ದೇಶಕ್ಕಾಗಿ ನನ್ನಮ್ಮ ತ್ಯಾಗ ಮಾಡಿದ್ದಾರೆ, ಸಂಕಟಪಟ್ಟಿದ್ದಾರೆ: ರಾಹುಲ್
ಬೆಂಗಳೂರು, ಮೇ 10: ತಮ್ಮ ತಾಯಿ ಸೋನಿಯಾ ಗಾಂಧಿ ಇತರೆ ಅನೇಕ ಭಾರತೀಯರಿಗಿಂತ ಹೆಚ್ಚು ಹೆಚ್ಚು ಭಾರತೀಯಳು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ತಮ್ಮ ಇಟಲಿಯ ಮೂಲದ ಕುರಿತು ಎದುರಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, 'ನನ್ನ ತಾಯಿ ಇಟಾಲಿಯನ್ ನಿಜ. ಆದರೆ ಅವರು ತಮ್ಮ ಬದುಕಿನ ಹೆಚ್ಚಿನ ಭಾಗವನ್ನು ಭಾರತದಲ್ಲಿ ಕಳೆದಿದ್ದಾರೆ. ನಾನು ಭೇಟಿ ಮಾಡಿದ ಅನೇಕ ಭಾರತೀಯರಿಗಿಂತ ಅವರು ಹೆಚ್ಚು ಭಾರತೀಯರಾಗಿದ್ದಾರೆ. ನನ್ನ ತಾಯಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ನನ್ನ ತಾಯಿ ದೇಶಕ್ಕಾಗಿ ಸಂಕಟ ಅನುಭವಿಸಿದ್ದಾರೆ' ಎಂದು ರಾಹುಲ್ ಭಾವುಕರಾಗಿ ನುಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತಿಚೆಗೆ ತಮ್ಮ ಭಾಷಣದ ವೇಳೆ ರಾಹುಲ್ ಗಾಂಧಿ ಅವರನ್ನು ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು. ಚರ್ಚೆಯಲ್ಲಿ ಹಿಂದಿ, ಇಂಗ್ಲಿಷ್ ಅಥವಾ ತಮ್ಮ ತಾಯಿಯ ಮಾತೃಭಾಷೆಯಲ್ಲಿ ಮಾತನಾಡಬಹುದು ಎಂದು ಲೇವಡಿ ಮಾಡಿದ್ದರು.

'ಇಂತಹ ಹೇಳಿಕೆಗಳು ನಮ್ಮ ಪ್ರಧಾನಿ ಅವರ ಗುಣಮಟ್ಟವನ್ನು ಪ್ರತಿಬಿಂಬಿಸುತ್ತವೆ. ಅವರು ಇಂತಹವುಗಳಲ್ಲಿ ಖುಷಿಪಡುವುದಾದರೆ ಅವರು ಸಂತಸ ಪಡಲಿ ಎಂದು ಸುಮ್ಮನಿರಲು ಬಯಸುತ್ತೇನೆ' ಎಂದು ರಾಹುಲ್ ಹೇಳಿದರು.












Click it and Unblock the Notifications