Murdeshwar: ಮುರುಡೇಶ್ವರಕ್ಕೆ ಹೋಗುವವರಿಗೆ ಬಂತು ಹೊಸ ರೂಲ್ಸ್, ಏನದು?
ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಮುದ್ರ ತೀರದಲ್ಲಿರುವ ಮುರುಡೇಶ್ವರ ದೇವಸ್ಥಾನವು ಪುರಾಣ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳ. ಪ್ರತಿದಿನವೂ ಇಲ್ಲಿಗೆ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಮುರುಡೇಶ್ವರನ (ಈಶ್ವರ) ದರ್ಶನ ಮುಗಿಸಿ, ಪಕ್ಕದಲ್ಲೇ ಇರುವ ಬೀಚ್‌ನಲ್ಲಿ ಕಾಲ ಕಳೆದು, ಮೋಜು ಮಸ್ತಿ ಮಾಡುತ್ತಾರೆ. ಆದರೆ ಈಗ ಮುರುಡೇಶ್ವರದಲ್ಲಿ ಹೊಸ ರೂಲ್ಸ್ ಜಾರಿಯಾಗಿದೆ. ಈ ನಿಯಮ ಪಾಲಿಸಿದರೆ ಮಾತ್ರವೇ ಸಾರ್ವಜನಿಕರು ಈ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ. ಆ ಹೊಸ ರೂಲ್ಸ್ ಏನು ಎಂಬ ವಿವರ ಇಲ್ಲಿದೆ.
ಮುರುಡೇಶ್ವರ ಎಂದ ಕೂಡಲೇ ಶಿವಭಕ್ತರಿಗೆ ಪವಿತ್ರವಾದ ಸ್ಥಳ. ಪ್ರವಾಸಿಗರಿಗೆ ಇದು ನೆಚ್ಚಿನ ಜಾಗ. ಇಲ್ಲಿನ ಬೀಚ್‌ನಲ್ಲಿ ಮುಳುಗೆದ್ದು ಜಾಲಿಯಾಗಿ ತಮ್ಮ ಪ್ರವಾಸ ಕೈಗೊಳ್ಳುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಪ್ರವಾಸಕ್ಕೆ ಜನ ಆಗಮಿಸುತ್ತಾರೆ. ಈ ಹಿನ್ನೆಲೆ ಮುರುಡೇಶ್ವರದಲ್ಲಿ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಮುರುಡೇಶ್ವರ ದೇವಾಲಯದಲ್ಲಿ ಅಧಿಕೃತವಾಗಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು, ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವುದು ಕಡ್ಡಾಯ ಎಂದು ಹೇಳಿದೆ.

ಯಾವ ವಸ್ತ್ರ ಧರಿಸಬೇಕು?
ಈ ಹೊಸ ವಸ್ತ್ರ ಸಂಹಿತೆ ಪ್ರಕಾರ ಪುರುಷರು ಶರ್ಟ್, ಧೋತಿ, ಪ್ಯಾಂಟ್ ಮತ್ತು ಕುರ್ತಾ ಪೈಜಾಮ ಧರಿಸಿ ದೇವಸ್ಥಾನ ಪ್ರವೇಶಿಸಬಹುದು. ಇನ್ನು ಮಹಿಳೆಯರು ಸೀರೆ, ಸಲ್ವಾರ್, ಚೂಡಿದಾರ್ ಸೇರಿದಂತೆ ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ದೇವರ ದರ್ಶನ ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈ ದೇವಾಲಯದೊಳಗೆ ಇನ್ನು ಮುಂದೆ ಫ್ಯಾಷನ್ ಲೋಕದ ವಸ್ತ್ರಗಳು, ಪಾಶ್ಚಿಮಾತ್ಯ ಶೈಲಿ ಹಾಗೂ ಕ್ಯಾಶುಯಲ್ ಬಟ್ಟೆ ಧರಿಸಿದವರಿಗೆ ದೇವಸ್ಥಾನದ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ದೇವಾಲಯದ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಹಲವು ದಿನಗಳಿಂದ ಸ್ಥಳೀಯ ಭಕ್ತಾದಿಗಳು, ಹಿಂದೂ ಪರ ಸಂಘಟನೆಗಳು ಸೇರಿ ಹಲವರು ಮನವಿ ಮಾಡಿದ್ದರು. ಅದರಂತೆ ದೇವಸ್ಥಾನದ ಆಡಳಿತ ಮಂಡಳಿಯು ಈ ಮನವಿಗಳನ್ನು ಪುರಸ್ಕರಿಸಿ ಕಡ್ಡಾಯ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಮುರುಡೇಶ್ವರ ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಅಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕೆಲವರು ಅನುಚಿತವಾಗಿ ವರ್ತಿಸುವುದು, ಮನಬಂದಂತೆ ವಸ್ತ್ರ ಧರಿಸಿ ದೇವಸ್ಥಾನ ಪ್ರವೇಶಿಸುತ್ತಿದ್ದರು. ಇದರಿಂದ ಉಳಿದ ಭಕ್ತಾದಿಗಳಿಗೂ ಕಸಿವಿಸಿಯಾಗುತ್ತಿದ್ದ ಕಾರಣ ಹಲವು ವಸ್ತ್ರ ಸಂಹಿತೆ ಜಾರಿ ಮಾಡಲು ಒತ್ತಾಯಿಸಿದ್ದರು. ದೇವಸ್ಥಾನದ ಬಳಿ ಧಾರ್ಮಿಕ ವಾತಾವರಣ ನಿರ್ಮಿಸಲು ಈ ನಿಯಮ ರೂಪಿಸಲಾಗಿದ್ದು, ಈ ವಸ್ತ್ರಸಂಹಿತೆ ಕುರಿತು ಭಕ್ತರಿಗೆ ತಿಳಿಸಲು ದೇವಸ್ಥಾನದ ಪ್ರವೇಶ ದ್ವಾರದಲ್ಲೇ ಸೂಚನಾ ಫಲಕವನ್ನು ಸಹ ಅಳವಡಿಸಲಾಗಿದೆ. ಹಾಗಾಗಿ ಇನ್ನು ಮುಂದೆ ಮುರುಡೇಶ್ವರದಲ್ಲಿ ಧರ್ಮಸ್ಥಳ, ಕುಕ್ಕೆ ಕ್ಷೇತ್ರದಂತೆ ವಸ್ತ್ರಸಂಹಿತೆ ಇರಲಿದೆ.












Click it and Unblock the Notifications