ಮೊದಲ ಪಟ್ಟಿಯಲ್ಲೇ ಬಿಜೆಪಿಗೆ ಮ್ಯಾಜಿಕ್ ನಂಬರ್; ಜೆಡಿಎಸ್- ಕಾಂಗ್ರೆಸ್ ನಡುವೆ ಮ್ಯಾಚ್ ಫಿಕ್ಸಿಂಗ್: ತೇಜಸ್ವಿ ಸೂರ್ಯ
ಬೆಂಗಳೂರು,ಏಪ್ರಿಲ್ 12: ಜೆಡಿಎಸ್- ಕಾಂಗ್ರೆಸ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಆದರೂ, ಅವು ಗೆಲ್ಲುವುದಿಲ್ಲ. ಪ್ರಗತಿಶೀಲ ಸರಕಾರವನ್ನು ನಾವು ಕೊಡಲಿದ್ದೇವೆ. ಅದು ಬಿಜೆಪಿ ಸಂಕಲ್ಪ. ನಮ್ಮ ಎಲ್ಲ ಅಭ್ಯರ್ಥಿಗಳನ್ನು ಮತದಾರರು ಆಶೀರ್ವದಿಸಲಿದ್ದಾರೆ ಎಂದು ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ರಾಜ್ಯ ವಿಧಾನಸಭೆಯಲ್ಲಿ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಸರಳ ಬಹುಮತ ಸಿಗಲಿದೆ. ಮ್ಯಾಜಿಕ್ ನಂಬರ್ 112 ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ. ಜೆಡಿಎಸ್- ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಹತಾಶೆ ಉಂಟಾಗಿದೆ. ಎರಡೂ ಪಕ್ಷಗಳ ಆತ್ಮಬಲ ಕುಸಿದಿದೆ ಎಂದು ಕಿಡಿಕಾರಿದರು.

ಪಕ್ಷ ಮತ್ತು ಮತದಾರರು ಹೊಸ ಚೈತನ್ಯ, ಹುಮ್ಮಸ್ಸಿನಿಂದ ಅಭ್ಯರ್ಥಿಗಳ ಪಟ್ಟಿಯನ್ನು ಸ್ವಾಗತ ಮಾಡಿದ್ದಾರೆ. ಆಯ್ಕೆ ಪ್ರಕ್ರಿಯೆ ಮತ್ತು ಆಯ್ಕೆಯು ಬಿಜೆಪಿ ವಿಶೇಷತೆಯನ್ನು ಮತ್ತು ಬಿಜೆಪಿ ವಿಭಿನ್ನ ಪಕ್ಷ ಎಂಬುದನ್ನು ಸಾಬೀತು ಮಾಡಿದೆ ಎಂದರು. 52 ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಅನುಭವ, ಹೊಸತನ, ಯುವಕರಿಗೆ ಅವಕಾಶ, ಶಾಸಕರ ಉತ್ತಮ ಆಡಳಿತ, ಅನುಭವವನ್ನು ಪಾರ್ಟಿಗೆ ಬಳಸುವ ಕೆಲಸ ನಡೆದಿದೆ. ಕಾರ್ಯಕರ್ತರ ಬೆಳೆಸುವಿಕೆಯ ಮುಂದಿನ ತಲೆಮಾರಿನ ಸಮರ್ಥ ನಾಯಕರ ತಯಾರಿ ಕಡೆ ಪಕ್ಷ ಗಮನ ನೀಡಿದೆ. ಪಕ್ಷದ ಕೆಲವು ಅಸಮಾಧಾನಗೊಂಡ ಹಿರಿಯರ ಜೊತೆ ನಮ್ಮ ಮುಖಂಡರು ಮಾತನಾಡುತ್ತಿದ್ದಾರೆ. ಪಕ್ಷವು ಅವರನ್ನು ವಿಶ್ವಾಸಕ್ಕೆ ಪಡೆಯಲಿದೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ಮಟ್ಟದ ಅಸಮಾಧಾನ ಇದ್ದರೂ ಪಕ್ಷದ ಕಾರ್ಯಕರ್ತರು ನಮ್ಮ ಜೊತೆಗಿದ್ದು, ಗೆಲುವು ಸಿಗಲಿದೆ ಎಂದು ತಿಳಿಸಿದರು.
