಳಿಕ ದಶಕದಲ್ಲೇ ದಾಖಲೆ ಮಟ್ಟಕ್ಕೆ ಶುಂಠಿ ಬೆಲೆ ಏರಿಕೆ, ವಿವರ ನೋಡಿ
ಮೈಸೂರು, ಜುಲೈ 21: ತರಕಾರಿಗಳ ದರ ಗಗನಕ್ಕೆ ಏರಿಕೆ ಆಗಿ ವಾರಗಳೇ ಕಳೆದಿದ್ದು, ಇನ್ನೂವರೆಗೆ ಸಾಮಾನ್ಯ ಸ್ಥಿತಿಗೆ, ಜನರಿಗೆ ಕೈಗೆಟುಕುವ ರೀತಿಯಲ್ಲಿ ಇಳಿಕೆ ಆಗಿಲ್ಲ. ಇದೀಗ ಆರ್ಯುವೇದ ಮದ್ದಿಗೆ, ಮಾಂಸಾಹಾರ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳಿಗೆ ಅತ್ಯವಶ್ಯಕವಾದ ಶುಂಠಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ಇದರಿಂದ ಬೆಳೆಗಾರರು ಮೊಗದಲ್ಲಿ ಮಂದಹಾಸ ತುಂಬಿದೆ. ದಶಕದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಗಾರರು ಲಾಭ ಪಡೆಯುತ್ತಿದ್ದಾರೆ.
ತರಕಾರಿಗಳಲ್ಲಿ ಬೀನ್ಸ್, ಮೆಣಸಿನಕಾಯಿ, ಕ್ಯಾರೇಟ್ ದರ ಸದಾ ಹೆಚ್ಚಿರುತ್ತಿತ್ತು, ಇದೀಗ ಟೊಮ್ಯಾಟೊ ದರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಬೆನ್ನಲ್ಲೆ ಇದೀಗ ಶುಂಠಿ ಪ್ರತಿ ಕೇಜಿಯ ಬೆಲೆ ಗಗನಕ್ಕೆ ಏರಿದೆ. ಗುರುವಾರದವರೆಗೆ ರಾಜ್ಯಾದ್ಯಂತ ಮುಕ್ತ ಮಾರುಕಟ್ಟೆಗಳಲ್ಲಿ ಗುಣಮಟ್ಟಕ್ಕೆ ಅನುಗುಣವಾಗಿ ಒಂದು ಕಿಲೋ ಶುಂಠಿ 300 ರಿಂದ 400 ರೂ.ವರೆಗೆ ಬಿಕರಿಯಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಘಟಕ ಹೇಳುವ ಪ್ರಕಾರ, ಕಳೆದ ವರ್ಷ 2022ರಲ್ಲಿ ಬೆಳೆಗಾರರಿಂದ 2,000 ರಿಂದ 3,000 ರೂಪಾಯಿಗೆ ಮಾರಾಟವಾಗುತ್ತಿದ್ದ 60 ಕೆಜಿ ಶುಂಠಿ ಈಗ 11,000 ರೂಪಾಯಿಗೆ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಈ ಮೂಲಕ ಶುಂಠಿಯ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ ಆಗಿದೆ.
