ಮುರುಘಾ ಶ್ರೀ ಕೇಸ್: ಮಾಜಿ ಶಾಸಕ ಬಸವರಾಜನ್‌ಗೆ ಜಾಮೀನು
ಬೆಂಗಳೂರು, ಡಿಸೆಂಬರ್ 22; ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೊಳಗಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್. ಕೆ. ಬಸವರಾಜನ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಹಾಗಾಗಿ ಬಸವರಾಜನ್ ಮುರುಘಾ ಸ್ವಾಮೀಜಿಗಿಂತ ಮುಂಚಿತವಾಗಿಯೇ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಎಸ್. ಕೆ. ಬಸವರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ರಾಜಕೀಯ ದುರುದ್ದೇಶ: ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲರು, ಕೇವಲ ರಾಜಕೀಯ ದುರುದ್ದೇಶದಿಂದ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಸವರಾಜನ್ ಮನೆಯಲ್ಲಿ ಮಲಗಿದ್ದಾಗ ಪೊಲೀಸರು ಕರೆದೊಯ್ದು ಎಫ್‌ಐಆರ್ ದಾಖಲಿಸಿದ್ದಾರೆ ಎಂದರು.

ಅಲ್ಲದೆ, ಆರೋಪಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಕಾರಣ ಅರ್ಜಿದಾರರ ವಿರುದ್ಧ ಮಠದ ಹಾಲಿ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಪ್ರತಿದೂರು ದಾಖಲಿಸಿದ್ದಾರೆ. ಅಪರಾಧವೇ ನಡೆದಿಲ್ಲದಿರುವಾಗ ಅರ್ಜಿದಾರರನ್ನು ನ್ಯಾಯಾಂಗ ಬಂಧನದಲ್ಲಿಡುವುದು ಕಾನೂನು ಬಾಹಿರ. ಆದ್ದರಿಂದ, ಜಾಮೀನು ನೀಡಬೇಕು ಎಂದು ಕೋರಿದರು.
ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 120-ಬಿ (ಅಪರಾಧಿಕ ಪಿತೂರಿ), 384 (ಸುಲಿಗೆ), 420 (ವಂಚನೆ) ಮತ್ತು 366-ಎ (ಅಪ್ರಾಪ್ತ ಬಾಲಕಿಯನ್ನು ದುರುದ್ದೇಶ ಸಾಧನೆಗೆ ಬಳಸಿಕೊಂಡ ಆರೋಪ) ಅಡಿಯಲ್ಲಿ ಆರೋಪ ಹೊರಡಿಸಲಾಗಿದೆ.
ಇದೇ ಆರೋಪ ಸಂಬಂಧ ಈ ಹಿಂದೆ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ತದನಂತರ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಒಂದೇ ಪ್ರಕರಣ ಸಂಬಂಧ ಎರಡೆರಡು ಎಫ್‌ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು.
ಸರ್ಕಾರಿ ಅಭಿಯೋಜಕರು, ಅರ್ಜಿದಾರರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಪ್ರಕರಣದ ತನಿಖಾ ಹಂತದಲ್ಲಿದೆ. ಈ ಪರಿಸ್ಥಿತಿಯಲ್ಲಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ ಏನು?; ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಸಂಬಂಧ ಮಠದ ಪ್ರಿಯದರ್ಶಿನಿ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿರುವ ಬಸವರಾಜೇಂದ್ರ ಮತ್ತು ಮಠದ ದಾಸೋಹದ ಸಿಬ್ಬಂದಿ ಮಹಿಳೆಯೊಬ್ಬರ ನಡುವೆ ನಡೆದಿದೆಎನ್ನಲಾದ ಫೋನ್ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣ ಸಂಬಂಧ ಮಠದ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿ, ಅರ್ಜಿದಾರರನ್ನು ಬಂಧಿಸಲಾಗಿತ್ತು.












Click it and Unblock the Notifications