ಏಕಾಏಕಿಯಾಗಿ ಪ್ಯಾರಾಚೂಟ್ ಆಗಿ ಬಂದವರಿಗೆ ಪಕ್ಷ ಅವಕಾಶ ಕೊಟ್ಟಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಮಾನದಂಡವನ್ನು ಗರಿಷ್ಠವಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದ ಅವರು, ಸಾಕಷ್ಟು ಯುವಕರಿಗೆ ಅವಕಾಶ, ಸಂಘಟನೆಯಲ್ಲಿ ಕೆಲಸ ಮಾಡಿ ಬಂದ ಅನೇಕರಿಗೆ ಅವಕಾಶ ಕೊಡಲಾಗಿದೆ. ಬ್ಯಾಟರಾಯನಪುರದಿಂದ ಹಿಂದಿನ ಯುವ ಮೋರ್ಚಾ ತಂಡದ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ದೊಡ್ಡಬಳ್ಳಾಪುರದಲ್ಲಿ ಯುವ ಮೋರ್ಚಾ ಮುಖಂಡ ಧೀರಜ್ ಮುನಿರಾಜು ಅವರಿಗೂ ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರಿನ ಗಾಂಧಿನಗರದಲ್ಲಿ ಯುವ ಮೋರ್ಚಾದ ಮುಖಂಡ ಸಪ್ತಗಿರಿ ಗೌಡರು ಚುನಾವಣೆ ಎದುರಿಸಲಿದ್ದಾರೆ. ಈ ಬಾರಿ ಹೊಸ ಧ್ವನಿಯಾಗಿ ಇವರೆಲ್ಲರೂ ಗೆಲುವು ಸಾಧಿಸುತ್ತಾರೆ. ಕಲಬುರ್ಗಿ ಚಿತ್ತಾಪುರದಲ್ಲಿ ಎಐಸಿಸಿ ಅಧ್ಯಕ್ಷರ ಮಗ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾನ್ಯ ಕಾರ್ಯಕರ್ತ ಮಣಿಕಾಂತ್ ರಾಠೋಡ್‍ರನ್ನು ಸ್ಪರ್ಧೆಗೆ ಇಳಿಸಿದೆ.
ಒಬಿಸಿ, ಲಂಬಾಣಿ ಸೇರಿ ಎಸ್‍ಸಿ ವಿವಿಧ ಸಮುದಾಯಕ್ಕೆ ಆದ್ಯತೆ ಕೊಡಲಾಗಿದೆ. ಪಾರ್ಟಿಗೆ ಹೊಸತನ, ಹೊಸ ಚೈತನ್ಯ ತರಲು, ಮುಂದಿನ ತಲೆಮಾರನ್ನು ಸಿದ್ಧಮಾಡಲು ಪಟ್ಟಿ ಆದ್ಯತೆ ನೀಡಿದೆ.
ಎಲ್ಲ ಜಾತಿ, ಉಪ ಜಾತಿಗೆ ಸಾಮಾಜಿಕ ಪ್ರಾತಿನಿಧ್ಯ ಕೊಡಲಾಗಿದೆ. ಸುಳ್ಯದಲ್ಲಿ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಇಲ್ಲಿನವರೆಗೆ ರಾಜಕೀಯ ಅವಕಾಶ ಸಿಗದ ಅತ್ಯಂತ ಸಾಮಾನ್ಯ ಜೀವನ ನಡೆಸುವ ಭಾಗೀರಥಿ ಮುರುಳ್ಯರನ್ನು ಶಾಸಕ ಅಭ್ಯರ್ಥಿಯಾಗಿ ಮಾಡಿದೆ. ಅವರ ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಕುರಿತು ಗಮನ ಸೆಳೆಯಲು ಮನವಿ ಮಾಡಿದರು. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ಎಸ್‍ಸಿ ಸಮುದಾಯದಲ್ಲೂ ಎಲ್ಲ ಜಾತಿಯವರಿಗೆ ಅವಕಾಶ ಕಲ್ಪಿಸಿದ ಪಕ್ಷ ನಮ್ಮದು. 7 ರೈಟ್, 8 ಲೆಫ್ಟ್, ಲಂಬಾಣಿ- 9, ಬೋವಿ- 5, ಆದಿದ್ರಾವಿಡ- 1 ಹೀಗೆ ಎಸ್‍ಸಿ ಸಮಾಜದ ಎಲ್ಲ ಜಾತಿ, ಉಪಜಾತಿಗೆ ನ್ಯಾಯ ಕೊಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ನೋಡಿದರೆ ವೃತ್ತಿಪರರು ಐಪಿಎಸ್, ಐಎಎಸ್ ನಿವೃತ್ತರಾದ ಭಾಸ್ಕರ ರಾವ್, ಅನಿಲ್‍ಕುಮಾರ್ ಸ್ಥಾನ ಪಡೆದಿದ್ದಾರೆ ಎಂದರು.












Click it and Unblock the Notifications