ಪೆನ್ ಡ್ರೈವ್‌ನಲ್ಲಿರುವ ರಹಸ್ಯ ಹೊರಗೆ ಬಂದರೆ ಮಂತ್ರಿಗಳು ರಾಜೀನಾಮೆ: ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಜುಲೈ 06: ವರ್ಗಾವಣೆ ಧಂದೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ಸಿಡಿದೆದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಪೆನ್ ಡ್ರೈವ್‌ನಲ್ಲಿರುವ ರಹಸ್ಯ ಹೊರಗೆ ಬಂದರೆ ಮಂತ್ರಿಗಳು ರಾಜೀನಾಮೆ ನೀಡುತ್ತಾರೆ ಎಂದು ಕುಮಾರಸ್ವಾಮಿ ಬಾಂಬ್ ಹಾಕಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೆನ್ ಡ್ರೈವ್ ದಾಖಲೆಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವೆ.ಈ ಸರ್ಕಾರದವರು ಏನು ಮಾತಾಡಬೇಕೋ, ಎಲ್ಲವನ್ನೂ ಮಾತನಾಡಲಿ. ನನಗೆ ಹಿಟ್ ಅಂಡ್ ರನ್ ಅಂತಾರೆ. ಏನಾದರೂ ಹೇಳಿಕೊಳ್ಳಲಿ ಅಂತಾರೆ. ಅವರು ಹೀಗೆ ಮಾತನಾಡುತ್ತಿರಲಿ ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪೆನ್ ಡ್ರೈವ್ ದಾಖಲೆ ಬಿಡುಗಡೆಗೆ ನನಗೆ ಆತುರ ಇಲ್ಲ. ವರ್ಗಾವಣೆ ದಂಧೆ ಸಿಎಂ ಮೂಗಿನ ನೇರದಲ್ಲಿ ನಡೆಯುತ್ತಿದೆ. ಅವರ ಮೂಲಕವೇ ವರ್ಗಾವಣೆ ಆದೇಶ ಆಗುತ್ತದೆ. ತಕ್ಷಣ ಅದು ಬದಲಾವಣೆ ಆಗುತ್ತದೆ. ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ. ಆದರೆ ಯಾವ ಅಳತೆಗೋಲು ಇಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ?, ಇಷ್ಟೊಂದು ಅನುಭವ ಇಟ್ಕೊಂಡು ನಿಮಗೆ ಗೊತ್ತಿಲ್ಲವಾ?, ಎಲ್ಲಾ ಪ್ರಮುಖ ಹುದ್ದೆಗಳೆಲ್ಲವೂ ದುಡ್ಡಿನಿಂದಲೇ ವರ್ಗಾವಣೆ ಆಗುತ್ತಿವೆ ಎಂದು ಕಿಡಿಕಾರಿದರು.
ನನ್ನ ಪೆನ್ ಡ್ರೈವ್ ಖಾಲಿ ಇಲ್ಲ, ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ. ನನ್ನ ಪೆನ್ ಡ್ರೈವ್ ಎಮ್ಟಿ ಅಲ್ಲ. ನನ್ನ ಪೆನ್ ಡ್ರೈವ್ ಹೈದ್ರಾಬಾದ್ ನಲ್ಲಿ ತಯಾರಿ ಮಾಡಿದಲ್ಲ. ಶೀಘ್ರದಲ್ಲೇ ನಾನು ಪೆನ್ ಡ್ರೈವ್ ಬಿಡುಗಡೆ ಮಾಡೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದ ಆಡಳಿತ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಆದರೆ ಯಾವುದೇ ದಾಖಲೆಗಳನ್ನ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿ ಹಲವು ವರ್ಷ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ. ಇದುವರೆಗೆ ದಾಖಲೆ ಕೊಟ್ಟು ಯಾವುದೇ ಆರೋಪಗಳಿಗೆ ತಾರ್ಕಿಕ ಅಂತ್ಯ ಕೊಟ್ಟಿಲ್ಲ. ಆದರೆ ನಾನು ವಿಪಕ್ಷದಲ್ಲಿದ್ದಾಗ ದಾಖಲೆ ಸಮೇತ ಆರೋಪ ಮಾಡುತ್ತಿದೆ ಎಂದರು.
ಸದನದಲ್ಲಿ ಸಚಿವ ಚೆಲುರಾಯಸ್ವಾಮಿ ವಿರುದ್ದ ವಿಚಾರ ಪ್ರಸ್ತಾಪಿಸುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಒಬ್ಬ ಮಂತ್ರಿ ಎಲ್ಲರನ್ನು ರಕ್ಷಿಸಬೇಕು. ಆದರೆ ವರ್ಗಾವಣೆ ದಂಧೆಯಿಂದ ಹಣ ವಸೂಲಿ ಮಾಡ್ತಿದ್ದಾರೆ. ಕೆ ಎಸ್ ಆರ್ ಟಿಸಿ ಸಿಬ್ಬಂದಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಸದ್ಯ ಐಸಿಯುನಲಿದ್ದಾನೆ. ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳು ರಸ್ತೆಗಳಿದು ಪ್ರೋಟೆಸ್ಟ್ ಮಾಡ್ತಿದ್ದಾರೆ. ಜನರಿಗೆ ಬಸ್ ಸಿಗುತ್ತಿಲ್ಲ,ಇದಕ್ಕೆ ಯಾರು ಕಾರಣ..? ಎಂದು ಸರ್ಕಾರವನ್ನ ಪ್ರಶ್ನಿಸಿದರು.












Click it and Unblock the Notifications