ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು: ಒಕ್ಕಲಿಗ ಸ್ವಾಮೀಜಿ ವಿವಾದ
ಬೆಂಗಳೂರು, ನವೆಂಬರ್ 27: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಪ್ರತಿಧ್ವನಿಸುತ್ತಿದ್ದಂತೆ ಒಕ್ಕಲಿಗ ಸಮುದಾಯದ ಚಂದ್ರಶೇಖರ ಸ್ವಾಮೀಜಿ ಅವರು ಡಿ ಕೆ ಶಿವಕುಮಾರ್ ಅವರು ಸಿಎಂ ಆಗ್ಬೇಕು ಎಂದು ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಎದುರೇ ಸಿಎಂ ಪಟ್ಟ ಬಿಟ್ಟುಕೊಟ್ಟು ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಎಂದು ಚಂದ್ರಶೇಖರ ಸ್ವಾಮೀಜಿ, ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು, ಇದೀಗ ವಕ್ಫ್ ವಿರುದ್ಧ ರಾಜ್ಯ ಕಿಸಾನ್ ಸಂಘಟನೆ ಕೂಡಾ ಪ್ರತಿಭಟನೆ ನಡೆಸಿದ್ದು, ಈ ವೇಳೆ ಚಂದ್ರಶೇಖರ ಸ್ವಾಮೀಜಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಿಸಾನ್ ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ಚಂದ್ರಶೇಖರ ಸ್ವಾಮೀಜಿಯೂ ಪಾಲ್ಗೊಂಡಿದ್ದರು. ಈ ವೇಳೆ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಮಾತನಾಡಿ, ಮುಸ್ಲಿಮ್ ಜನಾಂಗಕ್ಕೆ ಮತದಾನದ ಹಕ್ಕು ಇಲ್ಲದಂತೆ ಕಾನೂನು ಮಾಡಬೇಕು ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ರೀತಿಯಲ್ಲಿ ಭಾರತದಲ್ಲೂ ಕಾನೂನು ಜಾರಿಯಾಗಬೇಕು. ಭಾರತದಲ್ಲಿ ಮುಸ್ಲಿಮರಿಗೆ ಮತ ಚಲಾಯಿಸುವ ಹಕ್ಕನ್ನ ರದ್ದು ಮಾಡಬೇಕು ಹಾಗೂ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಅವರು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.
ವಕ್ಪ್ ಮಂಡಳಿ ಕಾನೂನು ಇಲ್ಲದೆ ಆಸ್ತಿ ಕಿತ್ತುಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದರ ಬಗ್ಗೆ ಎಲ್ಲರೂ ಹೋರಾಟ ಮಾಡಬೇಕಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನ ಎತ್ತಿ ಹಿಡಿಯಬೇಕಿದೆ, ರೈತರು ಇದ್ರೆ ಜನ ಇರ್ತಾರೆ, ರೈತರು ಇಲ್ಲ ಅಂದ್ರೆ ಜನ ಇರೋದಿಲ್ಲ. ಅನಾವಶ್ಯಕವಾಗಿ ವಕ್ಪ್ ಇನ್ನೊಬ್ನರ ಆಸ್ತಿಯನ್ನ ಕಿತ್ತುಕೊಳ್ಳೋದು ಸರಿಯಲ್ಲ. ಹೀಗಾದ್ರೆ ವಕ್ಫ್ ಮಂಡಳಿಯನ್ನೇ ರದ್ದು ಮಾಡಬೇಕು ಎಂದು ಚಂದ್ರಶೇಖರ ಸ್ವಾಮೀಜಿ ಅವರು ಹೇಳಿದ್ದಾರೆ.
ವಕ್ಫ್ ವಿವಾದದ ಕುರಿತು ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಹೋರಾಟವನ್ನ ನಡೆಸಿದ್ದು, ಕರ್ನಾಟಕದಲ್ಲಿ ವಕ್ಫ್ ವಿವಾದ ಗಲಾಟೆ ಇನ್ನೂ ಮುಗಿದಿಲ್ಲ. ಇನ್ನು ಈ ವಕ್ಫ್ ನೋಟಿಸ್ ಸರ್ಕಾರಿ ಆಸ್ತಿ, ದೇವಾಲಯ, ಕಚೇರಿ, ರೈತರ ಆಸ್ತಿ ಹೀಗೆ ಎಲ್ಲದರ ಮೇಲೂ ಹೋಗಿದೆ. ಇದರಿಂದ ರೊಚ್ಚಿಗೆದ್ದ ಜನ ಇದೀಗ ರಾಜ್ಯದ ಮೂಲೆ ಮೂಲೆಗಳಲ್ಲಿ ವಕ್ಫ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ವೇಳೆ ಮುಸ್ಲಿಂರ ಕುರಿತು ಚಂದ್ರಶೇಖರ್ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.
ಒಕ್ಕಲಿಗ ಮಠದ ಚಂದ್ರಶೇಖರ್ ಸ್ವಾಮೀಜಿ ಅವರು ಈ ರೀತಿಯಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆತೇ ಸಿಎಂ ಪಟ್ಟವನ್ನ ಡಿ ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ನೀಡಿದ್ದು, ಸಹ ರಾಜ್ಯ ರಾಜಕೀಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡ್ಲಿ ಎಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಆ ಸಂದರ್ಭದಲ್ಲಿ ಕೋಲಾರದ ಕುರುಬ ಸಮುದಾಯದ ಮುಖಂಡರು ಕಿಡಿಕಾರಿದ್ದರು.












Click it and Unblock the Notifications