ಹಳೆಯ ಕಟಾವಿಗೂ ಈಗ ಲಾಭ
ರಾಜ್ಯದ ಮೈಸೂರು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಬೆಳೆಗಾರರು ಕಳೆದ ಮುಂಗಾರು ಹಂಗಾಮಿನಲ್ಲಿ ಕಟಾವು ಮಾಡಿದ್ದ ಶುಂಠಿ ಬೆಳೆಗಳನ್ನು ಈಗ ಮಾರಾಟ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ. ಹೊಸದಾಗಿ ಕೊಯ್ಲು ಮಾಡಿ ಮಾರುಕಟ್ಟೆಗಳಲ್ಲಿ ದಾಸ್ತಾನು ಮಾಡಲಾಗಿತ್ತು. ಇದೀಗ
ಬೆಳೆ ಕೂಡ ದಾಖಲೆ ಮಟ್ಟದ ಬೆಲೆಗೆ ಮಾರಾಟವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹತ್ತು ವರ್ಷದಲ್ಲೇ ಇಷ್ಟು ರೇಟು ಬಂದಿರಲಿಲ್ಲ
ಶುಂಠಿ ಬೆಳಗಾರರು ಆಗಿರುವ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಅವರು, ಕಳೆದ 10 ವರ್ಷಗಳಲ್ಲಿಯೇ ಇದೆ ಮೊದಲ ಬಾರಿಗೆ ಶುಂಠಿ ಬೆಲೆಯಲ್ಲಿ ಇಂತಹ ದಾಖಲೆಯ ಮಟ್ಟದ ಹೆಚ್ಚು ಕಂಡು ಬಂದಿದೆ. ಟೊಮೇಟೊ ದಂತೆಯೇ ಬೆಲೆ ಹೆಚ್ಚಿರುವ ಕಾರಣ ರಾಜ್ಯದ ಕೆಲವು ಭಾಗಗಳಲ್ಲಿ ಶುಂಠಿ ದಾಸ್ತಾನಿನಲ್ಲಿ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿವೆ ಎಂದು ಅವರು ತಿಳಿಸಿದರು.

ಬೆಲೆ ಹೆಚ್ಚಳ ಹಿನ್ನೆಲೆ ಶುಂಠಿ ಕಳ್ಳತನ
ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಜು.17ರಂದು ದಾಖಲಾದ ಪ್ರಕರಣದಲ್ಲಿ ಮಳಲವಾಡಿಯ ರೈತರೊಬ್ಬರು ತಮ್ಮ ಹೊಲದಲ್ಲಿ 1.8 ಲಕ್ಷ ರೂ.ಮೌಲ್ಯದ ಶುಂಠಿ ಕಳ್ಳತನ ಆಗಿದೆ.ಹೊರಳವಾಡಿಯ ಮತ್ತೊಬ್ಬ ರೈತ 10 ಸಾವಿರ ರೂ. ಮೌಲ್ಯದ ಶುಂಠಿಯ ಕಳ್ಳತನವಾಗಿದ್ದು, ಬಿಳಿಗೆರೆ ಪೊಲೀಸರಿಗೆ ದೂರು ನೀಡಲಾಗಿದ್ದರ ಬಗ್ಗೆ ವರದಿ ಆಗಿದೆ.
ಜಿಲ್ಲೆಯಲ್ಲಿ ಶುಂಠಿ ವ್ಯಾಪಾರಕ್ಕೆ ವ್ಯವಸ್ಥಿತ ಮಾರುಕಟ್ಟೆ ಇಲ್ಲದೆ ಪರದಾಡುವಂತಾಗಿದೆ. ಇದು ರಾಜ್ಯ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಇತರ ರಾಜ್ಯಗಳ ಖರೀದಿದಾರರು ತಮ್ಮ ಸರಬರಾಜುಗಳನ್ನು ಕರ್ನಾಟಕದ ಸ್ಥಳೀಯ ಮಾರಾಟಗಾರರಿಂದ ಸಂಗ್ರಹಿಸುತ್ತಾರೆ. ಸರ್ಕಾರ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಆಯುರ್ವೇದ ಮತ್ತು ಇತರ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆಯನ್ನು ಉಲ್ಲೇಖಿಸಿ ಬೆಂಗಳೂರು ಮತ್ತು ನೆರೆಯ ಕೇರಳ ರಾಜ್ಯದಿಂದ ವ್ಯಾಪಾರಿಗಳು ಉತ್ತಮ ಗುಣಮಟ್ಟದ ಶುಂಠಿಗಾಗಿ ವಿನಂತಿಯೊಂದಿಗೆ ಜಿಲ್ಲೆಗಳ ಬೆಳೆಗಾರರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications