ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಗೆದಷ್ಟೂ ಬರೀ ಹಗರಣಗಳೇ: ಇಲ್ಲಿದೆ ಕೆಲವು ಮಹತ್ವದ ಮಾಹಿತಿ
ಮೈಸೂರು, ಸೆಪ್ಟೆಂಬರ್ 10: ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರ ಕೊರಳಿಗೆ ಸುತ್ತಿಕೊಂಡು ಸಿಎಂ ಕುರ್ಚಿಗೆ ಸಂಚಕಾರ ತಂದಿರುವ ಈ ಸಮಯದಲ್ಲಿ ಕೇವಲ ಸಿಎಂ ಸಿದ್ದರಾಮಯ್ಯರಿಗಿಂತ ಹೆಚ್ಚಾಗಿ ಈಗ ಈ ಹಿಂದೆ ಬಿಜೆಪಿ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿದ್ದ ಹೆಚ್.ವಿ.ರಾಜೀವ್ ಅವರು ಎಂಟು ನೂರಕ್ಕೂ ಹೆಚ್ಚು ನಿವೇಶನಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಇದೀಗ ಸುದ್ದಿಯಾಗುತ್ತಿದೆ.
ಜೊತೆಗೆ 350ಕ್ಕೂ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದೆಲ್ಲವನ್ನು ಗಮನಿಸಿದರೆ ಮುಡಾದಲ್ಲಿ ಬಗೆದಷ್ಟು ಹಗರಣಗಳೇ ಹೊರಬರಲಿವೆ ಎಂಬುದು ನಿಸ್ಸಂದೇಹವಾಗಿದೆ.ಇವತ್ತು ರಾಜ್ಯ ಮಾತ್ರವಲ್ಲದೆ ದೆಹಲಿವರೆಗೂ ಮೈಸೂರಿನ ಮುಡಾ ಹಗರಣ ಸುದ್ದಿಯಾಗಿದೆ. ಮೈಸೂರು ಮುಡಾ ಈಗ ರಾಜ್ಯದಲ್ಲಂತು ಭಾರೀ ಫೇಮಸ್ಸು ಆಗಿದೆ. ಬಹುಶಃ ನಿವೇಶನಕ್ಕಾಗಿ ಅರ್ಜಿ ಹಾಕಿ ಒಂದಿಷ್ಟು ಹಣವನ್ನು ಪಾವತಿಸಿ ಇವತ್ತು ಸಿಗಬಹುದು, ನಾಳೆ ಸಿಗಬಹುದು ಎಂದು ಅದೆಷ್ಟೋ ಮಂದಿ ಕಾಯುತ್ತಲೇ ಇದ್ದಾರೆ.

ಮೂರರಿಂದ ನಾಲ್ಕು ದಶಕಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಮುಡಾ ನಿವೇಶನ ಅವರಿಗೆ ಮರೀಚಿಕೆಯಾಗುತ್ತಿದೆ. ಆದರೆ ವಾಮಮಾರ್ಗದಲ್ಲಿ ಇಲ್ಲಿ ನಿವೇಶನ ಪಡೆಯುವುದು ಕಷ್ಟವೇ ಅಲ್ಲ ಎಂಬದು ಗೊತ್ತಾಗುತ್ತಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಮುಡಾ ಅಧ್ಯಕ್ಷರಾಗಿ ಹೆಚ್.ವಿ.ರಾಜೀವ್ ಕಾರ್ಯನಿರ್ವಹಿಸಿದ್ದರು.
ಈ ರಾಜೀವ್ ಬಿ.ಎಸ್. ಯಡಿಯೂರಪ್ಪ ಅವರ ಶಿಷ್ಯರೆಂದರೆ ತಪ್ಪಾಗಲಾರದು. ಈ ಹಿಂದೆ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ಅವರೊಂದಿಗೆ ಬಿಜೆಪಿ ಬಿಟ್ಟು ಹೋಗಿದ್ದಾರೆ. ಆ ಸಂದರ್ಭ (2013) ಚುನಾವಣೆ ನಡೆದಾಗ ಕೆಜೆಪಿಯಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಅವರ ಸೋಲಿಗೆ ಕಾರಣರಾಗುವುದರೊಂದಿಗೆ ಕಾಂಗ್ರೆಸ್ ನ ಎಂ.ಕೆ.ಸೋಮಶೇಖರ್ ಅವರನ್ನು ಗೆಲ್ಲಿಸಿದ್ದರು.
