ಸಿದ್ದರಾಮಯ್ಯ ರಾಜೀನಾಮೆ ಕುರಿತು ಹೈಕಮಾಂಡ್ ನಿರ್ಧಾರವೇನು? ಪರಮೇಶ್ವರ್ ಕೊಟ್ಟ ಉತ್ತರ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್ 25: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಸಿದ್ದರಾಮಯ್ಯ ರಾಜೀನಾಮೆ ಕುರಿತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಕುರಿತು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ, ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದುವರಿಯುತ್ತೇವೆ. ಬಿಜೆಪಿಯವರ ಉದ್ದೇಶವೇ ಮುಖ್ಯಮಂತ್ರಿಯವರ ರಾಜೀನಾಮೆ ತೆಗೆದುಕೊಳ್ಳಬೇಕು ಎಂಬುದು. ಅವರು ಹೋರಾಟ ಮಾಡುವುದರಲ್ಲಿ ಆಶ್ಚರ್ಯ ಪಡುವುದು ಏನು ಇಲ್ಲ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡಬೇಡಿ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದ್ದೇವೆ. ಅವರು ರಾಜೀನಾಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯವರ ಮೇಲೆ ಪಕ್ಷದೊಳಗೆ ಯಾವುದೇ ರೀತಿಯ ಒತ್ತಡವಿಲ್ಲ. ಬಿಜೆಪಿಯವರು ಪದೇಪದೆ ರಾಜೀನಾಮೆ ಕೊಡಬೇಕು ಅಂತ ಹೇಳುತ್ತಿರುವುದರಿಂದ, ರಾಜೀನಾಮೆನೀಡುವುದಿಲ್ಲ ಎಂದು ಮುಖ್ಯಮಂತ್ರಿಯವರು ಪುನರುಚ್ಚರಿಸಿದ್ದಾರೆ. ಪಕ್ಷದೊಳಗೆ ಒತ್ತಡವಿರುವ ರೀತಿಯ ವ್ಯತ್ಯಾಸಗಳಾಗಲಿ, ಭಾವನೆಗಳಾಗಲಿ ಇಲ್ಲ. ಹೈಕಮಾಂಡ್ ನಿಮ್ಮ ಜೊತೆಗಿದೆ ಎಂದು ಕೆ.ಸಿ.ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೈಕೋರ್ಟ್‌ನಿಂದ ರಾಜ್ಯಪಾಲರಿಗೆ ಬಲ ಬಂದಿರಬಹುದು. ಅದನ್ನು ಎಲ್ಲರಿಗೂ ಅನ್ವಯಿಸಬೇಕು. ಹೆಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನಾ ರೆಡ್ಡಿ ಅವರಿಗು ಅನ್ವಯಿಸಬೇಕಲ್ಲವೇ? ಬಲ ಬಂದಿದೆ ಅಂತ ಹೇಳಿ ಒಬ್ಬರಿಗೆ, ಒಂದು ವರ್ಗಕ್ಕೆ ಸೀಮಿತ ಮಾಡುವುದು ಸರಿ ಕಾಣಿಸುವುದಿಲ್ಲ. ಅದು ನ್ಯಾಯ ಅಂತಲೂ ಅನ್ನಿಸುವುದಿಲ್ಲ ಎಂದು ಹೇಳಿದರು.
ರಾಜ್ಯಪಾಲರು ಕಡತಗಳನ್ನು ಲೋಕಾಯುಕ್ತಕ್ಕೆ ವಾಪಸ್ ಕಳಿಸಿರಬಹುದು. ಲೋಕಾಯುಕ್ತದವರು ಸ್ಪಷ್ಟನೆ ನೀಡಿ, ಆ ಕಡತಗಳನ್ನು ರಾಜ್ಯಪಾಲರಿಗೆ ವಾಪಸ್ ಕಳುಹಿಸಿದ್ದಾರೆ. ರಾಜ್ಯಪಾಲರು ತಮ್ಮ ಬಲವನ್ನು ಈ ಪ್ರಕರಣಗಳಿಗೂ ಉಪಯೋಗಿಸಬೇಕು ಎಂದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನು ಇಲ್ಲ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಯವರು ಯಾವುದೇ ಕಡತಕ್ಕೆ ರುಜು ಹಾಕಿಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೇವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ. ಆದರೆ, ಎಲ್ಲೋ ಒಂದುಕಡೆ ನಮಗೆ ನ್ಯಾಯ ಸಿಗಲಿಲ್ಲವೇನು ಅನ್ನಿಸುತ್ತಿದೆ. ಮುಂದಿನ ನ್ಯಾಯಾಂಗ ಹೋರಾಟದ ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.
ಮುಖ್ಯಮಂತ್ರಿಯವರು ರಾಜೀನಾಮೆ ಕೊಡಬೇಕು. ಅಧಿಕಾರ ಬಿಟ್ಟು ಇಳಿಯಬೇಕು ಎನ್ನುವ ಮಾತುಗಳು ವಿಪಕ್ಷದವರಿಂದ ಕೇಳಿಬರುತ್ತಿದೆ. ಇದ್ಯಾವುದು ಕೂಡ ಆಗುವುದಿಲ್ಲ. ಮುಖ್ಯಮಂತ್ರಿಯವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಅನೇಕರು ಸ್ಪಷ್ಟಪಡಿಸಿದ್ದಾರೆ. ನಾನು ಸಹ ಇದೇ ಮಾತನ್ನು ಸ್ಪಷ್ಟಪಡಿಸುತ್ತೇನೆ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ರಾಜೀನಾಮೆ ನೀಡುವ ಪ್ರಮೇಯ ಬರುವುದಿಲ್ಲ ಎಂದು ಪುನರುಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಬಂದಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಿದ್ದಾರೆ. ಎಂತವರಿಗೂ ಸಹ ಇಂತಹ ಆಪಾದನೆ ಮಾಡಿದ್ದಾರೆ ಎಂದದಾಗ ನೋವಾಗುವುದು ಸಹಜ. ಇದಕ್ಕೆ ಹೋರಾಟ ಮಾಡಬೇಕಲ್ಲವೇ. ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ ಎಂದು ಹೇಳಿದರು.
ಹೈಕೋರ್ಟ್‌ನಲ್ಲಿ ವಕೀಲರು ವಾದ ಮಾಡುವ ಸಂದರ್ಭದಲ್ಲಿ, 'ಮುಖ್ಯಮಂತ್ರಿಯವರ ಪಾತ್ರ ಏನಿದೆ ಎಂಬುದನ್ನು ಹೇಳಿ. ಈ ಬಗ್ಗೆ ಯಾರು ಹೇಳುತ್ತಿಲ್ಲವಲ್ಲ' ಎಂದು ಜಡ್ಜ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿಯವರ ಪಾತ್ರ ಏನು ಎಂಬುದು ಜಡ್ಜ್‌ಮೆಂಟ್‌ನಲ್ಲಿ ಎಲ್ಲಿಯೂ ಕಾಣಿಸಿಲ್ಲ. ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಮುಖ್ಯಮಂತ್ರಿಯವರು ಮತ್ತು ಅವರ ಕಾನೂನು ಸಲಹೆಗಾರರು ತೀರ್ಮಾನ ಮಾಡುತ್ತಾರೆ. ನಮಗೆ ನ್ಯಾಯ ಸಿಕ್ಕಿಲ್ಲ. ಸಮಾದಾನ ತಂದಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಯುತವಾದ ತೀರ್ಮಾನ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.












Click it and Unblock the Notifications