ಕಾರವಾರದಲ್ಲಿ ಹೂತುಹೋದ ಟೆಕ್ಕಿಯ ಕೊಲೆ ರಹಸ್ಯ!
ಕಾರವಾರ, ಜುಲೈ 08 : ಮಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿಯರ್ ಆಗಿ ಕೆಲಸ ಮಾಡುತ್ತಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೋತೂರು ಗ್ರಾಮದ ವಿ.ಯು.ನಿಶಾಂತ್ (23) ಕಾರವಾರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮಂಗಳೂರಿನ ಪ್ರಸನ್ನ ಟೆಕ್ನಾಲಜಿ ಎಂಬ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿಶಾಂತ್ ಭೀಕರವಾಗಿ ಕೊಲೆಯಾಗಿರುವ ದುರ್ದೈವಿ. ತಿಂಗಳ ಹಿಂದೆ ಮಣ್ಣು ಮಾಡಲಾಗಿದ್ದ ನಿಶಾಂತ್ ಶವವನ್ನು ಶನಿವಾರ ಹೊರತೆಗೆದು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ.

ಘಟನೆಯ ವಿವರ : ಬೆಂಗಳೂರಿನ ಮಾನಸ ಟೆಕ್ ಪಾರ್ಕ್ ಎಂಬ ಕಂಪನಿಯ ಸಂದರ್ಶನಕ್ಕೆ ಜೂನ್ 7ರಂದು ಹಾಜರಾಗಿದ್ದ. ಅದನ್ನು ಮುಗಿಸಿ 8ರಂದು ಸಂಜೆ 4.30ಕ್ಕೆ ಖುಷಿಯಿಂದಲೇ ಮನೆಗೆ ಕರೆ ಮಾಡಿ, 'ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಸಿಕ್ಕಿದೆ. ಬೆಂಗಳೂರು- ಕಾರವಾರ ರೈಲಿನಲ್ಲಿ ಮಂಗಳೂರಿಗೆ ಮರಳುತ್ತಿದ್ದೇನೆ' ಎಂದು ತಿಳಿಸಿದ್ದ.
ಸಂಜೆ 7.30ಕ್ಕೆ ತನ್ನ ಸ್ನೇಹಿತನಿಗೆ ಕರೆ ಮಾಡಿದ ಬಳಿಕ ರಾತ್ರಿ 12 ಗಂಟೆಗೆ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಈ ಬಗ್ಗೆ ಅನುಮಾನಗೊಂಡ ಪಾಲಕರು ಮಂಗಳೂರಿನ ಕದ್ರಿ ಠಾಣೆಗೆ ದೂರು ನೀಡಿ, ಮೊಬೈಲ್ ನೆಟ್ವರ್ಕ್ ಅನ್ನು ಆಧರಿಸಿ ಪತ್ತೆಹಚ್ಚಿದಾಗ ಅದು ಕೊನೆಯದಾಗಿ ಕೆ.ಆರ್ ಪೇಟೆಯ ಟವರ್‌ವರೆಗೆ ಮಾತ್ರ ಲೊಕೇಶನ್ ತೋರಿಸಿದೆ.
ಆದರೆ ಜೂನ್ 26ರಂದು ಕಾರವಾರದ ಕಡವಾಡ ಹಳಕೋಟದ ಪಾಳುಬಿದ್ದ ಮನೆಯಲ್ಲಿ ಒಂದು ಶವ ದೊರೆತಿತ್ತು. ಅದು ಯಾರೋ ಹೊಡೆದು ಬಿಸಾಡಿದ್ದಾರೇನೋ ಎಂಬಂತೆ ರಕ್ತಸಿಕ್ತ ಶವವಾಗಿತ್ತು. ಶವದ ಮರಣೋತ್ತರ ಪರೀಕ್ಷೆ ನಡೆಸಿದ್ದ ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ವಾರಸುದಾರರ ಪತ್ತೆಯಲ್ಲಿ ತೊಡಗಿದ್ದರು. ಎಲ್ಲ ಠಾಣೆಗಳಿಗೆ ಶವದ ಫೋಟೋವನ್ನು ಕಳುಹಿಸಿದ್ದರು.