ದಿನಸಿ ಅಂಗಡಿಯಿಂದ ರಿಯಲ್ ಎಸ್ಟೇಟ್ ತನಕ
ಇದಾದ ನಂತರ ಯಡಿಯೂರಪ್ಪ ಬಿಜೆಪಿ ಮರಳಿದಾಗ ಮತ್ತೆ ಬಿಜೆಪಿ ಸೇರಿದ್ದರು. ಆದರೆ ಸ್ವಪಕ್ಷದ ಮಾಜಿ ಸಚಿವ ರಾಮದಾಸ್ ಅವರೊಂದಿಗೆ ಎಣ್ಣೆ ಸೀಗೆ ಕಾಯಿ ಸಂಬಂಧ ಹೊಂದಿದ್ದ ಅವರು ಒಳಗೊಳಗೆ ಶೀತಲ ಸಮರ ನಡೆಸುತ್ತಲೇ ಬಂದಿದ್ದರು. ರಾಜೀವ್ ಅವರ ರಾಜಕೀಯ ಬದುಕನ್ನು ನೋಡಿದರೆ ಏರು ಪೇರಿನದ್ದೇ ಆಗಿದೆ. ಆದರೆ ದಿನಸಿ ಅಂಗಡಿ ನಡೆಸುತ್ತಿದ್ದ ರಾಜೀವ್ ರಿಯಲ್ ಎಸ್ಟೇಟ್ ಬಿಸಿನೆಸ್ ಗೆ ಇಳಿದು ಅದರಲ್ಲಿ ತ್ರಿವಿಕ್ರಮನಾಗಿ ಬೆಳೆದಿದ್ದು ಇತಿಹಾಸ. ಈ ನಡುವೆ ಬಿಜೆಪಿಯಲ್ಲಿ ಮಣ್ಣು ಹೊತ್ತ ಋಣ ತೀರಿಸುವ ಸಲುವಾಗಿ ಮುಡಾ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ಕೆ.ಆರ್.ಕ್ಷೇತ್ರದಲ್ಲಿ ಎಸ್.ಎ.ರಾಮದಾಸ್ ಬಳಿಕ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿದ್ದ ರಾಜೀವ್ ಸಹಕಾರ ಕ್ಷೇತ್ರದಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದರು. ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮದಾಸ್ ಅವರಿಗೆ ಟಿಕೆಟ್ ನೀಡಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ತನಗೆ ಟಿಕೆಟ್ ಸಿಗಬಹುದು ಎಂದು ಕನಸು ಕಂಡಿದ್ದರು. ಆದರೆ ಆಗಿದ್ದೇ ಬೇರೆ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಗೆಲುವು ಸಾಧಿಸುವಲ್ಲಿಯೂ ಯಶಸ್ವಿಯಾಗಿದ್ದರು. ಈ ನಡುವೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮುಡಾ ಅಧ್ಯಕ್ಷ ಸ್ಥಾನದ ಅಧಿಕಾರ ಕಳೆದು ಕೊಂಡ ರಾಜೀವ್ ಕಂಗಾಲಾಗಿದ್ದರು.
ಬಿಜೆಪಿ ಬಿಟ್ಟು ಕೈಹಿಡಿದ ರಾಜೀವ್
ಈ ನಡುವೆ ಸಿಎಂ ಸಿದ್ದರಾಮಯ್ಯ ತನ್ನ ಆಪ್ತ ಮರೀಗೌಡ ಅವರನ್ನು ಮುಡಾ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದ್ದರು. ಅದಾಗಲೇ ರಾಜೀವ್ ಬಹುಶಃ ತನ್ನ ಅಧಿಕಾರ ದುರುಪಯೋಗದ ಪ್ರಕರಣ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಗೆ ಹತ್ತಿರವಾಗ ತೊಡಗಿದರು. ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿಯನ್ನು ತೊರೆದ ಅವರು ಅದ್ಧೂರಿ ಸಮಾರಂಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಸದ್ಯ ಅವರು ಕಾಂಗ್ರೆಸ್ ಮುಖಂಡರಾಗಿದ್ದಾರೆ. ಹೀಗಾಗಿ ಬಿಜೆಪಿ ಅವರ ವಿರುದ್ಧ ಸಮರಕ್ಕೆ ಸಜ್ಜಾಗಿದೆ.
