ದೋಮನಾಳದ ಹನುಮಪ್ಪನಿಗೆ ಮಹಬೂಬ್ ಸಾಬ್ ನದಾಫ್ ರೇ ಪೂಜಾರಿ
ವಿಜಯಪುರ, ಜೂನ್ 9: ಕಳೆದ ವಾರ ಧಾರವಾಡದ ನುಗ್ಗಿಕೇರಿ ಹನುಮಪ್ಪನ ಭಕ್ತ ಸೈಯದ್ ಶೇಖ್ ಬಗ್ಗೆ ನೀವು ಓದಿದ್ದರೆ ಅಂಥದ್ದೇ ಸುದ್ದಿ ವಿಜಯಪುರದಿಂದಲೂ ಬಂದಿದೆ. ಅಲ್ಲಿ ದೋಮನಾಳ ಗ್ರಾಮದಲ್ಲಿ ಮಹಬೂಬ್ ಸಾಬ್ ನದಾಫ್ ನಲವತ್ತು ವರ್ಷಗಳಿಂದ ಹನುಮಂತ ದೇಗುಲದ ಅರ್ಚಕರಾಗಿದ್ದಾರೆ.
ಈ ದೇವಾಲಯಕ್ಕೆ ಬರುವ ಭಕ್ತರಿಗೆ ತೀರ್ಥ-ಪ್ರಸಾದ ಕೊಡುತ್ತಾರೆ. ಅಷ್ಟೇ ಅಲ್ಲ, ದೇವಾಲಯ ಸಮಿತಿಗೆ ಅಧ್ಯಕ್ಷರೂ ಅವರೇ ಆದ್ದರಿಂದ ಅಲ್ಲಿನ ಎಲ್ಲ ಕೈಂಕರ್ಯಗಳಲ್ಲೂ ಮುಂದಾಳತ್ವವನ್ನೂ ವಹಿಸುತ್ತಾರೆ. ಈ ಬಗ್ಗೆ ಸ್ವತಃ ನದಾಫ್ ರಿಗಾಗಲೀ ಸ್ಥಳೀಯರಿಗಾಗಲೀ ಯಾವುದೇ ಅಚ್ಚರಿ ವಿದ್ಯಮಾನ ಇದು ಎಂದೆನಿಸಿಲ್ಲ.
ಇಸ್ಲಾಂನಲ್ಲಿ ಏನು ಹೇಳುತ್ತದೋ ಅದನ್ನೆಲ್ಲ ಪಾಲಿಸುತ್ತಲೇ ಈ ಕೆಲಸವನ್ನೂ ಮಾಡುತ್ತಿದ್ದೇನೆ ಎನ್ನುವ ನದಾಫ್, ಧರ್ಮ-ಭಕ್ತಿಗೂ, ತಾನು ಮಾಡುತ್ತಿರುವ ಸೇವೆಗೂ ಸಂಬಂಧವಿಲ್ಲ ಅನ್ನುತ್ತಾರೆ. ಅಷ್ಟೇ ಅಲ್ಲ, ಎಲ್ಲ ಧರ್ಮದ ಮೂಲ ಒಂದೇ ಎಂದು ಹೇಳುವ ಮೂಲಕ ನಿರ್ಲಿಪ್ತರಾಗುತ್ತಾರೆ.[ವಾರಾಂತ್ಯ ಲೇಖನ: ನುಗ್ಗಿಕೇರಿ ಹನುಮಪ್ಪನ ಭಕ್ತ ಸೈಯದ್ ಶೇಖ್]

ಅಂದಹಾಗೆ ನದಾಫ್ ಅವರ ಮೂಲ ಇಂಡಿ ತಾಲೂಕಿನ ಇಂಗಳಗಿ. ನಲವತ್ತು ವರ್ಷದ ಹಿಂದೆ ದೋಮನಾಳ್ ಗ್ರಾಮಕ್ಕೆ ವಲಸೆ ಬಂದಿದ್ದಾರೆ. ಆಗಿನಿಂದ ಹನುಮಪ್ಪನ ಪೂಜೆ ಮಾಡುತ್ತಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿ ಅಂದರೆ ನದಾಫ್ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಅವಿರೋಧವಾಗಿ ಆಯ್ಕೆ ಆಗುತ್ತಿದ್ದಾರೆ. ನದಾಫ್ ರಿಗೆ ರಂಜಾನ್ ನ ರೋಜಾ ಉಪವಾಸದಲ್ಲೂ ಅದಮ್ಯವಾದ ಶ್ರದ್ಧೆ ಇದೆ.












Click it and Unblock the Notifications