ಕುಮಾರಸ್ವಾಮಿ ನೇತೃತ್ವದಲ್ಲೇ ಜೆಡಿಎಸ್- ಬಿಜೆಪಿ ಪಾದಯಾತ್ರೆ ನಡೆಯಲಿದೆ- ಬಿ.ವೈ ವಿಜಯೇಂದ್ರ
ಬೆಂಗಳೂರು, ಆಗಸ್ಟ್ 01: ಮುಡಾ ಪಾದಯಾತ್ರೆಗೆ ಸಂಬಂಧಿಸದಂತೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪೂರ್ಣ ವಿರಾಮ ಹಾಕಿದ್ದು, ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲೇ ಪಾದಯಾತ್ರೆ ನಡೆಯಲಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ರಾಷ್ಟ್ರೀಯ ನಾಯಕ ರಾಧಾ ಮೋಹನ್ ದಾಸ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ ವಿಜಯೇಂದ್ರ, ವಾಲ್ಮೀಕಿ ನಿಗಮದ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ಮೂಡದಲ್ಲಿ 14 ನಿವೇಶನಗಳ ಜೊತೆ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬೇಕಾದವರಿಗೆ ನೀಡಲಾಗಿದೆ.

ಬಡವರಿಗೆ ಸಿಗಬೇಕಾದ ನಿವೇಶನಗಳು ಸಿಕ್ಕಿಲ್ಲ. ಹಾಗಾಗಿ, ಎರಡು ಪಕ್ಷಗಳು ಒಟ್ಟಿಗೆ ಸದನದಲ್ಲಿ ಹೋರಾಟ ಮಾಡಿದ್ದೇವು. ಈಗ ಪಾದಯಾತ್ರೆ ಮೂಲಕ ಮತ್ತೊಂದು ಹೋರಾಟ ಮಾಡುತ್ತೇವೆ. ಪಾದಯಾತ್ರೆ ಕಾರ್ಯಕ್ರಮ ಉದ್ಘಾಟನೆಯನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡುತ್ತಾರೆ. ಯಡಿಯೂರಪ್ಪ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದರು.
ಮಾತು ಮುಂದುವರಿಸಿದ ಅವರು, ಮುಖ್ಯವಾದ ವಿಚಾರವೆಂದರೆ ನಾಲ್ಕು ಕೋಟಿಕೂ ಅಧಿಕ ಬೆಲೆ ಬಾಳುವ ನಿವೇಶನಗಳನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೇಕಾದವರಿಗೆ ನೀಡಿದ್ದು, ಮೂಡಗೆ ನಾಲ್ಕು ಕೋಟಿಕೂ ಅಧಿಕ ನಷ್ಟವಾಗಿದೆ. ಈ ವಿಚಾರಗಳನ್ನು ತೆಗೆದುಕೊಂಡು ನಾವು ಭಾರತೀಯ ಜನತಾ ಪಾರ್ಟಿ ಹಾಗೂ ಜನತಾದಳ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಬಿಜೆಪಿ ಮತ್ತು ಜೆಡಿಎಸ್ ನಡುವಿದ ಅಸಮಾಧಾನದ ಬಗ್ಗೆ ಮಾತನಾಡಿದ ಬಿ.ವೈ ವಿಜಯೇಂದ್ರ, ನಮ್ಮ ನಡುವೆ ಏನೇ ಸಣ್ಣ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಹಾಗೂ ನಾವು ಕುಳಿತು ಚರ್ಚೆ ಮಾಡಿ ಇತ್ಯರ್ಥ ಮಾಡಿಕೊಂಡಿದ್ದೇವೆ. ಎಲ್ಲವೂ ಕೂಡ ಇತ್ಯರ್ಥವಾಗಿದೆ. ಶನಿವಾರ ಬೆಳಗ್ಗೆ ಪಾದಯಾತ್ರೆ ನಡೆಯಲಿದ್ದು, ಎರಡೂ ಪಕ್ಷಗಳ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದರು.












Click it and Unblock the Notifications