ಯಾರೂ ಕೂಡ ಪತ್ತೆ ಮಾಡದ ಹಿನ್ನೆಲೆಯಲ್ಲಿ ಇಲ್ಲಿನ ರುದ್ರಭೂಮಿಯಲ್ಲಿ ಮಣ್ಣುಮಾಡಲಾಗಿತ್ತು. ಆದರೆ ಅದು ಇಂಟರ್‌ವ್ಯೂವ್‌ಗೆ ಬೆಂಗಳೂರಿಗೆ ತೆರಳಿದ್ದ ನಿಶಾಂತ್‌ನ ಶವ ಎಂದು ಕಾರವಾರಕ್ಕೆ ಆಗಮಿಸಿದ್ದ ಆತನ ಸಂಬಂಧಿಗಳು ಪತ್ತೆ ಮಾಡಿದ್ದಾರೆ. ವೈದ್ಯರ ಸಮ್ಮುಖದಲ್ಲಿಯೇ ಪೊಲೀಸರು ಮಣ್ಣುಮಾಡಿದ್ದ ಶವವನ್ನು ಹೊರತೆಗೆದು ಶನಿವಾರ ಸಂಬಂಧಿಕರಿಗೆ ಹಸ್ತಾಂತರಿಸಿದರು.
ನಿಶಾಂತ್ ಬಳಿ ಲ್ಯಾಪ್ ಟಾಪ್, 20,000 ರು. ಮೌಲ್ಯದ ಮೊಬೈಲ್, 15,000 ರು. ನಗದು ಇತ್ತು. ಹೀಗಾಗಿ ದುಷ್ಕರ್ಮಿಗಳು ಹಣದಾಸೆಗೆ ಕೊಲೆ ಮಾಡಿದ್ದಾರೆ. ಆತ ಬಳಸುತ್ತಿದ್ದ ಮತ್ತೊಂದು ಸಿಮ್‌ಗೆ ಕೊನೆಯದಾಗಿ ಕೆಲ ಅನುಮಾನಾಸ್ಪದ ಕರೆಗಳು ಬಂದಿದೆ. ಅಲ್ಲದೇ ಅವನ ಮೈ ಮೇಲೆ ಗಾಯದ ಗುರುತುಗಳಾಗಿದೆ. ಮಂಗಳೂರಿಗೆ ತೆರಳುವವನು ಕಾರವಾರಕ್ಕೆ ಬರುವ ಅವಶ್ಯಕತೆ ಇರಲಿಲ್ಲ. ಯಾರೋ ಇಲ್ಲಿನ ಪಾಳು ಬಿದ್ದ ಮನೆಗೆ ತಂದು ಥಳಿಸಿ ಕೊಲೆ ಮಾಡಿದ್ದಾರೆ ಅಂತ ನಿಶಾಂತ್‌ನ ತಂದೆ ಉಮೇಶ್ ಆರೋಪಿಸಿದ್ದಾರೆ.
ಒಟ್ಟಾರೆ, ಮುದ್ದು ಮಾಡಿ, ಓದು ಕಲಿಸಿದ್ದ ತಂದೆಗೆ ಮಗನ ತುಂಡು ತುಂಡು ದೇಹ ಕಂಡು ದುಃಖ ಮಡುಗಟ್ಟಿತ್ತು. ಹಾಗೋ ಹೀಗೋ ಸಂಪಾದನೆ ಮಾಡಿ ಸಾಫ್ಟ್‌ವೇರ್ ಎಂಜಿನಿಯರ್ ಮಾಡಿಸಿದ್ದ ಮಗ ಈಗ ಶವವಾಗಿ ಕೊಡಗಿನ ಮನೆಗೆ ಮರಳಿದ್ದಾನೆ. 'ದೇವ್ರೆ ಯಾಕ್ ಹಿಂಗೆ ಮಾಡ್ದೆ' ಅಂತ ಹೇಳೋ ಆ ತಂದೆಯ ಮಾತು ಕೇಳಿ ಕರುಳು ಚುರುಕ್ ಅನ್ನುತ್ತಿತ್ತು.












Click it and Unblock the Notifications