ಇದೀಗ ಹೆಚ್.ವಿ.ರಾಜೀವ್ ಸೇರಿದಂತೆ ಹಲವು ನಾಯಕರು ಮತ್ತು ಅಧಿಕಾರಿಗಳಿಗೆ ಭ್ರಷ್ಟಾಚಾರದ ಉರುಳು ಸುತ್ತಿಕೊಳ್ಳಲಾರಂಭಿಸಿದೆ ಅದರಲ್ಲೂ ರಾಜೀವ್ ಅವರ ಪಾತ್ರ ಹೆಚ್ಚಾಗಿಯೆ ಇರುವುದು ಈಗ ಹಗರಣ ಮಗ್ಗಲು ಬದಲಿಸುವ ಲಕ್ಷಣ ಕಾಣಿಸುತ್ತಿದೆ. ಈಗಾಗಲೇ ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಇದರ ನಡುವೆ ಸುಮಾರು 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟೀಸ್ ನೀಡಿ ವಿಚಾರಣೆಗೆ ಕರೆದಿದೆ

ಈಗ ಮುಡಾಹಗರಣಕ್ಕೆ ಮರು ಜೀವ
ಇದೆಲ್ಲದರ ನಡುವೆ ಮುಡಾ ಮಾಜಿ ಅಧ್ಯಕ್ಷ ರಾಜೀವ್ ಕಡೆಗೆ ಹಗರಣದ ಉರುಳು ಸುತ್ತಿಕೊಳ್ಳುತ್ತಿದೆ. ನ್ಯಾಯಾಲಯದಲ್ಲಿ ಭೂ ವಿವಾದದ ವ್ಯಾಜ್ಯದ ಜತೆಗೆ ಆಯುಕ್ತರ ಅನುಮೋದನೆ ಇಲ್ಲದೆ ನಿವೇಶನಗಳನ್ನು ಬಿಡುಗಡೆಗೊಳಿಸಿಕೊಂಡ ಮುಡಾ ಮಾಜಿ ಅಧ್ಯಕ್ಷರ ವಿರುದ್ಧ ಮಾಜಿ ಆಯುಕ್ತ ಡಿ.ಬಿ.ನಟೇಶ್ ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರ ಬಹಿರಂಗವಾಗಿದ್ದು, ಎರಡು ವರ್ಷಗಳ ಹಳೆಯ ಪ್ರಕರಣಕ್ಕೆ ಮತ್ತೊಮ್ಮೆ ಮರು ಜೀವ ಸಿಕ್ಕಂತಾಗಿದೆ.
ಮುಡಾ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಹಗರಣ ಕೇಳಿ ಬಂದ ಬೆನ್ನಲ್ಲೇ ಈಗ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅಧ್ಯಕ್ಷರಾಗಿದ್ದಾಗ ಕೈಗೊಂಡಿದ್ದ ತೀರ್ಮಾನದ ವಿರುದ್ಧ 2022ರ ಫೆ.22ರಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಡಿ.ಬಿ.ನಟೇಶ್ ಬರೆದಿರುವ ಪತ್ರ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಇದೀಗ ಈ ವಿಚಾರ ಮತ್ತೆ ಸ್ಫೋಟಗೊಂಡು ದೊಡ್ಡ ಸದ್ದು ಮಾಡಿರುವುದು ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ.
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಎಚ್.ವಿ.ರಾಜೀವ್ 848ನಿವೇಶನಗಳನ್ನು ಒಂದೇ ದಿನದಲ್ಲಿ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಯುಕ್ತರ ಅನುಮೋದನೆ ಇಲ್ಲದಿದ್ದರೂ ನಿವೇಶನಗಳನ್ನು ಬಿಡುಗಡೆಗೊಳಿಸಿಕೊಂಡಿದ್ದಾರೆ ಇದು ಸರ್ಕಾರಕ್ಕೆ ಡಿ.ಬಿ.ನಟೇಶ್ ಬರೆದಿರುವ ಬರೆದಿರುವ ಪತ್ರದಲ್ಲಿ ಉಲ್ಲೇಖವಾಗಿದೆ. ಇದಲ್ಲದೆ, ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ 252.10 ಎಕರೆಯಲ್ಲಿ ಬಡಾವಣೆ ವಿನ್ಯಾಸ ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಕಡತಗಳನ್ನು ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಅಧ್ಯಕ್ಷರಿಗೆ 2022ರ ಫೆ.16ರಂದು ಬರೆದಿರುವ ಪತ್ರ ಈಗ ಬಹಿರಂಗವಾಗಿದೆ. ಈ ವಿಚಾರ ಹೊರ ಬರುತ್ತಿದ್ದಂತೆಯೇ ಆರೋಪ ಪ್ರತ್ಯಾರೋಪ ಶುರುವಾಗಿದೆ.
ಈ ನಡುವೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತ್ರ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಮ್ಮ ಅಧ್ಯಕ್ಷತೆಯಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 848ನಿವೇಶನಗಳನ್ನು ಪಡೆದಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮವರು ಹೇಳಿದ ಮೇಲೆ ಗೊತ್ತಾಗಿದೆ ಎಂದು ತಿಪ್ಪೆಸಾರಿಸಿದ್ದಾರೆ. ಮುಡಾ ಭ್ರಷ್ಟಾಚಾರದಲ್ಲಿ ರಾಜಕೀಯ ಪಕ್ಷಾತೀತವಾಗಿ ಎಲ್ಲರೂ ಪಾಲುದಾರರಾಗಿದ್ದಾರೆ. ಸಮಗ್ರ ತನಿಖೆ ನಡೆಸಿದ್ದೇ ಆದರೆ ಹಲವರ ಭ್ರಷ್ಟಾಚಾರ ಹೊರಬರುವ ಸಾಧ್ಯತೆಯಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?.












Click it and Unblock the Notifications