ಉಡುಪಿಯಲ್ಲಿ ಸಚಿವರ ವಿರುದ್ದ ಬಾಂಬ್ ಸಿಡಿಸಿದ ಶೋಭಾ ಕರಂದ್ಲಾಜೆ
ಉಡುಪಿ, ಅ 15: ನಗರಾಭಿವೃದ್ದಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿನಯ್ ಕುಮಾರ್ ಸೊರಕೆ ಅವರ ಮೇಲೆ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಹೊರಿಸಿ, ಸಚಿವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವ ಸೊರಕೆಯಂಥವರು ಈ ರಾಜ್ಯದ ಸಚಿವರಾಗಿರುವುದು ದುರದೃಷ್ಟಕರ. ಸೊರಕೆಯವರ ಮನೆಗೆಲಸದ ಹೆಣ್ಣುಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕರನ್ನು ತಾನೇ ರಕ್ಷಿಸಿದ್ದಾರೆ ಎಂದು ಶೋಭಾ, ಸೊರಕೆಯವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಸಚಿವರಿಗೆ ಮಹಿಳೆಯರ ಮೇಲೆ ಮತ್ತು ರೈತರ ಮೇಲೆ ಕಾಳಜಿ ಅನ್ನೋದು ಇಲ್ಲ. ಇವರ ನಾಲಗೆ ಇವರ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದು ಶೋಭಾ, ಸಚಿವರ ವಿರುದ್ದ ಕಿಡಿಕಾರಿದ್ದಾರೆ. (ತಾಕತ್ ಇದ್ರೆ ಮುಸ್ಲಿಂ ಸಂಘಟನೆ ನಿಷೇಧಿಸಿ : ಶೋಭಾ)
'ಯಡಿಯೂರಪ್ಪನವರ ಯಾತ್ರೆಗೆ ಶೋಭಾ ಚೈತನ್ಯ' ಎಂದು ಯಡಿಯೂರಪ್ಪನವರ ರೈತ ಚೈತನ್ಯ ಯಾತ್ರೆಯ ಬಗ್ಗೆ ಸಚಿವರು ಮಂಗಳವಾರ (ಅ 13) ಲೇವಡಿ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಶೋಭಾ, ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವ ಸಚಿವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ರೈತರ ಬಗ್ಗೆ ಸರಕಾರಕ್ಕಿರುವ ಕಾಳಜಿಯಿದು ಎಂದು ಟೀಕಿಸಿದ್ದಾರೆ.
ಏನಿದು ವಿನಯ್ ಕುಮಾರ್ ಸೊರಕೆ ಮೇಲಿನ ಆರೋಪ?

ಮೂರು ತಿಂಗಳ ಹಿಂದಿನ ಘಟನೆ
ಮೂರು ತಿಂಗಳ ಹಿಂದೆ ಸಚಿವ ವಿನಯ್ ಕುಮಾರ್ ಸೊರಕೆ ಮನೆಕೆಲಸದ ಹೆಣ್ಣುಮಗಳು ಕಾಲೇಜಿನಿಂದ ವಾಪಸ್ ಬರುತ್ತಿದ್ದಾಗ ಇಬ್ಬರು ಯುವಕರು ಈಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರು ಎನ್ನುವುದು ಶೋಭಾ ಆರೋಪ.

ಪುತ್ತೂರಿನ ಸೊರಕೆ
ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಸೊರಕೆಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಪ್ರಯತ್ನಿಸಿದವರನ್ನು ಸ್ಥಳೀಯರೇ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆದರೆ ಇಬ್ಬರೂ ಆರೋಪಿಗಳಿಗೆ ಖುದ್ದು ಸೊರಕೆಯವರೇ ಜಾಮೀನು ಸಿಗುವಂತೆ ಮಾಡಿ ಆರೋಪಿಗಳು ಜೈಲಿನಿಂದ ಹೊರಬರಲು ಅನುಕೂಲ ಮಾಡಿಕೊಟ್ಟಿದ್ದಾರೆಂದು ಶೋಭಾ, ಸಚಿವರ ವಿರುದ್ದ ಆರೋಪ ಹೊರಿಸಿದ್ದಾರೆ.

ಪ್ರಕರಣವನ್ನೂ ಮುಚ್ಚಿಹಾಕಿದ್ದಾರೆ
ಯಡಿಯೂರಪ್ಪನವರ ರೈತ ಚೈತನ್ಯ ಯಾತ್ರೆಯ ಬಗ್ಗೆ ಸೊರಕೆಯವರು ಕೇವಲವಾಗಿ ಮಾತನ್ನಾಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಸೊರಕೆಯವರು ರಾಜ್ಯ ಪ್ರವಾಸ ಮಾಡುತ್ತಿಲ್ಲ, ಕ್ಷೇತ್ರ ಬಿಟ್ಟು ಹೊರಗೆ ಹೋಗುತ್ತಿಲ್ಲ ಎಂದು ಶೋಭಾ, ಸೊರಕೆಯವರ ವಿರುದ್ದ ಕಿಡಿಕಾರಿದ್ದಾರೆ.

ಸಚಿವರ ಬೇಜವಬ್ದಾರಿ ಹೇಳಿಕೆ
ಸಚಿವರು ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ. ದಯವಿಟ್ಟು ಸಚಿವರು ತಮ್ಮ ಊರು ಸೊರಕೆಗೆ ವಾಪಸ್ ಹೋಗಲಿ ಎಂದು ನಾವು ಆಗ್ರಹಿಸುತ್ತೇವೆ. ಅವರ ಮನೆಯ ಹೆಣ್ಣುಮಗಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ಆರೋಪಿಗಳಿಗೆ ರಾತ್ರೋರಾತ್ರಿ ಜಾಮೀನು ಕೊಡಿಸಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

ರೈತಚೈತನ್ಯ ಯಾತ್ರೆ
ಯಡಿಯೂರಪ್ಪನವರು ರಾಜ್ಯಾದ್ಯಂತ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆ ಶೋಭಾ ಅವರ ಚೈತನ್ಯ ಕಾರಣ ಎಂದು ನಗಾರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ ಲೇವಡಿ ಮಾಡಿದ್ದರು.












Click it and Unblock the Notifications